ಜೇವರ್ಗಿ: ತಾಲೂಕಿನ ಕೂಡಿ ದರ್ಗಾದಿಂದ ಕೋಬಾಳ ಗ್ರಾಮದ ವರೆಗಿನ ಮೂರು ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಮಹಿಳೆಯರು, ಮಕ್ಕಳು, ಸಾರ್ವಜನಿಕರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಕಳೆದ 2009ರಲ್ಲಿ ಅಂದಿನ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ ಅವ ಧಿಯಲ್ಲಿ ಕೋಬಾಳ ಗ್ರಾಮಕ್ಕೆ ತೆರಳುವ ಮೂರು ಕಿ.ಮೀ ರಸ್ತೆ ಡಾಂಬರೀಕರಣ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ರಸ್ತೆ ದುರಸ್ತಿಗೆ ಮುಂದಾಗದಿರುವುದರಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ.
ಮಳೆಗಾಲದಲ್ಲಿ ಕೆಸರು ಗದ್ದೆಯಾಗಿ ಮಾರ್ಪಡುತ್ತಿದೆ. ದಶಕ ಕಳೆದರೂ ಈ ರಸ್ತೆ ದುರಸ್ತಿ ಕಾಣದೇ ಬರೀ ಗುಂಡಿಗಳೇ ರಾರಾಜಿಸುತ್ತಿವೆ. ಪರಿಣಾಮ ಕೂಡಿ ದರ್ಗಾ-ಕೋಬಾಳ ನಡುವಿನ ರಸ್ತೆಯಲ್ಲಿ ನಿತ್ಯವೂ ಬೈಕ್ ಸವಾರರು ಸರ್ಕಸ್ ಮಾಡಿ ಊರು ಸೇರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ರಸ್ತೆ ಮೂಲಕ ಸರ್ಕಾರಿ ಬಸ್‌ಗಳಾಗಲಿ, ಖಾಸಗಿ ವಾಹನಗಳಾಗಲಿ ಕೋಬಾಳ ಗ್ರಾಮಕ್ಕೆ ತೆರಳುತ್ತಿಲ್ಲ. ಇದರಿಂದ ಶಾಲಾ-ಕಾಲೇಜು ಮಕ್ಕಳು, ರೈತರು, ಮಹಿಳೆಯರು, ವೃದ್ಧರು ಮೂರು ಕಿ.ಮೀ ದರ್ಗಾವರೆಗೆ ನಡೆದುಕೊಂಡೇ ಬರುವ ಸ್ಥಿತಿ ಉದ್ಬವಿಸಿದೆ.
ಕಳೆದ 12 ವರ್ಷಗಳಿಂದ ಕೋಬಾಳ ಗ್ರಾಮಕ್ಕೆ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದರೂ ಕನಿಷ್ಟ ಪಕ್ಷ ತೇಪೆ ಹಚ್ಚುವ ಕೆಲಸ ಮಾತ್ರ ಯಾರೂ ಮಾಡುತ್ತಿಲ್ಲ. ರಸ್ತೆಯ ಮಧ್ಯೆ ದೊಡ್ಡ ದೊಡ್ಡ ತಗ್ಗು ಗುಂಡಿಗಳು ಬಿದ್ದಿದ್ದು, ಅಕ್ಕ ಪಕ್ಕ ಮುಳ್ಳು ಜಾಲಿ ಕಂಟಿಗಳು ಬೆಳೆದು ರಸ್ತೆ ಕಾಣದಂತಾಗಿದೆ. ಇಷ್ಟಾದರೂ ಜಿಪಂ ಇಲಾಖೆಯ ಅ ಧಿಕಾರಿಗಳು ಇದಕ್ಕೂ ನಮಗೂ ಸಂಬಂಧವಿಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಹತ್ತು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಕಳೆದ ತಿಂಗಳಲ್ಲಿ ಕೂಡಿ ದರ್ಗಾ ಹತ್ತಿರದ ಕೋನಾಹಿಪ್ಪರಗಾ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ್ದ ಶಾಸಕ ಡಾ| ಅಜಯಸಿಂಗ್ ಅವರಿಗೆ ಕೋಬಾಳ ಗ್ರಾಮಸ್ಥರು ತಮ್ಮೂರಿಗೆ ಶಾಸಕರನ್ನು ಅದ್ಧೂರಿ ಮೆರವಣಿಗೆ ಮೂಲಕ ಬರಮಾಡಿಕೊಂಡು, ಭೀಮಾ ಪ್ರವಾಹದಿಂದ ಸಂಪೂರ್ಣ ನಲುಗಿ ಹೋಗಿದ್ದ ಈ ಗ್ರಾಮಸ್ಥರು ರಸ್ತೆ ನಿರ್ಮಾಣ ಸೇರಿದಂತೆ ಹತ್ತು ಹಲವು ಬೇಡಿಕೆಗಳ ಪಟ್ಟಿ ಶಾಸಕರಿಗೆ ಸಲ್ಲಿಸಿದ್ದರು. ಗ್ರಾಮ ವಾಸ್ತವ್ಯ ಮುಗಿದ ನಂತರ ಅಧಿಕಾರಿಗಳಾಗಲಿ, ಜನಪ್ರತಿನಿ ಧಿಗಳಾಗಲಿ ಈ ಗ್ರಾಮದ ಕಡೆ ಇಣುಕಿ ಕೂಡ ನೋಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕೂಡಲೇ ಕೋಬಾಳ ಗ್ರಾಮದ ರಸ್ತೆ ದುರಸ್ತಿಗೆ ಮುಂದಾಗದಿದ್ದಲ್ಲಿ ಬರುವ ಕೆಲವೇ ದಿನಗಳಲ್ಲಿ ತಹಶೀಲ್ ಕಚೇರಿ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ದೊಡ್ಡಪ್ಪಗೌಡ ಪಾಟೀಲ ನರಿಬೋಳ ಶಾಸಕರಾಗಿದ್ದ ಸಂದರ್ಭದಲ್ಲಿ ಈ ಗ್ರಾಮದ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಈ ರಸ್ತೆ ರಿಪೇರಿಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ರಸ್ತೆ ತುಂಬಾ ತಗ್ಗು ಗುಂಡಿಗಳು ಬಿದ್ದು ಸವಾರರು ಪರದಾಡುವಂತಾಗಿದೆ. ಈ ಭಾಗದ ಜನಪ್ರತಿನಿ ಧಿಗಳು ಕೂಡಲೇ ಹದಗೆಟ್ಟಿರುವ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೇ ಮುಂಬರುವ ಜಿಪಂ-ತಾಪಂ ಚುನಾವಣೆ ಬಹಿಷ್ಕರಿಸಬೇಕಾಗುತ್ತದೆ.
ಮಹಿಮೂದ್ ಪಟೇಲ ಕೋಬಾಳ ಗ್ರಾಮಸ್ಥ
*ವಿಜಯಕುಮಾರ ಎಸ್.ಕಲ್ಲಾ