Advertisement
ರಾಜ್ಯದ ಈವರೆಗಿನ ಚುನಾವಣ ರಾಜಕಾರಣದ ಇತಿಹಾಸ ಗಮನಿಸಿದರೆ ಶೇ.33ರಷ್ಟು ಮೀಸಲಾತಿ ಮಾತಂತೂ ದೂರ ಉಳಿದಿದೆ. ಮಹಿಳಾ ಪ್ರಾತಿನಿಧ್ಯ ಮೂರು ಮತ್ತೊಂದು ಎಂಬಂತಿದೆ. ಮಹಿಳಾ ಸಶಕ್ತೀಕರಣದ ಬಗ್ಗೆ ದೊಡ್ಡದಾಗಿ ಪ್ರತಿಪಾದಿಸುವ ಎಲ್ಲ ಪಕ್ಷಗಳಲ್ಲಿ ತನ್ನ ಪ್ರಾತಿನಿಧ್ಯ ಪಡೆದುಕೊಳ್ಳುವಲ್ಲಿ ಮಹಿಳೆ ಇನ್ನೂ ಅಬಲೆಯಾಗಿಯೇ ಉಳಿದಿದ್ದಾಳೆ. ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ಕೊಡುವುದರಲ್ಲಿ ಜಿಪುಣತನ ತೋರಿಸುತ್ತವೆ. ಕೊಟ್ಟರೂ ಅವರನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ಅಷ್ಟಕ್ಕಷ್ಟೇ, ಗೆದ್ದರೆ ಅದೃಷ್ಟ. ರಾಜಕೀಯ ಪಕ್ಷಗಳ “ಗೆಲುವಿನ ಮಾನದಂಡ’ಗಳಿಂದ ಮಹಿಳೆ ಇನ್ನೂ ಗಾವುದ ದೂರ ಇದ್ದಾಳೆ ಅನ್ನುವುದು ವೇದ್ಯವಾಗುತ್ತದೆ.
Related Articles
Advertisement
ಮಹಿಳಾ ಮಣಿಗಳ ಟಿಕೆಟ್ ಲಾಬಿಬಿಜೆಪಿ
ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಹಾಲಿ ಶಾಸಕಿಯರಾದ ಶಶಿಕಲಾ ಜೊಲ್ಲೆ, ರೂಪಾಲಿ ನಾಯ್ಕ, ಕೆ. ಪೂರ್ಣಿಮಾ ಅವರಿಗೆ ಈ ಬಾರಿಯೂ ಟಿಕೆಟ್ ಖಾತರಿ ಎನ್ನಲಾಗಿದೆ. ಇದರ ಜತೆಗೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ವಿಧಾನಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ, ಪಕ್ಷದ ವಕ್ತಾರೆ ಮಾಳವಿಕಾ ಅವಿನಾಶ್, ಶಿಲ್ಪಾ ಗಣೇಶ್, ಶಾರದಾ ನಾಯಕ್ ಆಕಾಂಕ್ಷಿಗಳಾಗಿದ್ದಾರೆ. ಕಾಂಗ್ರೆಸ್
ಕಾಂಗ್ರೆಸ್‌ನಲ್ಲಿ ಹಾಲಿ ಲಕ್ಷ್ಮೀ ಹೆಬ್ಬಾಳ್ಕರ್, ಡಾ| ಅಂಜಲಿ ನಿಂಬಾಳ್ಕರ್, ಖನೀಜ್ ಫಾತೀಮಾ, ಕುಸುಮಾ ಶಿವಳ್ಳಿ , ಸೌಮ್ಯಾರೆಡ್ಡಿ, ರೂಪಕಲಾಗೆ ಟಿಕೆಟ್ ಆಬಾಧಿತ ಎನ್ನಲಾಗುತ್ತಿದೆ. ಇದರ ಜತೆಗೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಮೋಟಮ್ಮ ಅಥವಾ ಅವರ ಪುತ್ರಿ ನಯನಾ, ಬಿಬಿಎಂಪಿ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಲಾವಣ್ಯಾ ಬಲ್ಲಾಳ್ ಅವರೂ ಪ್ರಬಲ ಆಕಾಂಕ್ಷಿಗಳಾಗಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪುತ್ರಿ ಪ್ರಿಯಾಂಕಾ, ಮಾಜಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಹೆಸರುಗಳು ಕೇಳಿ ಬರುತ್ತಿವೆ. ಜೆಡಿಎಸ್
ಜೆಡಿಎಸ್‌ನ ಏಕೈಕ ಶಾಸಕಿಯಾಗಿದ್ದ ಅನಿತಾ ಕುಮಾರಸ್ವಾಮಿಯವರು ತಮ್ಮ ಮಗ ನಿಖೀಲ್ ಕುಮಾರಸ್ವಾಮಿಯವರಿಗೆ ರಾಮನಗರ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಹಾಗಾಗಿ ಅವರು ಮುಂದಿನ ಬಾರಿ ಕಣದಲ್ಲಿ ಇರುವುದಿಲ್ಲ. ಜತೆಗೆ ಹಾಸನ ಕ್ಷೇತ್ರದಿಂದ ಭವಾನಿ ರೇವಣ್ಣ ಸ್ಪರ್ಧೆ ಕುರಿತ ವಿಚಾರ ಇನ್ನೂ ಇತ್ಯರ್ಥಗೊಂಡಿಲ್ಲ. ಉಳಿದಂತೆ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಮಾಜಿ ಶಾಸಕಿ ಶಾರದಾ ಪೂರ್ಯಾನಾಯಕ್, ಭದ್ರಾವತಿಯ ಮಾಜಿ ಶಾಸಕ ದಿ| ಅಪ್ಪಾಜಿಗೌಡ ಅವರ ಪತ್ನಿ ಶಾರದಾ ಅಪ್ಪಾಜಿಗೌಡ, ದೇವದುರ್ಗ ಕ್ಷೇತ್ರದಿಂದ ಕರೆಮ್ಮ ನಾಯಕ್‌ಗೆ ಮೊದಲ ಹಂತದಲ್ಲಿ ಟಿಕೆಟ್ ಘೋಷಿಸಲಾಗಿದೆ. ಇದೇ ವೇಳೆ ಸಿಂದಗಿ ಕ್ಷೇತ್ರದಿಂದ ಟಿಕೆಟ್ ಘೋಷಿಸಿದ್ದ ಅಭ್ಯರ್ಥಿ ಅಕಾಲಿಕ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಅವರ ಪತ್ನಿಗೆ ಟಿಕೆಟ್ ಖಚಿತಪಡಿಸಲಾಗಿದೆ. ಎರಡನೇ ಹಂತದಲ್ಲಿ ಕೆಲವು ಹೆಸರುಗಳು ಕೇಳಿ ಬರುತ್ತಿವೆ. -ರಫೀಕ್ ಅಹ್ಮದ್