Advertisement

ಗಾಲಿ ಜನಾರ್ದನ ರೆಡ್ಡಿಗೆ 101 ಟಗರುಗಳನ್ನು ಉಡುಗೊರೆ ಕೊಡಲು ಕಾಯುತ್ತಿರುವ ಅಭಿಮಾನಿ!

08:14 PM Dec 15, 2022 | Team Udayavani |

ಗಂಗಾವತಿ: ಗಂಗಾವತಿಯಲ್ಲಿ ಮನೆ ಮಾಡಿ ಚುನಾವಣಾ ಆಖಾಡ ಸಿದ್ದಗೊಳಿಸಿಕೊಂಡಿರುವ ಬಳ್ಳಾರಿ ಗಣಿ ಧಣಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅಭಿಮಾನಿಯೊಬ್ಬ 101 ಟಗರುಗಳನ್ನು ಉಡುಗೊರೆಯಾಗಿ ನೀಡಲು ಉತ್ಸುಕರಾಗಿದ್ದು, ಡಿ.21 ರಂದು  ಮನೆಗೆ ಆಗಮಿಸುವ ರೆಡ್ಡಿಯವರಿಗೆ ಒಂದು ಟಗರನ್ನು ಕೊಡಲು ನಿರ್ಧರಿಸಿರುವುದಾಗಿ ರಡ್ಡಿ ಅಭಿಮಾನಿ ಯಮನೂರ ಪುಂಡಗೌಡ ತಿಳಿಸಿದ್ದಾರೆ.

Advertisement

ನಗರದ ಕೃಷ್ಣ ಹೋಟೇಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪುಂಡಗೌಡ, ರೆಡ್ಡಿಯವರು ಜನಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮ ಮಾಡಿದ್ದಾರೆ. ಇಡೀ ಬಳ್ಳಾರಿ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋಗಿದ್ದರು. ಹಂಪಿ ಉತ್ಸವವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಿದ ಸಂದರ್ಭದಲ್ಲಿ ವಿಜಯನಗರ ಮೂಲ ರಾಜಧಾನಿ ಆನೆಗೊಂದಿಯಲ್ಲಿಯೂ ಆಚರಣೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇದೀಗ ಕಿಷ್ಕಿಂಧಾ ಅಂಜನಾದ್ರಿಯ ಪುಣ್ಯ ಭೂಮಿ ಗಂಗಾವತಿಯಲ್ಲಿ ಶುಭ ಗಳಿಗೆಯಲ್ಲಿ ಮನೆ ಮಾಡಿ ಮುಂಬರುವ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಯಸಿರುವುದರಿಂದ ಗಂಗಾವತಿಯನ್ನು ಅಭಿವೃದ್ಧಿಯ ತಾಣವಾಗಿಸಲು ಇವರ ಅಭಿಮಾನಿಯಾಗಿ ಡಿ.21 ರಂದು ಗಂಗಾವತಿಗೆ ಆಗಮಿಸುವ ರಡ್ಡಿಯವರಿಗೆ ಒಂದು ಟಗರನ್ನು ಕಾಣಿಕೆಯಾಗಿ ನೀಡುತ್ತಿದ್ದು ಚುನಾವಣೆಗೆ ನಾಮಪತ್ರ ಸಲ್ಲಿಸಿದ ದಿನದಂದು 100 ಟಗರು ಕಾಣಿಕೆ ನೀಡಲಾಗುತ್ತದೆ ಎಂದರು.

ನಾನು ಕಳೆದ 18 ವರ್ಷಗಳಿಂದ ರೆಡ್ಡಿ ಅಭಿಮಾನಿಯಾಗಿದ್ದು ಷಡ್ಯಂತ್ರ ನಡೆಸಿ ಹೈದ್ರಾಬಾದ್ ನ ಚಂಚಲಗೂಡ ಜೈಲಿನಲ್ಲಿದ್ದಾಗ ಕ್ಷೇಮ ವಿಚಾರಣೆ ಮಾಡಲು ತೆರಳಿದಾಗ ಪೊಲೀಸರು ಅವಕಾಶ ನೀಡಿರಲಿಲ್ಲ. ರೆಡ್ಡಿ ಆಗಮನದಿಂದ ಗಂಗಾವತಿ ಕೊಪ್ಪಳ ಜಿಲ್ಲೆಯ ಅಭಿವೃದ್ಧಿಯ ಬಾಗಿಲು ತೆರೆದಂತೆ ಆಗಿದೆ. ರೆಡ್ಡಿಯವರನ್ನು ಬರೀ ದುಡ್ಡಿನಿಂದ ನೋಡದೇ ಅವರ ಮುಂದಾಲೋಚನೆಯ ಯೋಜನೆಗಳ ಕುರಿತು ಜನತೆ ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ರೆಡ್ಡಿಯವರಿಗೆ ಸೂಕ್ತ ಸ್ಥಾನಮಾನ ಜತೆಗೆ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡುವ ಅವಕಾಶ ಕಲ್ಪಿಸಿದರೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳುತ್ತಿರುವ 150 ಸ್ಥಾನಗಳು ಬಿಜೆಪಿ ಗೆಲ್ಲಲು ಸಾಧ್ಯವಾಗುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿ ಎಸ್.ಮಲ್ಲೇಶಪ್ಪ, ನಾಗರಾಜ ನಂದಿಹಳ್ಳಿ, ಗುಡ್ಡೆಕಲ್ ಹನುಮೇಶ ನಾಯಕ, ಹನುಮೇಶ ಹೊಸಳ್ಳಿ, ಬಿಜೆಪಿಯ ಶಂಬಣ್ಣ ದೊಡ್ಮನಿ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next