ನವದೆಹಲಿ: ಮನೆ ಮಾರಾಟ, ಕಟ್ಟಡ ಮಾರಾಟ, ವಾಹನಗಳ ಮಾರಾಟದ ಬಗ್ಗೆ ಕೇಳಿರುತ್ತೀರಿ. ರಸ್ತೆಯನ್ನೇ ಮಾರುವುದರ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಇಂತಹುದೊಂದು ವಿಚಿತ್ರ ವಿದ್ಯಮಾನಕ್ಕೆ ಭಾರತವೇ ಸಾಕ್ಷಿಯಾಗುವ ಸಾಧ್ಯತೆಯಿದೆ.
ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ಮಾರಾಟ ಮಾಡಲು ಹೊರಟಿದೆ ಯೋಜನೆಯ ಪ್ರವರ್ತಕ ಕಂಪನಿ ಜೇಪಿ ಎಸೋಸಿಯೇಟ್ಸ್. ದಯವಿಟ್ಟು, ನಮಗೆ ಈ ಹೆದ್ದಾರಿಯನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿ ಎಂದು ಸುಪ್ರೀಂ ಕೋರ್ಟ್ ಮುಂದೆ ಜೇಪಿ ಕಂಪನಿ ಯಾಚಿಸಿದೆ.
2,500 ಕೋಟಿ ರೂ.ಗೆ ಯಮುನಾ ಎಕ್ಸ್ ಪ್ರಸ್‌ವೇಯನ್ನು ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಮನವಿ ಮಾಡಿದೆ. ಅಪಾರ್ಟ್‌ಮೆಂಟ್ ನಿರ್ಮಾಣ ವಿಚಾರದಲ್ಲಿ ವಿವಾದಕ್ಕೆ ಸಿಲುಕಿರುವ ಕಂಪನಿ 40 ಮಂದಿಗೆ ಬಾಕಿ ಹಣ ಕೊಡಬೇಕಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಅ.23ರಂದು ವಿಚಾರಣೆ ನಡೆಸುವುದಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಅಪಾರ್ಟ್‌ಮೆಂಟ್ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದಿನ ವಿಚಾರಣೆ ವೇಳೆ ನ್ಯಾಯಪೀಠ, 2 ಸಾವಿರ ಕೋಟಿ ರೂ.ಗಳನ್ನು ಸುಪ್ರೀಂಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸುವಂತೆ ಕಂಪನಿಗೆ ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಶುಕ್ರವಾರ ಕೋರ್ಟ್‌ಗೆ ಹಾಜರಾದ ಕಂಪನಿಯ ಮಾಲೀಕರು, “ನಮ್ಮಲ್ಲಿ ಅಷ್ಟೊಂದು ಹಣ ಠೇವಣಿಯಿಡಲು ಈಗ ಸಾಧ್ಯವಿಲ್ಲ. ಹಾಗಾಗಿ, ಹೆದ್ದಾರಿಯನ್ನು ಬೇರೊಂದು ಡೆವಲಪರ್ ಕಂಪನಿಗೆಮಾರಾಟ ಮಾಡಿ, 2000 ಕೋಟಿ ರೂ. ಗಳನ್ನು ಠೇವಣಿ ಇಡುತ್ತೇವೆ’ ಎಂದಿದ್ದಾರೆ. ದೆಹಲಿ-ಆಗ್ರಾ ನಡುವೆ 2012ರಲ್ಲಿ ಆರು ಪಥಗಳ ಹೆದ್ದಾರಿ ನಿರ್ಮಾಣವಾಗಿತ್ತು.