Advertisement

UV Fusion: ಅನಾಹುತಕಾರಿ ಮಾನವ

04:02 PM Sep 07, 2024 | Team Udayavani |

ಮಾನವ ಈ ಪ್ರಪಂಚಕ್ಕೆ ಕಾಲಿಟ್ಟು ಸುಮಾರು ನಲವತ್ತು ಸಾವಿರ ವರ್ಷಗಳಾಗಿವೆ ಹಾಗೂ ಅರಣ್ಯದಿಂದ ನಾಡಿಗೆ ಬಂದು ಮೂವತ್ತಾರು ಸಾವಿರ ವರ್ಷಗಳಾಗಿದೆ ಎಂದು ಅಂದಾಜಿಸಲಾಗಿದೆ. ಮಾನವರ ಕಾಲಿಗೆ ಚಪ್ಪಲಿ ಬಂದು ಸುಮಾರು 400 ವರ್ಷಗಳೇ ಕಳೆದಿದೆ. ಮಾನವ ಇತ್ತೀಚಿನ ನಲವತ್ತು ವರ್ಷದಲ್ಲಿ ಪರಿಸರಕ್ಕೆ ಮಾಡಿದಷ್ಟು ಹಾನಿ ಇಷ್ಟೂ ವರ್ಷಗಳಲ್ಲಿ ಆಗಿಲ್ಲವೆಂದು ಸಹ ಅಂದಾಜಿಸಲಾಗಿದೆ.

Advertisement

ಎಲ್ಲ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯನಿಗೆ ಬುದ್ಧಿ ಶಕ್ತಿ ಅಧಿಕ ಎಂಬ ವಾದವಿದೆ. ಆದರೆ ಮಾನವನಿಗೆ ಎಷ್ಟು ಬುದ್ಧಿ ಶಕ್ತಿ ಅಧಿಕವೋ ಅಷ್ಟೇ ಸ್ವಾರ್ಥಿ ಕೂಡ ಹೌದು. ಪ್ರಕೃತಿಯಲ್ಲಿರುವ ಎಲ್ಲ ಪ್ರಾಣಿಗಳ ಲೆಕ್ಕಾಚಾರ ನೋಡಿದರೆ ಹೆಚ್ಚು ಸ್ವಾರ್ಥಿ ಮತ್ತು ಪ್ರಕೃತಿಗೆ ಅತಿಯಾಗಿ ಹಾನಿ ಉಂಟುಮಾಡುವ ಪ್ರಾಣಿ ಯಾವುದೆಂದರೆ ಅದು ಮನುಷ್ಯನೇ ಎನ್ನುವುದರಲ್ಲಿ ಎರಡು ಮಾತಿಲ್ಲ.

ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನವೀನ ಮಾದರಿಯ ಕಟ್ಟಡಗಳನ್ನು ನಿರ್ಮಿಸಲು ಕಡಿಯುವ ಮರ ಗಿಡಗಳಿಗೆ ಲೆಕ್ಕವಿಲ್ಲ. ಪ್ರಪಂಚದಲ್ಲಿ ಪ್ರತೀ ನಿಮಿಷಕ್ಕೆ ಎಷ್ಟೋ ಎಕರೆ ಕಾಡುಗಳು ನಾಶವಾಗುತ್ತಿವೆ. ಮನುಷ್ಯ ಈ ರೀತಿಯಾಗಿ ಮರ ಕಡಿದುದರ ಪರಿಣಾಮವಾಗಿ ಇವತ್ತು ಶುದ್ಧ ತಂಪು ಗಾಳಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಪ್ರಪಂಚದಲ್ಲಿ ವಾಸಿಸುವ ಸಕಲ ಚರಾ-ಚರ ಜೀವಿಗಳ ನೆಲೆ ಕಷ್ಟದಲ್ಲಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ.

ಪ್ಲಾಸ್ಟಿಕ್‌ ಸುಟ್ಟು ಅದರಿಂದ ಬಂದಂತಹ ಹೊಗೆಯ ಪರಿಣಾಮವಾಗಿ ಒಜೋನ್‌ ಪದರವು ತೆಳುವಾಗಿ ಅದರಲ್ಲಿ ದಿನದಿಂದ ದಿನಕ್ಕೆ ರಂದ್ರಗಳು ಹೆಚ್ಚುತ್ತಿವೆ. ಓಜೋನ್‌ ಪದರದಲ್ಲಿ ಉಂಟಾದ ರಂಧ್ರಗಳ ನಡುವಿನಿಂದಾಗಿ ಸೂರ್ಯನ ನೇರಳಾತೀತ ಕಿರಣಗಳು ನೇರವಾಗಿ ಭೂಮಿಗೆ ಬೀಳುತ್ತಿವೆ. ಮನುಷ್ಯನ ದುಷ್ಕೃತ್ಯಗಳಿಂದಾಗಿ ಗಾಳಿಯೂ ಮಲಿನಗೊಳ್ಳುತ್ತಿದೆ. ಮಾಡಿದ ದುಷ್ಕರ್ಮದ ಫಲವಾಗಿ ಆತನೇ ಇವತ್ತು ಎಲ್ಲ ರೀತಿಯ ಕಷ್ಟಗಳನ್ನು ಅನುಭವಿಸುತ್ತಿದ್ದಾನೆ. ಇದು ಪ್ರಕೃತಿಯು ಮನುಷ್ಯನಿಗೆ ಕೊಡುವ ಶಿಕ್ಷೆ ಅಲ್ಲದೆ ಬೇರೇನೂ ಅಲ್ಲ ಎನ್ನಬಹುದು.

ಭೂಮಿಯ ಆಳಕ್ಕೆ ಬೋರ್ವೆಲ್‌ಗ‌ಳನ್ನು ಇಳಿಸಿ ಭೂಮಿಗೆ ನೋವು ಉಂಟು ಮಾಡುತ್ತಿದ್ದೇವೆ. ತಂತ್ರಜ್ಞಾನಗಳು ಹೆಚ್ಚಾದಂತೆಲ್ಲ ಮನುಷ್ಯನ ಮನುಷತ್ವವೇ ಕಳಚಿ ಹೋಗುತ್ತಿವೆ. ಇಂದಿನ ಕಾಲದಲ್ಲಿ ಮನುಷ್ಯ ತನ್ನ ಸುಖಕ್ಕಾಗಿ ಯಾರನ್ನು ಬೇಕಾದರೂ ಏನೂ ಮಾಡಬಲ್ಲನು ಎನ್ನುವಂತಾಗಿದೆ. ತನ್ನ ಸುಖವೊಂದನ್ನು ಬಿಟ್ಟರೆ ಮುಂದಿನ ನವ ಪೀಳಿಗೆಗೆ ಈ ಪರಿಸರ ಬೇಕು ಎಂಬ ಪ್ರಜ್ಞೆ ಇಲ್ಲದಂತಾಗಿದೆ. ಮಾನವನು ತನಗೆಬೇಕಾಗಿ ಯಾವ ಪ್ರಾಣಿಗಳನ್ನು ಬೇಕಾದರೂ ಕೊಲ್ಲಬಲ್ಲನು. ಪ್ರಾಣಿಗಳನ್ನು ಕೊಂದು ಚರ್ಮವನ್ನು ಸೀಳಿ ಒಣಗಿಸಿ ಅದನ್ನು ಮಾರಾಟ ಮಾಡಿ ಹಣವನ್ನು ಸಂಪಾದಿಸುತ್ತಾನೆ.

Advertisement

ಪ್ರಕೃತಿದತ್ತವಾಗಿ ಇರುವುದೆಲ್ಲವನ್ನು ನಾಶ ಮಾಡಿ ಕೃತಕವಾಗಿ ನಿರ್ಮಿಸುತ್ತಿದ್ದಾನೆ. ಇನ್ನಾದರೂ ಮನುಷ್ಯ ಮುಕ್ತ ಹೃದಯದ ಒಡೆಯನಾದರೆ ಪ್ರಕೃತಿಯ ಸೊಬಗನ್ನು ತಿಳಿದು ಬದುಕಲು ಸಾಧ್ಯ.

 ಕಾವ್ಯಶ್ರೀ ಎಸ್‌.

ಸಾಮೆತ್ತಡ್ಕ ಸ.ಪ್ರ.ದ.ಮ. ಕಾಲೇಜು

ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next