ಬಾರ್ಬಡೋಸ್: ಮೊದಲ ಏಕದಿನ ಪಂದ್ಯವನ್ನು ಸುಲಭದಲ್ಲಿ ಗೆದ್ದ ಹುರುಪಿನೊಂದಿಗೆ ಎರಡನೇ ಪಂದ್ಯದಲ್ಲಿ ಭಾರೀ ಪ್ರಯೋಗ ಮಾಡಿದ ಟೀಂ ಇಂಡಿಯಾ ಮುಖಭಂಗ ಅನುಭವಿಸಿದೆ. ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗೆ ರೆಸ್ಟ್ ನೀಡಿ ಯುವಕರ ತಂಡದ ಕಟ್ಟಿ ವಿಂಡೀಸ್ ವಿರುದ್ಧ ಆರು ವಿಕೆಟ್ ಸೋಲನುಭವಿಸಿದೆ.
ಬ್ರಿಡ್ಜ್ ಟೌನ್ ನ ಕೆನ್ನಿಂಗ್ಸ್ಟನ್ ಓವಲ್ ನಲ್ಲಿ ನಡೆದ ಎರಡನೇ ಮುಖಾಮುಖಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 181 ರನ್ ಗೆ ಆಲೌಟಾದರೆ, ವೆಸ್ಟ್ ಇಂಡೀಸ್ ತಂಡವು ನಾಲ್ಕು ವಿಕೆಟ್ ಕಳೆದುಕೊಂಡು ಗುರಿ ತಲುಪಿ ವಿಜಯಿಯಾಯಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತಕ್ಕೆ ಉತ್ತಮ ಆರಂಭ ದೊರಕಿತ್ತು. ಇಶಾನ್ ಕಿಶನ್ ಮತ್ತೊಂದು ಅರ್ಧಶತಕ (55 ರನ್) ಬಾರಿಸಿದರೆ ಗಿಲ್ 34 ರನ್ ಗಳಿಸಿದರು. ಮೊದಲ ವಿಕೆಟ್ ಗೆ 90 ರನ್ ಒಟ್ಟು ಸೇರಿತ್ತು.ಆದರೆ ಆ ಬಳಿಕ ಸತತ ವಿಕೆಟ್ ಉದುರಿತು. ಮಹತ್ವದ ಅವಕಾಶ ಪಡೆದ ಸಂಜು ಸ್ಯಾಮ್ಸನ್ ಕೇವಲ 9 ರನ್ ಮಾಡಿದರೆ , ಅಕ್ಷರ್ ಪಟೇಲ್ 1 ರನ್ ಗೆ ಔಟಾದರು. ನಾಯಕ ಪಾಂಡ್ಯ 7 ರನ್, ಸೂರ್ಯ ಕುಮಾರ್ 24 ರನ್ ಮಾತ್ರ ಮಾಡಿದರು.
ಇದನ್ನೂ ಓದಿ:ವಿಶ್ವಕಪ್ ತಾಣಗಳ ವೀಕ್ಷಣೆಗೆ ಐಸಿಸಿ ನಿಯೋಗ
ವಿಂಡೀಸ್ ಪರ ಗುಡಾಕೇಶ್ ಮೋಟಿ ಮತ್ತು ರೊಮಾರಿಯೊ ಶೆಫಾರ್ಡ್ ತಲಾ ಮೂರು ವಿಕೆಟ್ ಕಿತ್ತರೆ ಜೋಸೆಫ್ ಎರಡು ವಿಕೆಟ್ ಪಡೆದರು. ಜೇಡನ್ ಸೀಲ್ಸ್ ಮತ್ತು ಕ್ಯಾರಿ ತಲಾ ಒಂದು ವಿಕೆಟ್ ಕಿತ್ತರು.
ಗುರಿ ಬೆನ್ನತ್ತಿದ ವಿಂಡೀಸ್ ತಂಡವನ್ನು ಕೈಲ್ ಮೇಯರ್ಸ್, ಶಾಯ್ ಹೋಪ್ ಮತ್ತು ಕೇಸಿ ಕಾರ್ಟಿ ಆಧರಿಸಿದರು. ಮೇಯರ್ಸ್ 36 ರನ್, ಹೋಪ್ ಅಜೇಯ 63 ರನ್ ಮತ್ತು ಕಾರ್ಟಿ ಅಜೇಯ 48 ರನ್ ಗಳಿಸಿದರು. ವಿಂಡೀಸ್ 36.4 ಓವರ್ ಗಳಲ್ಲಿ ಗುರಿ ತಲುಪಿ ಜಯಿಸಿತು.
ಭಾರತದ ಪರ ಶಾರ್ದೂಲ್ ಠಾಕೂರ್ ಮೂರು ವಿಕೆಟ್ ಮತ್ತು ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು. ಶಾಯ್ ಹೋಪ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.