Advertisement

ಆಧ್ಯಾತ್ಮಿಕತೆಯಿಂದ ಪ್ರಜ್ಞಾವಂತ ಸಮಾಜ ನಿರ್ಮಾಣ: ಒಡಿಯೂರು ಶ್ರೀ

03:03 PM Mar 17, 2018 | |

ಪುತ್ತೂರು: ಭಾರತ ದೇಶದ ಮೌಲ್ಯ ಆಧ್ಯಾತ್ಮಿಕತೆಯಲ್ಲಿದೆ. ಆದ್ದರಿಂದ ಆಧ್ಯಾತ್ಮಿಕತೆಯ ಜತೆಗೆ ಜೀವನದಲ್ಲಿ ಮುನ್ನಡೆದಾಗ ಪ್ರಜ್ಞಾವಂತ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು ಒಡಿಯೂರು ಶ್ರೀ ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

Advertisement

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಶುಕ್ರವಾರ ಶ್ರೀ ಗುರುದೇವಾ ಸೇವಾ ಬಳಗ ಪುತ್ತೂರು ತಾಲೂಕು ಸಮಿತಿ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುತ್ತೂರು ಘಟಕದ 14ನೇ ವಾರ್ಷಿಕೋತ್ಸವ ಮತ್ತು ಸಾಮೂಹಿಕ ಶ್ರೀ ಸತ್ಯದತ್ತ ವ್ರತ
ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಆದರ್ಶ ಯುವಜನತೆ ಇಲ್ಲದೆ ಪ್ರಜ್ಞಾವಂತ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಆದ್ದರಿಂದ ಯುವಜನತೆಯಲ್ಲಿ ಆದರ್ಶಗಳನ್ನು ಬೆಳೆಸುವತ್ತ ಗಮನಹರಿಸಬೇಕು. ಈ ನಿಟ್ಟಿನಲ್ಲಿ ಮಾನವೀಯ ಮೌಲ್ಯಗಳ ಕೊಂಡಿಯಾಗಿ ಗುರುದೇವಾ ಸೇವಾ ಬಳಗ, ವಜ್ರಮಾತಾ ಮಹಿಳಾ ವಿಕಾಸದಂತಹ ಸಂಘಟನೆ ಹುಟ್ಟಿಕೊಳ್ಳಬೇಕು ಎಂದರು.

ಧರ್ಮ ಮರೆತ ರಾಷ್ಟ್ರಕ್ಕೆ ಅಥವಾ ವ್ಯಕ್ತಿಗೆ ಸುಖ ಇರುವುದಿಲ್ಲ. ಧರ್ಮದ ಜತೆಗೆ ನಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಬೇಕು. ಆಗ ಸ್ವಾರ್ಥ ರಹಿತ ಸಮಾಜ ಕಾರ್ಯ ನಡೆಸಲು ಸಾಧ್ಯ. ಇದರಿಂದ ಧರ್ಮ ಪೂರಕ, ರಾಜಕೀಯ ರಹಿತ ಕಾರ್ಯ ಹೆಚ್ಚಾಗುತ್ತದೆ. ಸ್ವಾರ್ಥದ ಬದುಕು ಬೇಡ. ನಿಸ್ವಾರ್ಥದಿಂದ ಸೇವೆ ಮಾಡಲು ಮುಂದಾಗಬೇಕು. ಸೇವೆಯ ಮೂಲಕ ಸಾರ್ಥಕ ಜೀವನ ನಮ್ಮದಾಗಬೇಕು. ಇದಕ್ಕಾಗಿ ಮೌಲ್ಯಗಳ ಕೊಂಡಿಯಾಗಿ ಕೆಲಸ ಮಾಡಬೇಕಿದೆ ಎಂದರು.

ಉದ್ಯಮಿ ಅಶೋಕ್‌ ರೈ ಕೋಡಿಂಬಾಡಿ ಮಾತನಾಡಿ, ಭಕ್ತಿ, ನಂಬಿಕೆಯೇ ನಿಜವಾದ ಧರ್ಮ. ಈ ದಾರಿಯನ್ನು ತೋರಿಸಿಕೊಡಲು ಗುರುಗಳ ನೆರವು ಅಗತ್ಯ ಎಂದರು. ನಗರಸಭೆ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್‌ ಶೆಟ್ಟಿ ಮಾತನಾಡಿ, ಆಧ್ಯಾತ್ಮಿಕ ಚಿಂತನೆಯೊಂದಿಗೆ ಉತ್ತಮ ಕಾರ್ಯ ಮಾಡುವ ಕೆಲಸ ಆಗಬೇಕು. ಸ್ವಾಮೀಜಿಗಳು ಜೀವನಕ್ಕೆ ಪ್ರೇರಣಾ ಶಕ್ತಿ. ಇವರ ಮೂಲಕ ಜೀವನ ಬದಲಾಗಲು ಸಾಧ್ಯ ಎಂದರು.

Advertisement

ಮಂಗಳೂರು ಗೋಕರ್ಣನಾಥೇಶ್ವರ ಕೋ ಆಪರೇಟೆವ್‌ ಬ್ಯಾಂಕ್‌ನ ನಿರ್ದೇಶಕ ವಿಜಯ ಕುಮಾರ್‌ ಸೊರಕೆ ಮಾತನಾಡಿ, ಧಾರ್ಮಿಕ ಚಿಂತನೆಯೊಂದಿಗೆ ಮುನ್ನಡೆದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು. ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಪ್ರಧಾನ ಸಂಚಾಲಕ ಟಿ. ತಾರಾನಾಥ ಕೊಟ್ಟಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೃಷಿಕ ಮಾಯಿಲಪ್ಪ ಯಾನೆ ಮೋನಪ್ಪ ಶೆಟ್ಟಿ, ನಗರಸಭೆ ಪೌರಕಾರ್ಮಿಕರಾದ ಯಶೋದಾ ಮತ್ತು ಗುಲಾಬಿ, ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿ ಸಿ ಪದ್ಮನಾಭ ಮತ್ತು ಯಶವಂತ ಗೌಡ ಅವರನ್ನು ಸಮ್ಮಾನಿಸಲಾಯಿತು.

ಬಟ್ಟೆ ವಿತರಣೆ
ಕುಂಡಾಪು ಶಾಲೆಯ ವಿಶೇಷ ಅಗತ್ಯವುಳ್ಳ ಸುಮಾರು 40 ಮಕ್ಕಳಿಗೆ ಮತ್ತು ವಿಕಲಚೇತನ ಕಾರ್ಯಕರ್ತರಿಗೆ ಗುರು ದೇವಾ ಸೇವಾ ಬಳಗ ಮತ್ತು ವಜ್ರಮಾತಾ ಮಹಿಳಾ ವಿಕಾಸದಿಂದ ಬಟ್ಟೆ ವಿತರಣೆ ಮಾಡಲಾಯಿತು. ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಅಧ್ಯಕ್ಷೆ ನಯನಾ ರೈ ಸನ್ಮಾನ ಮತ್ತು ಬಟ್ಟೆ ವಿತರಣೆ ಕಾರ್ಯಕ್ರಮ ನಿರೂಪಿಸಿದರು.

ವತ್ಸಲಾ ನಾಯಕ್‌ ಮತ್ತು ಬಳಗ ಪ್ರಾರ್ಥಿಸಿದರು. ವಜ್ರ ಮಾತಾ ಮಹಿಳಾ ವಿಕಾಸ ಕೇಂದ್ರದ ಕಾರ್ಯದರ್ಶಿ ಶಾರದಾ ಕೇಶವ್‌ ವಾರ್ಷಿಕ ವರದಿ ವಾಚಿಸಿದರು. ಒಡಿಯೂರು ಗುರುದೇವಾ ಸೇವಾ ಬಳಗದ ಅಧ್ಯಕ್ಷ ಮೊನಪ್ಪ ಪೂಜಾರಿ ಕರೆಮಾರು ಸ್ವಾಗತಿಸಿ, ಒಡಿಯೂರು ಗುರುದೇವಾ ಸೇವಾ ಬಳಗದ ಕೋಶಾಧಿಕಾರಿ ನಿತ್ಯಾನಂದ ಶೆಟ್ಟಿ ವಂದಿಸಿದರು. ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಸತ್ಯದತ್ತ ಪೂಜೆಯ ಪ್ರಸಾದ ವಿತರಣೆ ಮಾಡಲಾಯಿತು.

ಸತ್ಯದತ್ತ ವ್ರತ
ಚಂದ್ರಶೇಖರ ಉಪಾಧ್ಯಾಯರ ನೇತೃತ್ವದಲ್ಲಿ ಸಾಮೂಹಿಕ ಸತ್ಯದತ್ತ ವ್ರತ ಪೂಜೆ ನಡೆಯಿತು. ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಸಾಧ್ವಿ  ಶ್ರೀ ಮಾತಾನಂದಮಯಿ ಅವರ ಉಪಸ್ಥಿತಿಯಲ್ಲಿ ಮಹಾಮಂಗಳಾರತಿ ನಡೆಯಿತು. ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ಭಜನ ತಂಡದಿಂದ ಭಜನೆ ನಡೆಯಿತು.

ಗುರುವಿನಿಂದ ಗುರಿ
ಒಡಿಯೂರು ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಮಾತನಾಡಿ, ಮನಸ್ಸುಗಳ ಪರಿವರ್ತನೆ ಇಂದಿನ ಅಗತ್ಯ. ಜನ ಜಾಗೃತಿ ಜತೆಗೆ ಮಾನವತ್ವದ ಕಡೆಗೆ ಸಾಗುವ ಕೆಲಸ ಆಗಬೇಕಿದೆ. ಇದರ ಜತೆಗೆ ಸೇವಾ ಮನೋಭಾವನೆಯನ್ನು ಅಗತ್ಯವಾಗಿ ಬೆಳೆಸಿಕೊಳ್ಳಿ. ಇದರಿಂದಾಗಿ ಸಮಾಜದ ಸಾಮರಸ್ಯ ಗಟ್ಟಿಯಾಗುತ್ತದೆ. ಗುರುಗಳ ಮೂಲಕ ಇಂತಹ ಹಾದಿಯಲ್ಲಿ ಸಾಗಲು ಸಾಧ್ಯ ಎಂದರು.

ನೈತಿಕ ಬದುಕಿನ ದಾರಿ
ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ತಳಮಟ್ಟದ ಜನರಿಗೆ ಮಹಾನ್‌ ಶಕ್ತಿಯಾಗಿ ಸಮಾಜವನ್ನು ಒಂದು ಮಾಡುವ ಸ್ವಾಮೀಜಿಗಳ ಆಶೀರ್ವಾದ ಸದಾ ಸಮಾಜದ ಮೇಲಿರಬೇಕು. ಸಾಂಸ್ಕೃತಿಕ, ನೈತಿಕ ಬದುಕನ್ನು ತೋರಿಸಿಕೊಡುವುದು ಇದೇ ಗುರುಗಳು. ನಿರ್ಗತಿಕರಿಗೆ ಅನ್ನ ಹಾಕುವ, ಗತಿ ಗೋತ್ರ ಇಲ್ಲದವರಿಗೆ ಹಾಗೂ ಶೈಕ್ಷಣಿಕ ಸೇವೆ ನೀಡುವ ಶಕ್ತಿ ಒಡಿಯೂರು ಶ್ರೀಗಳಿಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.