Advertisement

ನೀರಿನ ಸಮಸ್ಯೆ ನಿವಾರಣೆಗೆ ಸಚಿವರ ಬಳಿ ನಿಯೋಗ

03:08 PM Aug 15, 2017 | |

ಚಿತ್ರದುರ್ಗ: ನಗರದಲ್ಲಿ ನೀರಿನ ಸಮಸ್ಯ ಉಲ್ಬಣಗೊಂಡಿದ್ದು, ಸಮರ್ಪಕ ನೀರು ಪೂರೈಕೆ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಬಳಿ ನಿಯೋಗ ತೆರಳಿ ಮನವಿ ಮಾಡಬೇಕು ಎಂದು ನಗರಸಭೆಯ ಬಹುತೇಕ ಸದಸ್ಯರು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು.

Advertisement

ನಗರದ ಹಳೆ ನಗರಸಭೆ ಕಚೇರಿ ಸಭಾಂಗಣದಲ್ಲಿ ಪ್ರಭಾರಿ ಅಧ್ಯಕ್ಷ ಕೆ. ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ವಿಷಯದ ಚರ್ಚೆ ಗಂಭೀರ ಸ್ವರೂಪ ಪಡೆಯಿತು. ಕೆಲ ಸದಸ್ಯರು ಸಚಿವರ ಪರವಾಗಿ, ಹಲವರು ಶಾಸಕರ ಪರವಾಗಿ ಮಾತನಾಡಿದರು. ಆಗ ಇನ್ನುಳಿದ ಸದಸ್ಯರು ಯಾರೂ ಯಾರ ಪರ-ವಿರೋಧವಾಗಿ ನಿಲ್ಲಬೇಡಿ. ನಗರದ ನೀರಿನ ಸಮಸ್ಯೆ ನಿವಾರಣೆ ಆಗಬೇಕು. ಆದ್ದರಿಂದ ಪಕ್ಷ ಭೇದ ಮರೆತು ಸಮರ್ಪಕ ನೀರು ಪೂರೈಕೆ ಬಗ್ಗೆ ಅಧ್ಯಕ್ಷರು, ಆಯುಕ್ತರು ಚಿಂತನೆ ನಡೆಸಬೇಕು ಎಂದು ತಾಕೀತು ಮಾಡಿದರು.

ಸದಸ್ಯ ಬಿ. ಕಾಂತರಾಜ್‌ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ. ಅದನ್ನು ಬಿಟ್ಟು ಸಭೆಗೆ ಅಡ್ಡಿಪಡಿಸುವವರನ್ನು ಹೊರಗೆ ಹಾಕಿ ಎಂದು ಆಗ್ರಹಿಸಿದರು. ಹಿರಿಯ ಸದಸ್ಯ ಮಹಮ್ಮದ್‌ ಅಹಮ್ಮದ್‌ ಪಾಷಾ ಮಾತನಾಡಿ, ಸಭಾ ನಡವಳಿಯಲ್ಲಿರುವ ವಿಷಯ ಬಿಟ್ಟು ಬೇರೆ ವಿಷಯದ ಬಗ್ಗೆ ಚರ್ಚೆ ನಡೆದರೆ ಹೊರನಡೆಯುವುದಾಗಿ ಗುಡುಗಿದರು. 

ಶಾಸಕರು ನಗರದಲ್ಲಿ ಕೊರೆಸಿರುವ ಕೊಳವೆಬಾವಿಗಳ ಬಗ್ಗೆ ಮಾಹಿತಿ ನೀಡುವಂತೆ ಕಳೆದ 3-4 ಸಭೆಗಳಿಂದಲೂ ಹೇಳುತ್ತಿದ್ದೇನೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ  ಸಮರ್ಪಕ ನೀರು ಪೂರೈಕೆ ನಗರಸಭೆಗೆ ಮಾತ್ರ ಸೀಮಿತವೇ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಜಿಲ್ಲಾಡಳಿತಕ್ಕೆ ಇದರ ಜವಾಬ್ದಾರಿ ಇಲ್ಲವೇ ಎಂದು ಪ್ರಶ್ನಿಸಿದರು. 

ನೀರು ಪೂರೈಕೆ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಗಮನ ನೀಡುತ್ತಿಲ್ಲ. ಆದ್ದರಿಂದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವುದಾಗಿ ಕಾಂತರಾಜ್‌ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಎಚ್‌.ಕೆ. ಖಾದರ್‌ ಖಾನ್‌, ಸ್ವಾತಂತ್ರ್ಯ ದಿನಾಚರಣೆಗೆ ತನ್ನದೇ
ಆದ ವೈಶಿಷ್ಟ, ಗೌರವವಿದೆ. ಸಚಿವರ ಧ್ವಜಾರೋಹಣಕ್ಕೆ ಅಡ್ಡಿಪಡಿಸುವುದು ಬೇಡ, ಸಚಿವರು ಆ ಸ್ಥಳಕ್ಕೆ ಹೋಗುವ ಮೊದಲು ಘೇರಾವ್‌ ಹಾಕೋಣ ಎಂದರು. ಪ್ರಭಾರಿ ಅಧ್ಯಕ್ಷ ಕೆ. ಮಲ್ಲೇಶಪ್ಪ ಮಾತನಾಡಿ, ನಗರಸಭೆಯ ಎಲ್ಲ ವಾರ್ಡ್‌ಗಳಿಗೆ ಟ್ಯಾಂಕರ್‌ ನೀರು ಸರಬರಾಜು ಮಾಡುವ ಮೂಲಕ ನೀರಿನ ಅಭಾವವನ್ನು ಸ್ವಲ್ಪ ಮಟ್ಟಿಗೆ ನೀಗಿಸಲಾಗುತ್ತಿದೆ. ನಗರದ ನೀರಿನ ಸಮಸ್ಯೆ ಬಗ್ಗೆ ಶಾಸಕರು ಗಮನ ಹರಿಸುತ್ತಿಲ್ಲ, ಹಾಗಾಗಿ ಜಿಲ್ಲಾ ಉಸ್ತುವಾರಿ
ಸಚಿವರನ್ನು ಖುದ್ದು ಭೇಟಿ ಮಾಡಿ ವಿಶೇಷ ಅನುದಾನ ನೀಡುವಂತೆ ಮನವಿ ಮಾಡೋಣ. ನೂತನ ಜಿಲ್ಲಾಧಿಕಾರಿ ಬಂದ ನಂತರ ಬಹುತೇಕ ಸದಸ್ಯರು ಅವರ ಬಳಿ ಹೋಗಿ ನಗರದ ನೀರಿನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದ್ದೇವೆ ಎಂದು ತಿಳಿಸಿದರು.

Advertisement

ಆರೋಪ ಬಿಟ್ಟು ಕೆಲಸ ಮಾಡಿ…
ಕೊಳವೆಬಾವಿ ಕೊರೆಸಿ ತಿಂಗಳುಗಟ್ಟಲೆ ಪೈಪ್‌ಲೈನ್‌ ಹಾಕಿಸುವುದಿಲ್ಲ, ತುರ್ತಾಗಿ ಸಂಪರ್ಕ ಕಲ್ಪಿಸಿದರೆ ಟ್ಯಾಂಕರ್‌ ನೀರು ಸರಬರಾಜು ಮಾಡುವ ಆರ್ಥಿಕ ಹೊರೆ ತಪ್ಪಲಿದೆ ಎಂದು ಸದಸ್ಯರಾದ ರವಿಶಂಕರ್‌ಬಾಬು, ಶ್ಯಾಮಲಾ, ಶಾಂತಕುಮಾರಿ, ಸೈಯ್ಯದ್‌ ನಸ್ರುಲ್ಲಾ, ತಿಪ್ಪೇಸ್ವಾಮಿ ಮತ್ತಿತರರರು ಸಲಹೆ ನೀಡಿದರು. ನಗರಸಭೆ ಅಧ್ಯಕ್ಷರಿಗೆ ಶಾಸಕರಿಗಿಂತ ಹೆಚ್ಚು ಅಧಿ ಕಾರ ಇದೆ. ಆದ್ದರಿಂದ ಪದೇ ಪದೇ ಶಾಸಕರು, ಸಚಿವರ ಬಗ್ಗೆ ದೂರುವುದನ್ನು ನಿಲ್ಲಿಸಿ. ನಿಮಗೆ ಇಚ್ಛಾಶಕ್ತಿ ಇಲ್ಲ. ನಮಗೆ ಜನರಿಗೆ ಸಮರ್ಪಕ ನೀರು ಪೂರೈಕೆ ಮಾಡಲು ಆಗುತ್ತಿಲ್ಲ ಎಂಬ ನೋವಿದೆ. ಈ ಬಗ್ಗೆ ನೀವು ಪ್ರಾಮಾಣಿಕ ಪ್ರಯತ್ನವನ್ನೇ ಮಾಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕೆ. ಮಲ್ಲೇಶಪ್ಪ, ನೀವು ಬರೀ ರಾಜಕೀಯ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು. ಆಗ ಸದಸ್ಯ ಸೈಯ್ಯದ್‌ ನಸ್ರುಲ್ಲಾ ಮಾತನಾಡಿ, ನೀರಿನ ಸಮಸ್ಯೆ ನಿವಾರಣೆಗೆ ಸದಸ್ಯರ ಮಧ್ಯೆ ಹೊಂದಾಣಿಕೆ ಅಗತ್ಯ. ಕಿತ್ತಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ಈಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಚರ್ಚೆ ಆರೋಗ್ಯಕರವಾಗಿರಲಿ. ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಕೆಲಸ ಮಾಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next