Advertisement
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗವು ತುಮಕೂರು ಸಿದ್ಧಗಂಗಾ ತಾಂತ್ರಿಕ ಸಂಸ್ಥೆ ಸಹಯೋಗದಲ್ಲಿ “ಮಣ್ಣು ಪರೀಕ್ಷೆ ಬೆಳೆ ಸ್ಪಂದನೆ ಪ್ರಾಯೋಜನೆ’ಯಲ್ಲಿ ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದು, ದೇಶದಲ್ಲಿ ಮೊಟ್ಟಮೊದಲ ಬಾರಿಗೆ ತುಮಕೂರಿನಲ್ಲಿ ಈ ತಂತ್ರಜ್ಞಾನದ ಪ್ರಯೋಗ ನಡೆಯುತ್ತಿದೆ. ಇದು ಯಶಸ್ವಿಯಾದರೆ, ದೇಶಕ್ಕೆ ಈ ತಂತ್ರಜ್ಞಾನ ಮಾದರಿ ಆಗಲಿದೆ. ಈ ನಿಟ್ಟಿನಲ್ಲಿ ಭೂಪಾಲ್‌ನ ಭಾರತೀಯ ಮಣ್ಣು ವಿಜ್ಞಾನ ಸಂಸ್ಥೆ ಆಸಕ್ತಿ ತೋರಿಸಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಪ್ರಸ್ತುತ ರೈತರು ಬೆಳೆಗೆ ತಕ್ಕಂತೆ ಗೊಬ್ಬರ ಹಾಕುತ್ತಿದ್ದಾರೆ. ಆದರೆ, ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಬಿತ್ತನೆ ಹಾಗೂ ರಸಗೊಬ್ಬರ ಬಳಕೆ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಜಿಪಿಎಸ್ ಮೂಲಕ ಸುಮಾರು ಹತ್ತು ಸಾವಿರ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ, ಆ ಎಲ್ಲ ದತ್ತಾಂಶಗಳನ್ನು ಜಿಐಎಸ್‌ನಲ್ಲಿ ಹಾಕಿ, ಮಣ್ಣಿನ ಫಲವತ್ತತೆ ನಕ್ಷೆ ತಯಾರಿಸಲಾಗಿದೆ. ಅದೇ ರೀತಿ, ಮತ್ತೂಂದೆಡೆ 1970ರಿಂದ ಈವರೆಗಿನ 50ಕ್ಕೂ ಹೆಚ್ಚು ಬೆಳೆಗಳ ಇಳುವರಿ ಗುರಿ ಸಮೀಕರಣಗಳನ್ನು ಮಾಡಿದ್ದು, ಆ ಮಾಹಿತಿಯನ್ನೂ ಹಾಕಲಾಗಿದೆ. ಇದರಿಂದ ರೈತರಿಗೆ ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ ಮತ್ತು ಆ ಜಮೀನಿನ ಇಳುವರಿ ಸಾಮರ್ಥ್ಯ ಎರಡೂ ಸಿಗುತ್ತದೆ.
Related Articles
Advertisement
ಇಂದು ಲೋಕಾರ್ಪಣೆಕೃಷಿ ಗಣಕವು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು ಸೇರಿದಂತೆ ಹತ್ತು ಭಾಷೆಗಳಲ್ಲಿ ಪರಿಚಯಿಸಲಾಗಿದೆ. ಭಾನುವಾರ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ವೆಬ್‌ಸೈಟ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಪ್ರಯೋಗ ಯಶಸ್ವಿಯಾದರೆ, ಇದೇ ಮಾದರಿಯನ್ನು ದೇಶಾದ್ಯಂತ ಅಳವಡಿಸುವ ಬಗ್ಗೆ ಭಾರತೀಯ ಮಣ್ಣು ವಿಜ್ಞಾನ ಸಂಸ್ಥೆ ಚಿಂತನೆ ನಡೆಸಿದೆ. ಈ ಸಂಬಂಧ ಈಗಾಗಲೇ ಚರ್ಚೆ ಕೂಡ ನಡೆದಿದೆ ಎಂದು ಡಾ.ಬಸವರಾಜ ಹೇಳಿದರು. ಒಂಬತ್ತು ಜಿಲ್ಲೆಗಳು ಯಾವುವು?
ತುಮಕೂರು, ಚಿತ್ರದುರ್ಗ, ಹಾಸನ, ಮೈಸೂರು, ಮಂಡ್ಯ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿನ ಸುಮಾರು 10 ಸಾವಿರ ಮಣ್ಣಿನ ಮಾದರಿ ಸಂಗ್ರಹಿಸಲಾಗಿದೆ. ಕಂದಾಯ ಗ್ರಾಮಗಳ ಸಂಖ್ಯೆ ಆಧರಿಸಿ ಖುದ್ದು ತಜ್ಞರು ಸ್ಥಳಕ್ಕೆ ತೆರಳಿ ಮಾದರಿ ಸಂಗ್ರಹಿಸಿದ್ದಾರೆ. ಈ ತಂತ್ರಜ್ಞಾನವು ಶೇ. 70ರಷ್ಟು ನಿಖರತೆಯನ್ನು ಹೊಂದಿದೆ. ಏನು ವ್ಯತ್ಯಾಸ?
ಮಣ್ಣಿನ ಆರೋಗ್ಯ ಕಾರ್ಡ್ ರೈತರ ಕೈಸೇರಲು ತಿಂಗಳು ಹಿಡಿಯುತ್ತದೆ. ಅಷ್ಟೊತ್ತಿಗೆ ಬಿತ್ತನೆಯಾಗಿ, ರಸಗೊಬ್ಬರವೂ ಹಾಕಲಾಗಿರುತ್ತದೆ. ಹಾಗಾಗಿ, ನಿರೀಕ್ಷಿತ ಪ್ರಯೋಜನ ಆಗುವುದಿಲ್ಲ. ಆದರೆ, “ಕೃಷಿ ಗಣಕ’ದಲ್ಲಿ ಕೆಲವೇ ನಿಮಿಷಗಳಲ್ಲಿ ರೈತನ ಅಂಗೈನಲ್ಲಿ ಈ ಮಾಹಿತಿ ಲಭ್ಯವಾಗುವುದರಿಂದ ಸಮಯ ಉಳಿತಾಯದ ಜತೆಗೆ ಇಳುವರಿ ಗುರಿ ಆಧಾರಿತ ರಸಗೊಬ್ಬರ ಪ್ರಮಾಣ ತಿಳಿಯಬಹುದು. – ವಿಜಯಕುಮಾರ್ ಚಂದರಗಿ