ಹೊಸಪೇಟೆ: ನಗರದಲ್ಲಿ ಒಳಚರಂಡಿ ಹಾಗೂ ಕುಡಿಯುವ ನೀರಿನ ಯೋಜನೆ ಆರಂಭವಾಗಿ ದಶಕ ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ 56 ಕೋಟಿ ರೂ.ವೆಚ್ಚದ ನಗರಸಭೆ ಎಡಿಬಿ ಯೋಜನೆ ಹಳ್ಳ ಹಿಡಿದಿದೆ.
ಕಳೆದ 2012ರಲ್ಲಿ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ 2022 ಕಳೆಯುತ್ತಿದ್ದರೂ ಇನ್ನೂ ಕಾಮಗಾರಿ ಪೂರ್ಣಗೊಳ್ಳುವ ಯಾವುದೇ ಲಕ್ಷಣ ಕಂಡು ಬರುತ್ತಿಲ್ಲ. ಈ ನಡುವೆ ಕಾಮಗಾರಿ ಪೂರ್ಣಕ್ಕೆ ಇನ್ನೆರಡು ವರ್ಷವಾದರೂ ಆಗಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಒಪ್ಪಂದಂತೆ ಗುತ್ತಿಗೆದಾರರು ಕಾಮಗಾರಿಯನ್ನು ಪೂರ್ಣಗೊಳಿಸಿದ್ದರೆ, ಇಷ್ಟೊತ್ತಿಗಾಗಲೇ ನಗರದ ಎಲ್ಲ ವಾರ್ಡ್‌ಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆ ಸರಿಯಾಗಿ ಇರುತ್ತಿತ್ತು. ಆದರೆ ನಗರಸಭೆ ಅಧಿಕಾರಿಗಳ ಅಸಡ್ಡೆ, ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಯಿಂದ ಸರ್ಕಾರದ ಜನಪ್ರಿಯ ಯೋಜನೆ ಹಳ್ಳ ಹಿಡಿದಿದೆ. ನಗರದ ಕೆಲ ವಾರ್ಡ್‌ಗಳು ಹೊರತುಪಡಿಸಿ ಬಹುತೇಕ ವಾರ್ಡುಗಳಲ್ಲಿ 24/7 ಕುಡಿಯುವ ನೀರಿನ ಯೋಜನೆ ಕಾಮಗಾರಿ ಅಪೂರ್ಣಗೊಂಡಿದೆ.
ಅರಬರೆ ಕಾಮಗಾರಿ ಪರಿಣಾಮದಿಂದ ಕುಡಿಯುವ ನೀರು ಹಾಗೂ ಒಳಚರಂಡಿ ಪೈಪ್‌ಲೈನ್‌ಗಳು ಒಡೆದು ಹಾಳಾಗಿವೆ. ಇದರ ಜೊತೆಯಲ್ಲಿ ರಸ್ತೆಗಳು ಹಾಳಾಗಿವೆ. ಇದರಿಂದ ಚರಂಡಿ ನೀರು ರಸ್ತೆಯಲ್ಲಿ ಹರಿದು ಸಂಗ್ರಹವಾಗಿ ಗಬ್ಬು ನಾರುತಿದೆ. ಇದು ಹಲವು ರೋಗ-ರುಜಿನಗಳಿಗೆ ಕಾರಣವಾಗುತ್ತಿದೆ.
Related Articles
2008ರಲ್ಲಿ ನಗರಸಭೆ ಯೋಜನೆ: ನಗರದಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಪೈಪ್‌ಲೈನ್ ಗಳನ್ನು ಅಳವಡಿಸಲು 2008ರಲ್ಲಿ ನಗರಸಭೆ ಯೋಜನೆ ಸಿದ್ಧಪಡಿಸಿತ್ತು. ಎಡಿಬಿ ಯೋಜನೆಯಡಿಯಲ್ಲಿ 100 ಕೋಟಿ ರೂ.ಗಳನ್ನು ಮಂಜೂರು ಮಾಡಲು ಸರ್ಕಾರಕ್ಕೆ ಯೋಜನಾ ವರದಿಯನ್ನು ಸಲ್ಲಿಸಿತ್ತು.
ಆದರೆ ನಗರಸಭೆ ಆದಾಯದ ಪ್ರಮಾಣದ ಪರಿಗಣಿಸಿ, 2010ರಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ಮತ್ತು ರಸ್ತೆ ಕಾಮಗಾರಿಗಾಗಿ 56 ಕೋಟಿ ರೂ. ಸರ್ಕಾರ ಮಂಜೂರು ಮಾಡಿತ್ತು. ಈಗ ಕಾಮಗಾರಿ ಆರಂಭವಾಗಿ 10 ವರ್ಷಗಳು ಕಳೆದರೂ ಪೂರ್ಣಗೊಳ್ಳದೇ ಸರ್ಕಾರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅಲ್ಲಿಲ್ಲಿ ಕುಡಿಯುವ ನೀರು ಪೂರೈಕೆಗೆ ಅಳವಡಿಸಿರುವ ಪೈಪ್ ಮತ್ತು ಮನೆಗಳಿಗೆ ಅಳವಡಿಸಿರುವ ಮೀಟರ್‌ಗಳು ತುಕ್ಕು ಹಿಡಿದು ಕೆಟ್ಟು ನಿಂತಿವೆ.
ಜಿಲ್ಲಾ ಕೇಂದ್ರ: ಹೊಸಪೇಟೆ ಜಿಲ್ಲಾ ಕೇಂದ್ರವಾಗಿದೆ. ನಗರಸಭೆಯನ್ನು ನಗರಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸಚಿವ ಆನಂದ್ ಸಿಂಗ್ ಅವರು ಸಂಕಲ್ಪ ಮಾಡಿದ್ದಾರೆ. ಇದರ ನಡುವೆಯೂ ಹೊಸಪೇಟೆ ನಗರದ ಬಹುತೇಕ ವಾರ್ಡ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿರುವುದು ವಿರ್ಪಾಯಾಸದ ಸಂಗತಿಯಾಗಿದೆ. ಶೀಘ್ರವೇ ಎಡಿಬಿ ಯೋಜನೆ ಪೂರ್ಣಗೊಳಿಸಿ, ನಾಗರಿಕರ ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು
ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.
ತರಾಟೆ: ಕಳೆದ 10 ವರ್ಷದಿಂದ ನಡೆಯುತ್ತಿರುವ ಎಡಿಬಿ ಕಾಮಗಾರಿ ಪೂರ್ಣಗೊಂಡಿಲ್ಲ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, ನಾಗರಿಕರಿಗೆ ಸಮರ್ಪಕ ಕುಡಿಯುವ ನೀರು, ಒಳಚರಂಡಿ ಹಾಗೂ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ಕಳೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು, ಸಂಬಂಧಿಸಿದ ಯೋಜನಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
*ಪಿ. ಸತ್ಯನಾರಾಯಣ