ದಟ್ಟ ಅರಣ್ಯದಲ್ಲಿ ಕಾಲ್ಗಿಚ್ಚು ಆವರಿಸಿದಂತೆ ಕಿತ್ತಳೆ, ಕೆಂಪು ಬಣ್ಣದ ಹೂವುಗಳಿಂದ ಅಲಂಕೃತಗೊಂಡಿರುವ ಮುತ್ತುಗ ಮರವೆಂದೇ ಹೆಸರುವಾಸಿಯಾಗಿರುವ ಬ್ರಹ್ಮವೃಕ್ಷ ಮರ ಇಂದು ಕಾಣಲು ಸಿಗುವುದೇ ಅಪರೂಪವಾಗಿದೆ. ಸುಮಾರು 10ರಿಂದ 15 ಮೀ. ಎತ್ತರಕ್ಕೆ ಬೆಳೆಯುವ ಈ ಮರವು ನಮ್ಮ ಪೂರ್ವಜರ ಕಾಲದಿಂದಲೂ ಆಯುರ್ವೇದ ಔಷಧಕ್ಕೆ ಹೆಸರುವಾಸಿಯಾಗಿದೆ.
ಮುತ್ತುಗ ಮರದ ಎಲೆ ಮತ್ತು ತೊಗಟೆಯ ಹಾಲು ಆಯುರ್ವೇದದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಇದರ ಹೂವಿನ ದಳದಲ್ಲಿ ಬುಟ್ರಿನ್ ಮತ್ತು ಬುಟಿನ್ ಅಂಶವಿದೆ. ಸಾಮಾನ್ಯವಾಗಿ ಫೆಬ್ರವರಿ ಜೂನ್ ತಿಂಗಳಲ್ಲಿ ಇದರ ಹೂವುಗಳು ಅರಳಲು ಪ್ರಾರಂಭವಾಗಿ ಎಪ್ರಿಲ್- ಜೂನ್ ತಿಂಗಳ ಮಧ್ಯೆ ಹಣ್ಣು ಬಿಡುತ್ತದೆ. ಆದರೆ ಮಾನವನ ದುರಾಸೆಯ ಮಟ್ಟ ಮಿತಿಮೀರಿ ದಂತೆ ಪ್ರಕೃತಿ ಯಲ್ಲೂ ಬದಲಾ ವಣೆ ಸಹಜವಾಗಿ ಆಗುತ್ತದೆ ಎಂಬುದಕ್ಕೆ ಸಾಕ್ಷಿ ಈ ಮುತ್ತುಗ ಮರದ ಹೂ ಬಿಡುವುದರಲ್ಲಾದ ಬದಲಾವಣೆ. ಪ್ರಸ್ತುತ ಸರಿಯಾದ ಅವಧಿಗಿಂತ ಎರಡು ಮೂರು ತಿಂಗಳು ಮೊದಲೇ ಇದರ ಹೂವುಗಳು ಆರಳುತ್ತಿದೆ.
ಹಿಂದೆಲ್ಲಾ ದೇವಾಲಯದಲ್ಲಿ, ಹಬ್ಬ ಹರಿದಿನಗಳಲ್ಲಿ ಮುತ್ತುಗದ ಎಲೆಯನ್ನೇ ಸುಂದರವಾಗಿ ಜೋಡಿಸಿ, ಅನಂತರ ಅದನ್ನು ಒಣಗಿಸಿ ಊಟದ ಎಳೆಯನ್ನಾಗಿ ಉಪಯೋಗಿಸುತ್ತಿದ್ದರು. ಆದರೆ ಇಂದು ಇವು ಕಾಣಸಿಗುವುದೇ ಅಪರೂಪವಾಗಿದೆ. ಈ ಮರದ ಬೀಜ ಹಾಗೂ ಅದರ ಮೇಲಿರುವ ಹೊಟ್ಟಿನಿಂದ ವಿವಿಧ ಬಗೆಯ ಎಣ್ಣೆಯನ್ನು ತಯಾರಿಸಲಾಗುತ್ತದೆ. ಈ ಎಣ್ಣೆಯನ್ನು ಸಾಬೂನು ತಯಾರಿಕೆ ಹಾಗೂ ಹಿಂಡಿಯನ್ನು ಗೊಬ್ಬರವನ್ನಾಗಿ ಬಳಸಲಾಗುತ್ತದೆ.
ಇಷ್ಟೆಲ್ಲಾ ಪ್ರಯೋಜನಕಾರಿಯಾಗಿರುವ ಮುತ್ತುಗ ಮರವು ಇಂದು ಕಾಣಲು ಸಿಗುವುದೇ ಅಪರೂಪವಾಗಿದೆ ಎಂದರೆ ತಪ್ಪಾಗಲಾರದು. ಅರಣ್ಯ ನಾಶ, ಕೈಗಾರಿಕಾ ಅಭಿವೃದ್ಧಿ, ರಸ್ತೆ ನಿರ್ಮಾಣ, ಕಟ್ಟಡ ನಿರ್ಮಾಣ, ರೈಲು ಮಾರ್ಗದಂತಹ ಅಭಿವೃದ್ಧಿಯಲ್ಲಿ ಇಂತಹ ಹಲವಾರು ಮರಗಳ ಬಲಿಯಾಗುತ್ತಿದೆ. ಅಪರೂಪವಾದ ಈ ಮರಗಳ ಮೂಲವೇ ನಾಶವಾದರೆ ನಮ್ಮ ಆಯುರ್ವೇದ ಪದ್ಧತಿ, ಸಂಸ್ಕೃತಿ ಉಳಿಯುವುದಾದರೂ ಎಲ್ಲಿ? ಎಲ್ಲ ತಿಳಿದಿರುವ ಮಾನವ ಈಗಲಾದರೂ ಎಚ್ಚೆತ್ತುಕೊಂಡು ಮುಂದಾಗುವ ಅನಾಹುತವನ್ನು ತಡೆಯಬೇಕಿದೆ.
-ಭಾವನ ಪ್ರಭಾಕರ್
ಶಿರಸಿ