ರಾಯಚೂರು: ಪತ್ರಿಕೋದ್ಯಮ ಒಂದು ಸೇವಾ ಕ್ಷೇತ್ರವಾಗಿದ್ದು, ಸಮಾಜಕ್ಕೆ ಒಳಿತು ಮಾಡಲು ಉತ್ತಮ ವೃತ್ತಿಯಾಗಿದೆ. ಜಾಗೃತ ಪತ್ರಕರ್ತ ಜನರಲ್ಲಿ ಅರಿವು ಮೂಡಿಸುವುದರ ಜೊತೆಗೆ ಉತ್ತಮ ಬದಲಾವಣೆ ತರಬಲ್ಲ ಎಂದು ಹಿರಿಯ ಪತ್ರಕರ್ತ ಈಶ್ವರ ದೈತೋಟ ಅಭಿಪ್ರಾಯ ಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗ, ಕನ್ನಡ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸೆಯ ಕೋಶದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಉತ್ತಮ ಬದುಕು ಮತ್ತು ಚಿಂತನೆ’ ಎಂಬ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮನುಷ್ಯನ ನಿಜವಾದ ಸಾಧನೆ ಮತ್ತು ಸೇವೆ ಮನೆಯಿಂದಲೇ ಪ್ರಾರಂಭವಾಗುತ್ತದೆ. ನಮ್ಮ ಜನನ ಮತ್ತು ಬೆಳವಣಿಗೆಗೆ ಕಾರಣವಾಗಿ, ಸಂಸ್ಕಾರ ನೀಡಿರುವ ತಂದೆ-ತಾಯಿಗಳು ಹಾಗೂ ಕುಟುಂಬವನ್ನು ಎಂದೂ ಮರೆಯಬಾರದು. ನಮ್ಮ ವೃತ್ತಿ ಮತ್ತು ಸಾಧನೆಗಳಿಗೆ ಬುನಾದಿ ಹಾಕಿದ್ದೇ ನಮ್ಮ ವೈಯಕ್ತಿಕ ಬದುಕು. ಅದನ್ನು ಎಂದಿಗೂ ಕಡೆಗಣಿಸಬಾರದು. ಪತ್ರಕರ್ತರು ಸಮಾಜದ ಸುಧಾರಣೆಗೆ ಶ್ರಮಿಸುವುದರ ಜತೆಗೆ ವೈಯಕ್ತಿಕ ಬದುಕಿಗೆ ಆದ್ಯತೆ ನೀಡಬೇಕು ಎಂದರು.
ಹಿರಿಯ ಪತ್ರಕರ್ತ ಬಸವರಾಜ ಸ್ವಾಮಿ ಮಾತನಾಡಿ, ಮನುಷ್ಯ ತಾನೇ ಧರ್ಮಗಳನ್ನು ಹುಟ್ಟುಹಾಕಿ, ತಾನೇ ಮೇಲು-ಕೀಳುಗಳನ್ನು ಹುಟ್ಟಹಾಕಿ ಕಲಹಗಳನ್ನೂ ಮಾಡುತ್ತಿದ್ದಾನೆ. ಮನುಷ್ಯ ತನ್ನ ಅಜ್ಞಾನದಿಂದಾಗಿಯೇ ಇಂದು ಲಿಂಗ ತಾರತಮ್ಯ, ವರ್ಣ ತಾರತಮ್ಯ, ಜಾತಿ ತಾರತಮ್ಯ ಸೇರಿದಂತೆ ಅನೇಕ ಮೇಲು-ಕೀಳುಗಳ ಅನಿಷ್ಟಗಳನ್ನು ಹುಟ್ಟುಹಾಕಿ ಶಾಂತಿ ಕದುಡುತ್ತಿದ್ದಾನೆ. ಮನುಷ್ಯ ಅರಿವಿನ ಪ್ರಾಣಿಯಾಗಿದ್ದರೂ ಅದನ್ನು ಮರೆತು ಮೃಗದಂತೆ ಅನಾಗರಿಕವಾಗಿ ವರ್ತಿಸುತ್ತಿರುವುದೇ ಇಂದು ಸಮಾಜದಲ್ಲಿ ಅನೇಕ ಸಮಸ್ಯೆಗಳು ಸೃಷ್ಟಿಯಾಗಲು ಕಾರಣವಾಗಿದೆ. ವಿದ್ಯಾರ್ಥಿಗಳು ಇದರ ಬಗ್ಗೆ ಎಚ್ಚರವಾಗಿರಬೇಕು ಮತ್ತು ಜಾಗೃತಿ ಬೆಳೆಸಿಕೊಳ್ಳಬೇಕು ಎಂದರು.
ಪ್ರಾಚಾರ್ಯ ಡಾ| ಯಂಕಣ್ಣ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ| ದಸ್ತಗೀರ್ ಸಾಬ್ ದಿನ್ನಿ ಮಾತನಾಡಿದರು. ವಾಣಿಜ್ಯಶಾಸ್ತ್ರವಿಭಾಗದ ಪ್ರಾಧ್ಯಾಪಕ ಡಾ| ಮಹಂತೇಶ್ ಅಂಗಡಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಉಪನ್ಯಾಸಕ ವಿಜಯ್ ಸರೋದೆ, ಸಮಾಜಶಾಸ್ತ್ರ ವಿಭಾಗದ ಡಾ| ಜೆ.ಎಲ್.ಈರಣ್ಣ, ಭೀಮಣ್ಣ ಇಟಗಿ, ಪತ್ರಕರ್ತ ಸಂಗಮೇಶ್ ವಸ್ತ್ರದ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.