ಮೇರಿ ಡೇವಿಸ್ ಆಗಷ್ಟೇ ಗರ್ಭ ಧರಿಸಿದ್ದಳು. ಅವಳ ಕಣ್ಣಲ್ಲಿ ಸಂತೋಷ ಇತ್ತು. ಪತಿ ಅರಿ ಕದಿನ್ ಅವರಂತೂ ಸ್ವರ್ಗವೇ ಅಂಗೈಯಲ್ಲಿದೆ ಎಂಬುವಷ್ಟು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಪತಿ ಕದಿನ್ ಪತ್ನಿ ಡೇವಿಸ್‌ನ ಆರೋಗ್ಯ, ಊಟ ಉಪಾಚಾರಗಳನ್ನು ದಿನವಿಡೀ ಚಾಚು ತಪ್ಪದೇ ವಿಚಾರಿಸುತ್ತಿದ್ದನು. ದಂಪತಿಯು ಮಗುವಿನ ಹೆಸರೂ ಗೊತ್ತುಪಡಿಸಿದ್ದರು. ಇಷ್ಟವಾಗುವ ಆಟಿಕೆ ಸಾಮಗ್ರಿ ಸಹಿತ ಏನೇನೂ ಬೇಕೆಂಬುದನ್ನು ಗೊತ್ತು ಪಡಿಸಿ ಆಗಲೇ ಖರೀದಿಸಿದ್ದರು. ಮಗುವಿನ ಸ್ಪರ್ಶ ಪಡೆಯುವುದಕ್ಕಾಗಿಯೇ ಅವರು ಕಾತುರರಾಗಿದ್ದರು.
ಆದರೆ! ಆದದ್ದೇ ಬೇರೆ, ಆರೋಗ್ಯದಲ್ಲಿ ಏರುಪೇರಾದ್ದರಿಂದಾಗಿ ಪತ್ನಿ ಡೇವಿಸ್ ಗರ್ಭಪಾತದಿಂದ ತಮ್ಮ ಮೊದಲ ಮಗುವನ್ನು ಕಳೆದುಕೊಳ್ಳಬೇಕಾಗಿ ಬಂತು. ಮೊದಲ ಮಗುವಿನ ಸ್ಪರ್ಶಕ್ಕಾಗಿ ಬೆಟ್ಟದಷ್ಟು ಹೊತ್ತಿದ್ದ ಕನಸು ನುಚ್ಚು ನೂರಾಯಿತು. ಇನ್ನೇನೂ ಜಗತ್ತು ಬೇಡವಾಗಷ್ಟು ಅವರಿಗೆ ಬೇಸರವಾಗಿತ್ತು. ನಿರೀಕ್ಷೆಗಳು ಹುಸಿಯಾಗಿದ್ದವು. ಆದರೂ ದಂಪತಿ ಎದೆಗುಂದಲಿಲ್ಲ. ಮುಂದೆ ತಮ್ಮ ಮಕ್ಕಳ ಸಂತೋಷವನ್ನು ಬೇರೆಯವರ ಕಣ್ಣಲ್ಲಿ ಕಾಣಲು ಮುಂದಾದರು. ಲಾಸ್ ಏಂಜೆಲಿಸ್‌ನ ಬೀದಿಯಲ್ಲಿರುವ ಅನಾಥ ಬಡ ಮಕ್ಕಳಿಗೆ ಆಶ್ರಯವಾದರು.
ಅದು 2013ರ ವರ್ಷ. ಅರಿ ಕದಿನ್ ಡೇವಿಸ್ ದಂಪತಿ ತಮ್ಮ ಮಗು ಇದ್ದರೆ ಒಂದು ವರ್ಷದವನಾಗಿರುತ್ತಿದ್ದ, ಅವನ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಅಚರಿಸುತ್ತಿದ್ದರು. ಆದರೆ ವಿಧಿ ನಮ್ಮ ಸಂತೋಷವನ್ನು ಕಿತ್ತುಕೊಂಡಿತು ಎಂಬ ನೋವು ತೋಡಿಕೊಳ್ಳುವಾಗಲೇ ಅವರಿಗೆ ಹೊಳೆದದ್ದು ಬೇರೆ ಮಕ್ಕಳ ಕಣ್ಣಲ್ಲಿ ಸಂತೋಷ ಕಾಣುವುದು. ಅದಕ್ಕೆ ಅವರು, ಲಾಸ್ ಎಂಜೆಲಿಸ್‌ನಲ್ಲಿ ಬಡ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲು ಮುಂದಾದರು. ಇಲ್ಲಿನ ಯೂನಿಯನ್ ರೆಸ್ಕೂ ಮಿಷನ್‌ನಲ್ಲಿ ಒಂದು ಕೋಣೆಯನ್ನು ಇದಕ್ಕೆಂದು ತೆಗೆದುಕೊಂಡು, ಇಲ್ಲಿನ 15ಕ್ಕೂ ಹೆಚ್ಚು ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅದೆಷ್ಟೂ ದಿನದಿಂದ ಸಂಗೀತವನ್ನೇ ಕೇಳದ ಡೇವಿಸ್, ಈ ಸಂದರ್ಭದಿಂದಾಗಿ ಸಂಗೀತ ಕೇಳಿದಳು. ಖುಷಿ ಪಟ್ಟಳು. ಆ 15 ಮಕ್ಕಳು ಕೂಡ ತುಂಬ ಸಂತೋಷ ಪಟ್ಟು, ಕುಣಿದವು, ಕೂಗಿದವು. “ಹ್ಯಾಪಿ ಬರ್ತ್‌ಡೇ’ ಎಂದು ಹರ್ಷೋದ್ಘಾರದ ಮಳೆ ಸುರಿಸಿದವು.
ಆ ದಂಪತಿಗೆ ತಮ್ಮ ಮಗುವಿನ ನಿರೀಕ್ಷೆಯಷ್ಟೇ ಖುಷಿ ನೀಡಿದ ಮೇಲೆ, ಅವರು ಪ್ರತಿ ತಿಂಗಳು ಕೂಡ ಬಡ ಮಕ್ಕಳ ಹುಟ್ಟು ಹಬ್ಬವನ್ನು ಆಚರಿಸಲು ಮುಂದಾದರು. ತಿಂಗಳಿನಲ್ಲಿ ಹುಟ್ಟು ಹಬ್ಬವನ್ನು ಆಚರಿಸುವ ಮಕ್ಕಳನ್ನು ಒಂದು ದಿನ ಎಲ್ಲರನ್ನೂ ಸೇರಿಸಿ ಅವರ ಬರ್ತ್‌ಡೇಯನ್ನು ಆಚರಿಸಿದರು. ಇದರಿಂದ ಅವರಿಗೆ ಮಗು ಇರದ ಅನಾಥ ಪ್ರಜ್ಞೆ ಕೂಡ ದೂರವಾಯಿತು. ಜೀವನದಲ್ಲಿ ಏನೋ ಗಳಿಸಿದಷ್ಟೇ ಹೆಮ್ಮೆ ಪಟ್ಟರು. ಈಗಾಗಲೇ ಇವರು ಸುಮಾರು 88 ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ.
-ಮಿಥುನಾ, ಮೈಸೂರು