Advertisement
“ಉದಯವಾಣಿ’ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನಗರದ ಸಂಚಾರದಟ್ಟಣೆಗೆ ಸಂಬಂಧಿಸಿದ ಸಂವಾದದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಸೇರಿದಂತೆ ತಜ್ಞರಿಂದ ಈ ಅಭಿಪ್ರಾಯ ಕೇಳಿಬಂತು.
Related Articles
Advertisement
ಸಂಚಾರದಟ್ಟಣೆ ನಿವಾರಣೆಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಎಂಬ ಎರಡು ರೀತಿಯ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಅಲ್ಪಾವಧಿಯಲ್ಲಿ ಬಿಎಂಟಿಸಿ ಬಸ್‌ಗಳಿಗೆ ಸಾಧ್ಯವಿರುವ ಕಡೆಗಳಲ್ಲಿ ಸುಗಮ ಸಂಚಾರಕ್ಕೆ ಆದ್ಯತೆ ನೀಡಬೇಕು. ತಂತ್ರಜ್ಞಾನಗಳ ನೆರವಿನಿಂದ ಬಸ್‌ಗಳ ಕಾರ್ಯಾಚರಣೆಯ ಕಾರ್ಯಕ್ಷಮತೆ ವೃದ್ಧಿಸಬೇಕು.
ಹೆಚ್ಚು ಬಸ್‌ಗಳನ್ನು ರಸ್ತೆಗಿಳಿಸಬೇಕು. ಲಾಸ್ಟ್ ಮೈಲ್ ಕನೆಕ್ಟಿವಿಟಿ ಹೆಚ್ಚಿಸಬೇಕು. ಇನ್ನು ದೀರ್ಘಾವಧಿಯಲ್ಲಿ ಮೆಟ್ರೋ, ಉಪನಗರ ರೈಲು ಯೋಜನೆಗಳ ಅನುಷ್ಠಾನ, ಬೈಸಿಕಲ್ ಪಥ ಮತ್ತಿತರ ಯೋಜನೆಗಳನ್ನು ರೂಪಿಸಬೇಕು ಎಂದು ಸಲಹೆಗಳನ್ನು ಮುಂದಿಟ್ಟರು.
ಅಡಿಗೆ ಮಾಡಿದವರ್ಯಾರೋ; ಬಡಿಸ್ತಿರೋರ್ಯಾರೋ: ಸಂವಾದದಲ್ಲಿ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಪಿ. ಹರಿಶೇಖರನ್, “ಅಡಿಗೆ ಮಾಡಿದವರು ಬೇರೆ; ನಾವು (ಸಂಚಾರ ಪೊಲೀಸರು) ಆ ಅಡಿಗೆ ಬಡಿಸುತ್ತಿದ್ದೇವಷ್ಟೇ. ಆದರೆ, ಇಲ್ಲಿ ಊಟ ಸರಿಯಾಗಿಲ್ಲ ಎಂದು ಬಡಿಸುವವನನ್ನು ದೂಷಿಸಲಾಗುತ್ತಿದೆ.
ಇದು ಸಂಚಾರದಟ್ಟಣೆಯ ವಸ್ತುಸ್ಥಿತಿ. ಹಾಗಂತ, ಪಲಾಯನ ಆಗುತ್ತಿಲ್ಲ. ಸಮಸ್ಯೆ ಪರಿಹಾರಕ್ಕೆ ಸಂಯೋಜಿತ ಪ್ರಯತ್ನದ ಅಗತ್ಯ ಇದೆ ಎಂಬುದು ನನ್ನ ವಾದ. ಎರಡು ಟಿಎಂಸಿ ಸಾಮರ್ಥ್ಯದಷ್ಟು ಕೆರೆ ನಿರ್ಮಿಸಿ, ಐದು ಟಿಎಂಸಿ ನೀರು ಹರಿಸಿದರೆ ಏನಾಗುತ್ತದೆ? ಅದೇ ಸ್ಥಿತಿ ಈಗ ನಗರದ ಸಂಚಾರ ವ್ಯವಸ್ಥೆಯಲ್ಲೂ ಆಗಿದೆ’ ಎಂದು ಸಮಸ್ಯೆಯ ತೀವ್ರತೆಯನ್ನು ತೆರೆದಿಟ್ಟರು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ )ಯ ಮೂಲಸೌಕರ್ಯ, ಸುಸ್ಥಿರ ಸಾರಿಗೆ ಮತ್ತು ನಗರ ಯೋಜನೆ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಆಶಿಶ್ ವರ್ಮ ಮಾತನಾಡಿ, “ನಗರ ಸಂಚಾರ ಮತ್ತು ಸಾರಿಗೆ ವ್ಯವಸ್ಥೆಯ ನಡುವೆ ಸಾಕಷ್ಟು ಅಸಮತೋಲನ ಇದೆ.
ಇದಕ್ಕೆ ನಾವು ಬರೀ ಮೇಲ್ಸೇತುವೆಯಂತಹ ಅಲ್ಪಾವಧಿ ಪರಿಹಾರಗಳನ್ನು ಕಂಡುಕೊಳ್ಳುವುದರಿಂದ ಪರಿಹಾರ ಸಾದ್ಯವಿಲ್ಲ. ಸುಸ್ಥಿರ ಸಾರಿಗೆ ವ್ಯವಸ್ಥೆ ನಮ್ಮ ಆದ್ಯತೆ ಆಗಬೇಕು. ಇದಕ್ಕೆ ಉಳಿದೆಲ್ಲ ಸರ್ಕಾರಿ ಸಂಸ್ಥೆಗಳು ಕೈಜೋಡಿಸಬೇಕು’ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನದ ನೆರವು: ಕ್ಲೀನ್ ಏರ್ ಪ್ಲಾಟ್‌ಫಾರಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ರಂಗನಾಥ್, “ನಗರದ ಅತಿ ಹೆಚ್ಚು ವಾಹನದಟ್ಟಣೆ ಇರುವ ಹಾಟ್‌ಸ್ಪಾಟ್‌ಗಳನ್ನು ಗುರುತಿಸಬೇಕು. ಅವುಗಳಿಗೆ ಸ್ಥಳೀಯಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು. ವಿದೇಶಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಂಡು ಯಶಸ್ವಿಯಾಗಿ ಸಂಚಾರ ನಿರ್ವಹಣೆ ಮಾಡಲಾಗುತ್ತಿದೆ ಎಂದರು.
ಆಯುಕ್ತ ಬೇಸರ: “ಎರಡು ಸಾವಿರ ಮದುವೆ ಹಾಲ್‌ಗಳಿವೆ. ಅಲ್ಲಿಗೆ ಬರುವ ವಾಹನಗಳ ವ್ಯವಸ್ಥೆ ಹೇಗೆ? ಅವುಗಳು ಸೃಷ್ಟಿಸುವ ಸಂಚಾರದಟ್ಟಣೆ ಎಷ್ಟು? ಈ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ’ ಎಂದು ಪಿ. ಹರಿಶೇಖರನ್ ಬೇಸರ ವ್ಯಕ್ತಪಡಿಸಿದರು.
ಬಹುತೇಕ ಮದುವೆ ಹಾಲ್‌ಗಳು ವಾಹನ ನಿಲುಗಡೆ ವ್ಯವಸ್ಥೆ ಹೊಂದಿರುವುದಿಲ್ಲ. ಸೀಜನ್‌ನಲ್ಲಿ ಸಾವಿರಾರು ವಾಹನಗಳು ಆ ಹಾಲ್‌ಗಳ ಸುತ್ತ ನಿಲುಗಡೆ ಆಗುತ್ತವೆ. ಇದಲ್ಲದೆ, ವಸತಿ ಪ್ರದೇಶಗಳಲ್ಲಿ ರಾತ್ರಿ ನಿಲುಗಡೆ ಆಗುವ ಸಾವಿರಾರು ವಾಹನಗಳಿರುತ್ತವೆ.
ಲಕ್ಷಾಂತರ ವಾಹನಗಳ ಮಾಲಿಕತ್ವ ಹೊಂದಿರುವ ಆ್ಯಪ್ ಆಧಾರಿತ ಸೇವೆ ನೀಡುತ್ತಿರುವ ಓಲಾ, ಉಬರ್ ಕಂಪನಿಗಳು ವಾಹನ ನಿಲುಗಡೆಗೆ ಎಲ್ಲಿ ವ್ಯವಸ್ಥೆ ಕಲ್ಪಿಸಿದ್ದಾರೆ? ಸಂಚಾರದಟ್ಟಣೆಗೆ ಇವುಗಳು ಕೂಡ ಕೊಡುಗೆ ನೀಡುತ್ತಿವೆ ಎಂದು ಅವರು ಗಮನಸೆಳೆದರು.