ಒಬ್ಬ ಮಹಾನ್ ವ್ಯಕ್ತಿ ಒಬ್ಬನಲ್ಲಿ ಕೇಳುತ್ತಾನೆ, “ನಿನಗೆ ನಮ್ಮ ದೇಶಕ್ಕೆ ಏನಾದರೂ ಸಹಾಯ ಮಾಡಬೇಕೆಂಬ ಯೋಚನೆ ಇಲ್ಲವೆ?’ ಅದಕ್ಕೆ ಅವನು, “ದೇಶ ನನಗೇನು ಮಾಡಿದೆ ಅಂತ ನಾನು ದೇಶಕ್ಕೆ ಸಹಾಯ ಮಾಡಲಿ?’ ಉತ್ತರಿಸುತ್ತಾನೆ. ಆಗ ಆ ಮಹಾನ್ ವ್ಯಕ್ತಿಯು, “ದೇಶ ನನಗೇನು ಮಾಡಿದೆ ಎನ್ನುವುದಕ್ಕಿಂತ ನಾನು ದೇಶಕ್ಕೆ ಏನು ಮಾಡಿದೆ ಎಂದು ಯೋಚಿಸು’ ಎನ್ನುತ್ತಾನೆ.
ಈಗ ನಮ್ಮ ದೇಶಕ್ಕೆ ಸ್ವಾತಂತ್ಯ ಸಿಕ್ಕಿ 70 ವರ್ಷಗಳಾಗಿವೆ. ಎಂಥ ಮಹಾತ್ಮರು ನಮ್ಮ ಸೈನಿಕರು. ದೇಶಕ್ಕೋಸ್ಕರ ಎಲ್ಲವನ್ನೂ ಅವರು ಮುಡಿಪಾಗಿಟ್ಟಿದ್ದಾರೆ.
ಈ ಮಣ್ಣಿನಲ್ಲಿ ಇಬ್ಬರು ಅತ್ಯಂತ ಶ್ರೇಷ್ಠ ವ್ಯಕ್ತಿಗಳು.ಒಬ್ಬ ರೈತ, ಮತ್ತೂಬ್ಬ ಸೈನಿಕ.
ರೈತ ತಾನು ಬೆಳೆಯುವ ಅಕ್ಕಿಕಾಳಿನ ಮೇಲೆ ತನ್ನ ಹೆಸರು ಬರೆಯಲಿಲ್ಲ. ಸೈನಿಕ ತನ್ನ ಪ್ರತಿಮೆಗಳನ್ನಾಗಲಿ, ಶಿಲೆಗಳನ್ನಾಗಲಿ ಬ್ಯಾನರ್‌ಗಳಲ್ಲಿ, ಬೀದಿಬೀದಿಗಳಲ್ಲಿ ಪ್ರತಿಷ್ಠಾಪಿಸಿಕೊಳ್ಳಲಿಲ್ಲ. ಸೈನಿಕರು ಕಣ್ಣಿಗೆ ಎಣ್ಣೆ ಬಿಡ್ಕೊಂಡು ಹಗಲು-ರಾತ್ರಿ ಎನ್ನದೆ ದೇಶವನ್ನು ಕಾಯುತ್ತಾರೆ. ಅವರಿಗೂ ಆಸೆ-ಆಕಾಂಕ್ಷೆಗಳಿರುತ್ತವೆ. ಆದರೆ, ದೇಶದ ಎದುರು ಅವೆಲ್ಲವನ್ನು ಮರೆತುಬಿಡುತ್ತಾರೆ. ದೇಶವನ್ನು ರಕ್ಷಿಸುವುದೇ ಅವರ ಆಸೆ-ಆಕಾಂಕ್ಷೆ ಆಗಿರುತ್ತದೆ.
ಅವರ ಸಾವು ಅವರ ಬೆನ್ನಹಿಂದೆಯೇ ಇರುತ್ತದೆ. ಆದರೂ ಅವರು ದೇಶಕ್ಕೋಸ್ಕರ ಪ್ರಾಣ ತ್ಯಾಗಮಾಡುತ್ತಾರೆ. ತಂದೆ-ತಾಯಿ, ಬಂಧು-ಬಳಗ ಎಲ್ಲವನ್ನೂ ಬಿಟ್ಟುಬಂದು ನನಗೆ ನನ್ನ ದೇಶವೇ ಎಲ್ಲಾ ಅಂದುಕೊಂಡಿರುತ್ತಾರೆ. ಇಂಥ ನಮ್ಮ ಸೈನಿಕರ ಬಗ್ಗೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ದುಡಿಯುತ್ತಿದ್ದಾನೆ. ಓದಿ ಒಳ್ಳೆಯ ಸಾಧನೆ ಮಾಡುತ್ತಿದ್ದಾನೆ ಅಂದರೆ ಅದಕ್ಕೆ ಕಾರಣ ನಮ್ಮ ಸೈನಿಕರು. ಯಾಕೆಂದರೆ, ದೇಶವನ್ನು ಸುತ್ತಲೂ ಕಾಯುವ ಸೈನಿಕರಿದ್ದರೆ ನಮಗೆ ಯಾವುದೇ ಭಯವಿಲ್ಲ. ಶಾಂತಿ-ನೆಮ್ಮದಿಯಿಂದ ಇರಬಹುದು.
ರೋಶ್ನಿ
ಪ್ರಥಮ ಬಿಕಾಂ, ಮಿಲಾಗ್ರಿಸ್ ಕಾಲೇಜು,
ಕಲ್ಯಾಣಪುರ