ಬಂಗಾರಪೇಟೆ: ಸರ್ಕಾರಿ ಶಾಲೆಗಳೆಂದರೆ ಪೋಷಕರು ಮೂಗು ಮುರಿಯುವ ಕಾಲ ಈಗ ಇಲ್ಲ. ಎಲ್ಲವೂ ಬದಲಾಗಿದೆ ಎಂದು ಹೇಳುವ ಜನಪ್ರತಿನಿಧಿಗಳು, ಅಧಿಕಾರಿ ಗಳಿಗೆ ತಾಲೂಕಿನ ಬೊಗ್ಗಲ ಹಳ್ಳಿ ಸರ್ಕಾರಿ ಶಾಲೆ ಯಾವುದೇ ಬದಲಾಗಿಲ್ಲ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ. ಸರ್ಕಾರಿ ಶಾಲೆ ಈ ರೀತಿ ಇದ್ರೆ ಮಕ್ಕಳನ್ನು ದಾಖಲಿಸಲು ಪೋಷಕರು ಇಷ್ಟಪಡುವುದಿಲ್ಲ, ಇಲ್ಲಿ ಯಾವುದೇ ಸೌಲಭ್ಯ ಇಲ್ಲ, ಗುಣಮಟ್ಟದ ಶಿಕ್ಷಣವಂತೂ ಮೊದಲೇ ಸುಗುತ್ತಿಲ್ಲ, ಶಿಕ್ಷಕರ ಕೊರತೆಯಿಂದ ಪೋಷಕರು ವಿಧಿಯಿಲ್ಲದೆ ದುಬಾರಿ ಹಣ ಕೊಟ್ಟು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂದು ಖಾಸಗಿ ಶಾಲೆಗೆ ಸೇರಿಸುತ್ತಾರೆ.
ಅವ್ಯವಸ್ಥೆಯ ಆಗರ: ಸರ್ಕಾರ ಒಂದು ಕಡೆ ಸರ್ಕಾರಿ ಶಾಲೆಗಳಲ್ಲಿ ಎಲ್ಲವೂ ಸರಿ ಇದೆ, ಖಾಸಗಿ ಶಾಲೆಗಳು ನಾಚುವಂತಹ ಶಿಕ್ಷಣ ಸೌಲಭ್ಯ ದೊರೆಯುತ್ತಿದೆ ಎಂದು ಹೇಳುತ್ತದೆ. ಅದು ಭಾಷಣಕ್ಕೆ ಮಾತ್ರ ಸೀಮಿತ ಎಂಬುದು ಮತ್ತೂಮ್ಮೆ ಬೊಗ್ಗಲಹಳ್ಳಿ ಶಾಲೆಯ ಸ್ಥಿತಿ ನೋಡಿದರೆ ತಿಳಿಯುತ್ತದೆ. ಅಷ್ಟರ ಮಟ್ಟಿಗೆ ಶಾಲೆ ಅವ್ಯವಸ್ಥೆಯಿಂದ ಕೂಡಿದೆ. ಹೆಸರಿಗೆ ಮಾತ್ರ ಶಾಲೆ: ಆಂಧ್ರ ಗಡಿಭಾಗಕ್ಕೆ ಹೊಂದಿ ಕೊಂಡಿರುವ ದೋಣಿಮಡಗು ಗ್ರಾಪಂನ ಬೊಗ್ಗಲಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಹೆಸರಿಗೆ ಎಂಬಂತಿದೆ. ಕಟ್ಟಡದ ಸ್ಥಿತಿ ಸರಿಯಿಲ್ಲ, ಕಿಟಕಿ, ಬಾಗಿಲು ಇಲ್ಲ, ಚಾವಣಿ ಸಿಮೆಂಟ್ ಉದುರುತ್ತದೆ, ಮಳೆ ಬಂದರೆ ನೀರು ಸೋರುತ್ತದೆ.
ಶಾಲೆ ಗೋಡೆಗಳು ಸುಣ್ಣ ಬಣ್ಣ ಕಂಡು ದಶಕಗಳೇ ಕಳೆದಿದೆ. ಶಿಕ್ಷಕರಿಲ್ಲ, ಬಿಸಿಯೂಟ ಇಲ್ಲ: ಕಳೆದ ಒಂದು ತಿಂಗಳಿಂದ ಶಿಕ್ಷಕರೇ ಇಲ್ಲ, ಇದ್ದ ಶಿಕ್ಷಕ ವರ್ಗಾವಣೆಗೊಂಡ ಬಳಿಕ ಇಲಾಖೆ ಮತ್ತೂಬ್ಬ ಶಿಕ್ಷಕರನ್ನು ನಿಯೋಜನೆ ಮಾಡದ ಕಾರಣ, ನಿತ್ಯ ಮಕ್ಕಳು ಶಾಲೆ ಕಡೆ ಬಂದು ನೋಡಿಕೊಂಡು ಮನೆಗೆ ಹೋಗುವಂತಾಗಿದೆ. ಶಿಕ್ಷಕರಿಲ್ಲದ ಕಾರಣ ಶಾಲೆಯ ಮಕ್ಕಳಿಗೆ 4ತಿಂಗಳಿಂದ ಬಿಸಿಯೂಟ ಭಾಗ್ಯವಿಲ್ಲ. ಕ್ಷೇತ್ರ ಶಿಕ್ಷಣಾಧಿಕಾರಿಗೆ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಮನವಿ ಮಾಡಿದರೂ ಯಾವುದೇ ಉಪಯೋಗವಿಲ್ಲ, ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಗ್ರಾಮದ ಕಾಲೇಜು ವಿದ್ಯಾರ್ಥಿ ಬಿ.ವಿ.ನಾಗೇಶ್ ಎಂಬಾತ ತಮ್ಮ ಬಿಡುವಿನ ವೇಳೆ ಪಾಠ ಹೇಳಿಕೊಡುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಸಾಮಗ್ರಿಗಳು ತುಕ್ಕು ಹಿಡಿದಿವೆ. ಶಾಲೆಯೊಳಗೆ ಕಾಲಿಡುತ್ತಿದ್ದಂತೆ ನೊಣಗಳ ರಾಶಿ ಸ್ವಾಗತಿಸುತ್ತದೆ.
ಸರ್ಕಾರ ಮಾತ್ರ ನಮ್ಮ ಶಾಲೆಗಳ ಸ್ಥಿತಿಗತಿ ಉತ್ತಮವಾಗಿದೆ, ದಾಖಲಾತಿ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಹೇಳುತ್ತಿದೆ. ಆದರೆ, ಗಡಿ ಗ್ರಾಮದ ಶಾಲೆಗಳ ಸ್ಥಿತಿ ಅದಕ್ಕೆ ವಿರುದ್ಧವಾಗಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರ್ಕಾರದ ಗುರಿಯಾಗಿದೆ. ಆದರೆ, ನಮ್ಮ ಗ್ರಾಮದ ಶಾಲೆಗೆ ಶಿಕ್ಷಕರನ್ನು ನೇಮಿಸಿಲ್ಲ, ಇನ್ನಾದರೂ ಶಿಕ್ಷಕರನ್ನು ನೇಮಿಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲಿ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.