ಕೆಂಗೇರಿ: ಬೆಳೆ ನಷ್ಟ, ಬರ ಮುಂತಾದ ಪ್ರಕೃತಿ ವಿಕೋಪ ಕಾರಣಗಳಿಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಲುಕುತ್ತಿರುವ ರೈತರು ಜೀವನ ಕ್ರಮ ಉತ್ತಮಪಡಿಸಿಕೊಳ್ಳಲು ಹೈನುಗಾರಿಕೆ ಉತ್ತಮ ಪರ್ಯಾಯ ಮಾರ್ಗವಾಗಿದ್ದು ಆರ್ಥಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಪಂಚಲಿಂಗಯ್ಯ ತಿಳಿಸಿದರು.
ಬಮೂಲ್ ಟ್ರಸ್ಟ್ ವತಿಯಿಂದ ತಾವರೆಕೆರೆ ಹೋಬಳಿ ಗಾಣಕಲ್ಲು ಹಾಲು ಉತ್ಪಾದಕ ಸಹಕಾರ ಸಂಘದ ವ್ಯಾಪ್ತಿಯ ಪೆದ್ದನಪಾಳ್ಯ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಘಟಕದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದ ನಾಗರಿಕರ ಆರೋಗ್ಯ ಸುಧಾರಣೆಗಾಗಿ ಆದ್ಯತೆ ಮೇರೆಗೆ ಶುದ್ಧ ಕುಡಿಯುವ ನೀರು ಘಟಕವನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗಾಗಿ ರಿಯಾಯಿತಿ ದರದಲ್ಲಿ ಚಾಪ್ ಕಟರ್, ಹಾಲು ಕರೆಯುವ ಯಂತ್ರ ಹಾಗೂ ರಸಮೇವು ತೊಟ್ಟಿ ನಿರ್ಮಾಣಕ್ಕೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ ಎಂದರು. ಬಮೂಲ್ ಟ್ರಸ್ಟ್‌ವತಿಯಿಂದ ಉತ್ಪಾದಕ ಸಹಕಾರ ಸಂಘದ ಸದಸ್ಯರ ಕುಟುಂಬದ ಮಕ್ಕಳ ವಿದ್ಯಾಭ್ಯಾಸ ಹಾಗೂ ಉನ್ನತ ಶಿಕ್ಷಣದ ಅಗತ್ಯತೆಗಾಗಿ ಆರ್ಥಿಕ ಸಹಕಾರ ನೀಡಲಾಗುತ್ತಿದೆ ಎಂದರು.
ಬೆಂಗಳೂರು ದಕ್ಷಿಣ ಹಾಲು ಉತ್ಪಾದಕ ವಿಭಾಗದ ಉಪವ್ಯವಸ್ಥಾಪಕ ಡಾ.ಗೋಪಾಲಗೌಡ ಮಾತನಾಡಿ, ಕೆಎಂಎಫ್ ಹಾಗೂ ಬಮೂಲ್ ಟ್ರಸ್ಟ್ ವತಿಯಿಂದ ಹೈನುಗಾರಿಕೆಯು ಆರ್ಥಿಕವಾಗಿ ಮುನ್ನಡೆಯಲು ಸಹಕಾರಿಯಾಗುವ ಉದ್ಯಮವಾಗಿದ್ದು ವಿಶೇಷವಾಗಿ ಗ್ರಾಮೀಣ ಪ್ರದೇಶದ ರೈತರು ಈ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಪರ್ಯಾಯವಾಗಿ ಆದಾಯ ಮೂಲ ಹೆಚ್ಚಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ವಿಸ್ತರಣಾಧಿಕಾರಿ ಚಂದ್ರಶೇಖರ್, ಚೋಳನಾಯಕನಹಳ್ಳಿ ಗ್ರಾಪಂ ಸದಸ್ಯರಾದ ರಂಗೇಗೌಡ, ಚಂದ್ರಕಲಾಶಂಕರಪ್ಪ, ಮಾಜಿ ಸದಸ್ಯ ರಮೇಶ್, ಮುಖಂಡರಾದ ಚಲುವಮೂರ್ತಿ, ಅರ್ಜುನ್ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.