ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಪೂರಕವಾಗಿ ನಡೆಯುತ್ತಿರುವ ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನವು ಕೋರಮಂಗಲದ 8ನೇ ಬ್ಲಾಕಿನಲ್ಲಿರುವ ಕೆಂಪೇಗೌಡರ ಸೊಸೆ ಲಕ್ಷ್ಮಿದೇವಿ ಸಮಾಧಿಯ ಬಳಿ ನಡೆಯಿತು.
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ಮುಖಂಡರಾದ ಎನ್ ಆರ್ ರಮೇಶ್, ಶ್ರೀಧರ ರೆಡ್ಡಿ, ರವಿ, ಲೋಕನಾಥ ರೆಡ್ಡಿ, ಗೀತಾ ವಿವೇಕಾನಂದ ಮುಂತಾದವರು ಲಕ್ಷ್ಮಿದೇವಿ ಸಮಾಧಿಗೆ ಪೂಜೆ ಸಲ್ಲಿಸಿ, ಮೃತ್ತಿಕೆ ಸಂಗ್ರಹಿಸಿದರು. ಬಿಜೆಪಿ ಸಂಘಟನಾ ಕಾರ್ಯದರ್ಶಿ ದಶರಥ ಇದ್ದರು.
ಅಭಿಯಾನದ ಅಂಗವಾಗಿ ಈಜಿಪುರ ಬಸ್ ನಿಲ್ದಾಣದಿಂದ ಆರಂಭವಾದ ಮೆರವಣಿಗೆಯಲ್ಲಿ ನಿರೀಕ್ಷೆಗೂ ಮೀರಿ ಜನ ಜಮಾಯಿಸಿದ್ದರು. ಉದ್ದಕ್ಕೂ ಕೆಂಪೇಗೌಡರು ಮತ್ತು ಭಾರತ ಮಾತೆಗೆ ಜಯಘೋಷಗಳು ಅನುರಣಿಸುತ್ತಿದ್ದವು.
ಇದರ ಜತೆಗೆ ಡೊಳ್ಳು ಕುಣಿತ ಮುಂತಾದ ಜಾನಪದ ನೃತ್ಯಗಳ ಮೆರುಗು ಚಿತ್ತಾಕರ್ಷಕವಾಗಿತ್ತು. ಈ ಸಂದರ್ಭದಲ್ಲಿ ಸ್ವತಃ ಸಚಿವರು ಎತ್ತಿನ ಗಾಡಿ ಹೊಡೆದುಕೊಂಡು, ಜನರ ನಡುವೆ ಬೆರೆತರು.
ಮೆರವಣಿಗೆಯು ಹಾದಿಯಲ್ಲಿ ಬಿಟಿಎಂ ಬಡಾವಣೆಯಲ್ಲಿ ಇರುವ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಜೊತೆಗೆ ಮಡಿವಾಳದ ಸೋಮೇಶ್ವರ ದೇವಸ್ಥಾನ, ಕೋರಮಂಗಲದ ಸಿದ್ಧಾರ್ಥ ಕಾಲೋನಿಯಲ್ಲಿ ಇರುವ ಗಣೇಶನ ದೇವಾಲಯ, ಈಜಿಪುರದ ಶ್ರೀರಾಮ ದೇವಸ್ಥಾನ, ದೊಡ್ಡಮ್ಮದೇವಿ ಮಂದಿರಗಳಿಗೆ ತೆರಳಿ, ಪೂಜೆ ನೆರವೇರಿಸಲಾಯಿತು.