ವಿಜಯಪುರ: ಹೋಬಳಿಯ ಮಂಡಿಬೆಲೆ ಗ್ರಾಮದಲ್ಲಿ ರಸ್ತೆ ವಿಚಾರಕ್ಕೆ ನಡೆದ ಜಗಳದಲ್ಲಿ ಓರ್ವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದ್ದು, ಮೂವರು ತೀವ್ರ ಗಾಯಗೊಂಡಿದ್ದಾರೆ.
ಗಜೇಂದ್ರ (35) ಕೊಲೆಯಾದ ವ್ಯಕ್ತಿ. ಇತರೆ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ನಂತರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.
ವರ್ಷದ ಹಿಂದೆ ಮನೆ ಮುಂದಿನ ರಸ್ತೆ ವಿಚಾರವಾಗಿ ಪಕ್ಕದ ಮನೆಯ ರಾಜಣ್ಣ ಹಾಗೂ ಗಜೇಂದ್ರ ನಡುವೆ ಗಲಾಟೆಯಾಗಿತ್ತು. ರಾಜಣ್ಣ ಮತ್ತು ಅವರ ಮಕ್ಕಳಾದ ಮೋಹನ್, ವಿಜಯ್ ಎಂಬುವವರ ಮೇಲೆ ಗಜೇಂದ್ರ ಅವರ ಕುಟುಂಬದವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಅಂದಿನಿಂದ ರಾಜಣ್ಣ, ಮೋಹನ್, ವಿಜಯ್ ಹಾಗೂ ಗಜೇಂದ್ರ ಕುಟುಂಬದ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಲು ಗುರುವಾರ ಗಜೇಂದ್ರ ಇದೇ ಗ್ರಾಮದ ಮೂರ್ತಿ ಹಾಗೂ ಪುರ ಗ್ರಾಮದ ಮಂಜುನಾಥ್, ಸುರೇಶ್ ಅವರನ್ನು ಕರೆಯಿಸಿಕೊಂಡಿದ್ದರು. ರಾತ್ರಿ ಮೋಹನ್ ಹಾಗೂ ಗಜೇಂದ್ರ ನಡುವೆ ಮತ್ತೆ ಜಗಳ ಶುರು ಆಗಿದೆ. ಜಗಳ ಪರಸ್ಪರ ಹೊಡೆದಾಟಕ್ಕೆ ತಿರುಗಿದೆ.
‘ನಾಗನಾಯಕನಹಳ್ಳಿಯಿಂದ ಕಾರಿನಲ್ಲಿ ರಾಜಣ್ಣ ಅವರ ಸಂಬಂಧಿಕರನ್ನು ಕರೆಯಿಸಿಕೊಂಡಿದ್ದರು. ಅವರು ಬಂದು ಕಾರಿನಲ್ಲೇ ಕುಳಿತಿದ್ದರು. ಮೋಹನ್, ವಿಜಯ್ ಎಂಬುವವರು ಗಜೇಂದ್ರನಿಗೆ ಹೊಡೆಯುವಾಗ ಕಾರಿನಲ್ಲಿದ್ದ ಶ್ರೀನಿವಾಸ್, ಮುಖೇಶ್, ಪ್ರದೀಪ್, ಲಿಖೀತ್, ಇತರರು ಮಾರಕಾಸ್ತ್ರಗಳನ್ನು ತೆಗೆದುಕೊಂಡು ಕಾರಿನಿಂದ ಇಳಿದು ಬಂದು ನನ್ನ ಮಗನ ಮೇಲೆ ಹಲ್ಲೆ ನಡೆಸಿದರು ಎಂದು ಮೃತ ಗಜೇಂದ್ರ ತಂದೆ ಕೃಷ್ಣಪ್ಪ ಮನವಿಯಲ್ಲಿ ತಿಳಿಸಿದ್ದಾರೆ.
ಗಜೇಂದ್ರನ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದಿದ್ದಾರೆ. ಗಜೇಂದ್ರ ಕೂಗಿಕೊಂಡು ಕೆಳಗೆ ಬಿದ್ದಿದ್ದಾನೆ. ಆಗ ಮೂರ್ತಿ, ಮಂಜುನಾಥ್, ಸುರೇಶ್ ಅವರು ಜಗಳ ಬಿಡಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಜೇಂದ್ರನನ್ನು ವಿಜಯಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದೇವನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ತೆರಳಿದಾಗ, ಅಲ್ಲಿನ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ ಎಂದು ಗಜೇಂದ್ರ ಅವರ ತಂದೆ ಕೃಷ್ಣಪ್ಪ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.