ಬಾಗಲಕೋಟೆ: ಗಾಂಧಿ ಜಯಂತಿಯಂದು (ಅಕ್ಟೋಬರ್ 2) ರಾಜ್ಯವನ್ನು ಸಂಪೂರ್ಣ ಬಯಲು ಶೌಚ ಮುಕ್ತಗೊಳಿಸುವ ರಾಜ್ಯ ಸರ್ಕಾರದ ಗುರಿ ಈಡೇರಿಲ್ಲ. ಆದರೆ ಕೇವಲ ಹತ್ತು ಜಿಲ್ಲೆಗಳು ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆಗಳಾಗಿ ಪರಿವರ್ತನೆಯಾಗಲಿವೆ. ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ರಾಜ್ಯದ ಪ್ರತಿ ಕುಟುಂಬವೂ ವೈಯಕ್ತಿಕ ಶೌಚಾಲಯ ಹೊಂದಬೇಕೆಂಬ ಮಹತ್ವಾಕಾಂಕ್ಷಿ ಯೋಜನೆಗೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸ್ಪಂದನೆ ಸಿಕ್ಕಿಲ್ಲ.
ರಾಜ್ಯದ 10 ಜಿಲ್ಲೆಗಳು ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಶೇ.100ಕ್ಕೆ 100ರಷ್ಟು ಸಾಧನೆ ಮಾಡಿವೆ. ಅವುಗಳಿಗೆ ಅ.2ರಂದು ಬೆಂಗಳೂರಿನಲ್ಲಿ ಪುರಸ್ಕಾರ ದೊರೆಯುತ್ತಿದೆ. ಈ ಪಟ್ಟಿಯಲ್ಲಿ ಉ.ಕರ್ನಾಟಕದ ಒಂದೇ ಒಂದು ಜಿಲ್ಲೆಯೂ ಇಲ್ಲ ಎಂಬುದು ಗಮನಾರ್ಹ.
ಯಾವ ಜಿಲ್ಲೆಗಳು ಮುಕ್ತ: ಬೆಂಗಳೂರು ನಗರ ಮತ್ತು ಗ್ರಾಮೀಣ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ದಕ್ಷಿಣ ಕನ್ನಡ, ರಾಮನಗರ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಗಳ ಪ್ರತಿಯೊಂದು ಕುಟುಂಬದವರು ವೈಯಕ್ತಿಕ ಶೌಚಾಲಯ ಕಟ್ಟಿಕೊಂಡಿದ್ದಾರೆ. ಈ ಎಲ್ಲ ಜಿಲ್ಲೆಗಳು ದಕ್ಷಿಣ ಕರ್ನಾಟಕ ವ್ಯಾಪ್ತಿಯಲ್ಲಿದ್ದು, ಉತ್ತರದ ಜಿಲ್ಲೆಗಳ ಜನರಿಗೆ ಈ ಮಹತ್ವದ ಯೋಜನೆಗೆ ಮನಸ್ಸು ಒಗ್ಗಿಸಿಕೊಂಡಿಲ್ಲ.
ಶೇ.90ಕ್ಕೂ ಹೆಚ್ಚು: ಉತ್ತರ ಕರ್ನಾಟಕದ ಜಿಲ್ಲೆಗಳು ಪೂರ್ಣ ಪ್ರಮಾಣದಲ್ಲಿ ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆಗಳಾಗಿಲ್ಲ. ಆದರೆ, ಕೆಲವೇ ಕೆಲವು ಜಿಲ್ಲೆಗಳು ಶೇ.90ಕ್ಕೂ ಹೆಚ್ಚು ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿವೆ. ಅದರಲ್ಲಿ ಸಚಿವ ಎಚ್.ಕೆ. ಪಾಟೀಲರ ಸ್ವಂತ ಜಿಲ್ಲೆ ಗದಗದಲ್ಲಿ ಒಟ್ಟು 1,35,483 ಕುಟುಂಬಗಳಿದ್ದು, ಅದರಲ್ಲಿ 1,24,868 ಕುಟುಂಬಗಳು ಈಗಾಗಲೇ ವೈಯಕ್ತಿಕ ಶೌಚಾಲಯ ಹೊಂದಿದೆ. ಇನ್ನೂ 10,615 ಶೌಚಾಲಯ ನಿರ್ಮಿಸಿದರೆ, ಅದೂ ಕೂಡ ಸಂಪೂರ್ಣ ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆಯಾಗಲಿದೆ. ಕೋಲಾರ ಜಿಲ್ಲೆಯ ಶೇ.92.16ರಷ್ಟು ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿದ್ದು, ಉತ್ತರ ಕನ್ನಡ ಜಿಲ್ಲೆ ಶೇ.98.51ರಷ್ಟು ಕುಟುಂಬ ಶೌಚಾಲಯ ಹೊಂದಿವೆ. ಉತ್ತರ ಕನ್ನಡ, ಕೋಲಾರ ಮತ್ತು ಗದಗ ಜಿಲ್ಲೆಗಳನ್ನು ನ.1ರೊಳಗೆ ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆಗಳನ್ನಾಗಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಆರ್‌ಡಿಪಿಆರ್ ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ತಿಳಿಸಿದ್ದಾರೆ.
10 ಜಿಲ್ಲೆಯ 8488 ಗ್ರಾಮಗಳು
ಸದ್ಯ ಬಯಲು ಮಲ ವಿಸರ್ಜನೆ ಮುಕ್ತ ಜಿಲ್ಲೆಗಳಾಗಿ ಪರಿವರ್ತನೆಗೊಂಡಿರುವ 10 ಜಿಲ್ಲೆಗಳ ವ್ಯಾಪ್ತಿಯಲ್ಲಿ 1836 ಗ್ರಾ.ಪಂ. ಇದ್ದು, ಅದರಲ್ಲಿ 8488 ಗ್ರಾಮಗಳು ಈ ಸಾಧನೆಗೆ ಒಳಗಾಗಿವೆ.
ಶೇ.52.48 ಸಾಧನೆ
ಬಾಗಲಕೋಟೆ ಜಿಲ್ಲೆಯಲ್ಲಿ 2,54,451 ಕುಟುಂಬಗಳಿದ್ದು, ಅದರಲ್ಲಿ 1,33,538 ಕುಟುಂಬ ಮಾತ್ರ ವೈಯಕ್ತಿಕ ಶೌಚಾಲಯ (ಶೇ.52.48) ಹೊಂದಿವೆ. ಇನ್ನೂ 1,20,913 ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಬೇಕಿದೆ. ಇಡೀ ಜಿಲ್ಲೆಯ ಸಾಧನೆ ಶೇ.52.48 ರಷ್ಟಿದ್ದರೆ, ಜಿಲ್ಲೆಯ 12 ಗ್ರಾ.ಪಂ. ಹಾಗೂ ವಿವಿಧ ಗ್ರಾ.ಪಂ. ವ್ಯಾಪ್ತಿಯ 32 ಗ್ರಾಮಗಳು ಶೇ.100ಕ್ಕೆ 100ರಷ್ಟು ವೈಯಕ್ತಿಕ ಹೊಂದಿವೆ. ಅದರಲ್ಲಿ ತಾಲೂಕುವಾರು ಬಾದಾಮಿ-3, ಬಾಗಲಕೋಟೆ-1, ಬೀಳಗಿ-2, ಹುನಗುಂದ-2, ಜಮಖಂಡಿ-2, ಮುಧೋಳ-2 ಗ್ರಾ.ಪಂ. ಇವೆ.
ಶ್ರೀಶೈಲ ಕೆ. ಬಿರಾದಾರ