Advertisement
ಉಪ್ಪಿನಂಗಡಿ ಬಳಿಯ ಬಾರ್ಯ ಗ್ರಾಮದ ಸುಣ್ಣಾಜೆ ಅಣ್ಣು ಪೂಜಾರಿ ಮತ್ತು ಸುಂದರಿ ದಂಪತಿಯ ಪುತ್ರ ಕುಶಾಲಪ್ಪ ಅವರು ಮನೆ ಕಟ್ಟಿಸುತ್ತಿದ್ದು, ಅದಕ್ಕೆ ಅಭಿನಂದನ್ ಹೆಸರಿಟ್ಟಿದ್ದಾರೆ. ಕಳೆದ ತಿಂಗಳು ಭಾರತ ಮತ್ತು ಪಾಕಿಸ್ಥಾನದ ಯುದ್ಧ ವಿಮಾನಗಳ ನಡುವೆ ನಡೆದ ಸಂಘರ್ಷದಲ್ಲಿ ವಿಮಾನ ಪತನಗೊಂಡು ಪಾಕಿಸ್ಥಾನಿ ಸೈನಿಕರ ಕೈಗೆ ಸಿಕ್ಕಿದ್ದ ಭಾರತೀಯ ವಾಯು ಸೇನೆಯ ವಿಂಗ್ ಕಮಾಂಡರ್ ಅಭಿನಂದನ್, ಪಾಕಿಸ್ಥಾನಕ್ಕೆ ಯಾವುದೇ ಮಾಹಿತಿ ಬಿಟ್ಟುಕೊಡದೆ ಸಾಹಸ ಪ್ರದರ್ಶಿಸಿದ್ದರು. ಆ ಮೂಲಕ ಕೋಟ್ಯಂತರ ಭಾರತೀಯರ ಮನಗೆದ್ದಿದ್ದರು. ಹೀಗಾಗಿ, ಅವರ ಹೆಸರನ್ನೇ ತಮ್ಮ ಹೊಸ ಮನೆಗೆ ಇಡುವುದು ಸೂಕ್ತ ಎಂದು ಕುಶಾಲಪ್ಪ ಹೇಳಿದಾಗ, ಮನೆ ಮಂದಿಯೂ ಸಮ್ಮತಿಸಿದರು.
ಈಗ ಮನೆ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮನೆ ಮುಂಭಾಗದ ಗೋಡೆಯ ಮೇಲೆ ಗ್ರಾನೈಟ್‌ನಲ್ಲಿ ಅಭಿನಂದನ್ ವರ್ಧಮಾನ್ ಭಾವಚಿತ್ರ ಹಾಗೂ ಹೆಸರನ್ನು ಕೆತ್ತಿಸಲು ನಿರ್ಧರಿಸಿದ್ದಾರೆ. ಕುಶಾಲಪ್ಪ ಅವರದು ಕೃಷಿ ಕುಟುಂಬ. ಉಪ್ಪಿನಂಗಡಿಯಲ್ಲಿ ಕೆ.ಜೆ. ಪವರ್ ಲಾಂಡ್ರಿ ನಡೆಸುತ್ತಿದ್ದಾರೆ. ಎ. 10ರಂದು ಗೃಹಪ್ರವೇಶಕ್ಕೆ ನಿಗದಿಯಾಗಿದೆ. ಅಭಿನಂದನ್ ಚಿತ್ರವಿರುವ ಗೃಹಪ್ರವೇಶದ ಆಮಂತ್ರಣ ಪತ್ರವೂ ಸಿದ್ಧವಾಗಿದೆ. ಹೆತ್ತವರಲ್ಲದೆ, ಪತ್ನಿ ದೇವಿಕಾ, ಮಕ್ಕಳಾದ ಭುಕ್ಷಿತಾ ಮತ್ತು ನವೀತ್ ಈ ಮನೆಯಲ್ಲಿ ಜೀವನ ನಡೆಸಲಿದ್ದಾರೆ. ಇದು ಸೇನೆಗೆ ಸಲ್ಲಿಸುವ ಗೌರವ
ನನ್ನ ತಂದೆ ಸೇನೆ ಸೇರುವ ಬಯಕೆ ಹೊಂದಿದ್ದರು. ಅದು ಈಡೇರಲಿಲ್ಲ. ನನಗೂ ಚಿಕ್ಕಂದಿನಿಂದಲೂ ಸೇನೆಯ ಕುರಿತು ಅತೀವ ಅಭಿಮಾನ. ಆದರೆ, ಕಾರಣಾಂತರಗಳಿಂದ ಶಿಕ್ಷಣ ಮೊಟಕುಗೊಂಡಿದ್ದರಿಂದ ಸೇನೆ ಸೇರುವ ಆಸೆ ಫಲಿಸಲಿಲ್ಲ. ಈಗ ಮನೆ ಕಟ್ಟುವ ಸಂದರ್ಭ ವೀರಯೋಧ ಅಭಿನಂದನ್ ಅವರ ಶೌರ್ಯ ಸ್ಫೂರ್ತಿ ನೀಡಿದೆ. ಮನೆಗೆ ಅಭಿನಂದನ್ ಹೆಸರಿಡಲು ನಿರ್ಧರಿಸಿದೆ. ಮನೆಯವರೂ ಒಪ್ಪಿದರು. ಸೇನೆಗೆ ನಾನು ಸಲ್ಲಿಸುವ ಗೌರವ ಇದು.
– ಕುಶಾಲಪ್ಪ,
ಮನೆಯ ಮಾಲಕರು