ಬೆಂಗಳೂರು: ವಿಧಾನಸಭೆ, ಪರಿಷತ್‌ಗಳಲ್ಲಿ ವಿಚಾರವಾದಿಗಳ ಕೊರತೆಯಿಂದ ನಾಡು, ನುಡಿ, ಸರ್ಕಾರಿ ಶಾಲೆಗಳ ಸ್ಥಿತಿಗತಿ ಕುರಿತು ಗಂಭೀರ ಚರ್ಚೆಗಳಾಗುತ್ತಿಲ್ಲ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಬೇಸರ ವ್ಯಕ್ತಪಡಿಸಿದರು.
ಸಪ್ನ ಬುಕ್ ಹೌಸ್ ಹಾಗೂ ಕರ್ನಾಟಕ ವಿಕಾಸ ರಂಗ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂತೋಷ ಹಾನಗಲ್ಲ ಸಂಪಾದಿಸಿದ “ಸದನದಲ್ಲಿ ಸಿದ್ದಲಿಂಗಯ್ಯ; ನೆಲ ಕನ್ನಡ ನುಡಿ ಕನ್ನಡ’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶತಮಾನದ ಇತಿಹಾಸವಿರುವ ಕರ್ನಾಟಕ ವಿಧಾನ ಪರಿಷತ್ ಒಂದು ಕಾಲದಲ್ಲಿ ಗಂಭೀರ ವಿಚಾರಗಳ ಚರ್ಚೆಗೆ ವೇದಿಕೆಯಾಗಿತ್ತು. ನಾಡಿನ ಜನರ ಧ್ವನಿಯಾಗಿ ಕೆಲಸ ಮಾಡುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಹಳೆಯ ಸ್ವರೂಪ ಮರೆಯಾಗಿದೆ ಎಂದು ಹೇಳಿದರು.
ವಿಧಾನ ಸಭೆಯಲ್ಲಿ ಚರ್ಚೆಯಾಗುವ ವಿಷಯಗಳೇ ವಿಧಾನ ಪರಿಷತ್‌ನಲ್ಲೂ ಚರ್ಚೆಯಾಗಿ ಕಾಲಹರಣವಾಗುತ್ತಿದೆ. ಇದಕ್ಕೆ ಕಾರಣ ವಿಧಾನ ಪರಿಷತ್ತಿನಲ್ಲಿ ಚಿಂತಕರು, ವಿಚಾರವಾದಿಗಳು, ಹೋರಾಟಗಾರರ ಕೊರತೆ, ಎಂ.ಸಿ.ನಾಣಯ್ಯ, ಸಿದ್ದಲಿಂಗಯ್ಯ ಒಳಗೊಂಡು ಅನೇಕರು ವಿಧಾನಪರಿಷತ್ತಿನಿಂದ ಹೊರಗುಳಿದಿರುವುದು ಕಾರಣ ಎಂದರು.
ಹೋರಾಟದ ಮೆಲಕು:ಹಿರಿಯ ಕವಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ಸದನದಲ್ಲಿ ಯಾರಾದರೂ ಆಂಗ್ಲ ಭಾಷೆ ಮಾತನಾಡಿದ ಕೂಡಲೇ ನಾನು ಎದ್ದು ನಿಂತು ಕನ್ನಡ ಮರೆಯಾಗುತ್ತಿದೆ. ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡ, ಏಕೀಕರಣ ಹೋರಾಟಕ್ಕೆ ಅದರ ಧ್ಯೇಯಕ್ಕೆ ಬೆಲೆಯಿಲ್ಲವೇ ಎಂದು ಘೋಷಣೆ ಕೂಗುತ್ತಿದೆ. ನನಗೆ ಬೆಂಬಲ ಕೊಡಲೆಂದೇ ಪ್ರತಿ ಕಲಾಪದಲ್ಲೂ ಸದಸ್ಯ ಬಳಗ ಇರುತ್ತಿತ್ತು.
ಆ ಬಳಗವು ಆಂಗ್ಲ ಭಾಷೆ ಮಾತನಾಡಿದ ಸದಸ್ಯರಿಗೆ ನೇರವಾಗಿ ಆಡು ಭಾಷೆಯಲ್ಲಿಯೇ “ಇಂಗ್ಲೆಂಡಿನಿಂದ ಇಳಿದುಬಂದಿದ್ದೀಯಾ? ನೀನೇನು ಬ್ರಿಟಿಷರ ಕೊನೆಯ ತುಂಡಾ? ಎಂದೆಲ್ಲ ಹೀಯಾಳಿಸಿ ನನಗೆ ಬೆಂಬಲ ನೀಡುತ್ತಿದ್ದರು ಎಂದು ಸ್ಮರಿಸಿಕೊಂಡರು. ಲೇಖಕಿ ಡಾ.ವಸುಂಧರಾ ಭೂಪತಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಉತ್ತಮರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಾಜಕೀಯ ಪ್ರಜ್ಞೆ ಹೊಂದಿರಬೇಕಾಗುತ್ತದೆ ಎಂದು ಹೇಳಿದರು.