ಹುಳಿಯಾರು: ಹೋಬಳಿಯ ಬೆಳ್ಳಾರದ ಬಳಿ ಶನಿವಾರ ಬೆಳಗ್ಗೆ ಶಾಲೆಯಿಂದ ಮನೆಗೆ ಹಿಂದಿರುಗುವಾಗ ಕಪ್ಪು ಕಾರಿನಲ್ಲಿ ಬಂದ ಕೆಲ ಅಪರಿಚಿತರು ಮಕ್ಕಳನ್ನು ಕಿಡ್ನಾಪ್ ಗೆ ವಿಫಲ ಯತ್ನ ಮಾಡಿದ್ದು, ಈ ಕುರಿತು ಮಕ್ಕಳು ನೀಡಿರುವ ಹೇಳಿಕೆ ವೈರಲ್ ಆಗಿದೆ.
ಎಂದಿನಂತೆ ಬೆಳ್ಳಾರ ಸೇತುವೆ ಬಳಿ ಇರುವ ಸರ್ಕಾರಿ ಶಾಲೆಯ ಶನಿವಾರದ ಬೆಳಗ್ಗಿನ ತರಗತಿ ಮುಗಿಸಿಕೊಂಡು ನಾಲ್ವರು ಮಕ್ಕಳು ತಮ್ಮೂರಾದ ಬೆಳ್ಳಾರ ಮೇಗಲಗೊಲ್ಲರಹಟ್ಟಿಗೆ ಹಿಂದಿರುಗಿದ್ದಾಗ ಈ ಘಟನೆ ನಡೆದಿದೆ. ಮಕ್ಕಳು ನಡೆದುಕೊಂಡು ಹೋಗುವಾಗ ಕಪ್ಪು ಕಾರನ್ನು ಮಕ್ಕಳ ಪಕ್ಕ ನಿಲ್ಲಿಸಿ, ಬುರ್ಖಾಧಾರಿಗಳಿಬ್ಬರು ಇಳಿದು ಮಕ್ಕಳ ಕೈ ಹಿಡಿದು ಎಳೆದಿದ್ದಾರೆ. ಇದಕ್ಕೆ ಮಕ್ಕಳು ಪ್ರತಿರೋಧ ತೋರಿದ್ದು, ಕೈ ಬಿಡಿಸಿಕೊಂಡು ಪಕ್ಕದ ಮುಳ್ಳಿನ ಪೊದೆಗೆ ಬಿದ್ದಿದ್ದಾರೆ.
ಇದರಿಂದ ಗಾಬರಿಗೊಂಡ ಕಾರಿನಲ್ಲಿ ಬಂದಿದ್ದ ವ್ಯಕ್ತಿಗಳು ಚಿಕ್ಕನಾಯಕನಹಳ್ಳಿ ಕಡೆ ಪರಾರಿಯಾಗಿದ್ದಾರೆ. ಮುಳ್ಳಿನ ಪೊದೆಗೆ ಬಿದ್ದ ಪರಿಣಾಮ ಲೋಹಿತ್, ಹರ್ಷಿತ್ ಎಂಬ ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ತರಚು ಗಾಯಗಳಾಗಿವೆ. ಕಾರಿನಲ್ಲಿ ಇನ್ನೂ ಮೂವರು ಮಕ್ಕಳಿದ್ದರು ಎಂದು ಮಕ್ಕಳು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ದಾರಿ ಹೋಕರಾದ ಬಸವರಾಜುಗೆ ಮಕ್ಕಳು ವಿಷಯ ಮುಟ್ಟಿಸಿದಾಗ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಕ್ಕಳಿಂದ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ, ರಾಜ್ಯ ಜೀವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಕಿರಣ್‌ಕುಮಾರ್ ಸಹ ಸ್ಥಳಕ್ಕೆ ಆಗಮಿಸಿ ಮಕ್ಕಳಿಂದ ಮಾಹಿತಿ ಪಡೆದಿದ್ದಾರೆ.
ಮುಳ್ಳಿನ ಪೊದೆ ತೆರವು ಮಾಡಿಲ್ಲ : ಬೆಳ್ಳಾರ ಮೇಗಲಗೊಲ್ಲರಹಟ್ಟಿಯಿಂದ ವಿದ್ಯಾರ್ಥಿಗಳು ಬೆಳ್ಳಾರ ಸೇತುವೆ ಹತ್ತಿರದ ಶಾಲೆಗೆ ನಿತ್ಯ 1.5 ಕಿ.ಮೀ. ನಡೆದು ಬರುತ್ತಾರೆ. ಈ ರಸ್ತೆಯ ಇಕ್ಕೆಲಗಳಲ್ಲಿ ಮುಳ್ಳಿನಗಿಡಗಳು ರಸ್ತೆಗೆ ಚಾಚಿಕೊಂಡಿವೆ. ಅದರ ಮರೆಯಲ್ಲಿ ಮಕ್ಕಳನ್ನು ಕಿಡ್ನಾಪ್ ಮಾಡಿದರೂ ಯಾರಿಗೂ ತಿಳಿಯದು. ಹಾಗಾಗಿ ಅನೇಕ ಬಾರಿ ಪಿಡಬ್ಲ್ಯುಡಿ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ತೆರವಿಗೆ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ಈಗಲಾದ್ರೂ ಎಚ್ಚೆತ್ತು ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡಗಳನ್ನು ತೆರವು ಮಾಡಲಿ ಎಂದು ಸ್ಥಳೀಯರಾದ ಬಸವರಾಜು ಹೇಳುತ್ತಾರೆ.
ಕಪ್ಪು ಮಾರುತಿ ಕಾರಿನಲ್ಲಿ ಬಂದು ಕೈ ಹಿಡಿದು ಎಳೆದರು ಎಂದು ಮಕ್ಕಳು ಹೇಳುತ್ತಿದ್ದಾರೆ. ಅದೃಷ್ಟವಷಾತ್ ಇವರಿಬ್ಬರೂ ಪಾರಾಗಿದ್ದಾರೆ. ಆದರೆ, ಅದೇ ವ್ಯಾನ್‌ನಲ್ಲಿ ಇನ್ನೂ ಮೂವರು ಮಕ್ಕಳು ಇದ್ದಾರೆ ಎಂದು ಇದೇ ಮಕ್ಕಳು ಹೇಳುತ್ತಿದ್ದಾರೆ. ರಕ್ಷಿಸಿ ಪೋಷಕರಿಗೆ ಹಿಂದಿರುಗಿಸುವಂತೆ ಈಗಾಗಲೇ ಮೇಲಧಿಕಾರಿಗಳಿಗೆ ಸೂಚಿಸಿದ್ದೇನೆ. ಬಹುಮುಖ್ಯವಾಗಿ ಮಕ್ಕಳ ಪೋಷಕರಿಗೆ ಈ ಘಟನೆ ಆತಂಕ ಮೂಡಿಸಿದ್ದು, ಘಟನೆಯ ಸತ್ಯಾಸತ್ಯತೆ ಬಯಲಿಗೆಳೆದು ಆತಂಕ ದೂರಮಾಡಬೇಕಿದೆ.
-ಕೆ.ಎಸ್.ಕಿರಣ್‌ಕುಮಾರ್, ಅಧ್ಯಕ್ಷ, ರಾಜ್ಯ ಜೈವಿಕ ಇಂಧನ ಮಂಡಳಿ.