– ಇಲ್ಲಿ ಹೇಳಹೊರಟ ವಿಷಯ ಹೊಸಬರ “ಲಾಕ್’ ಚಿತ್ರದ ಪತ್ರಿಕಾಗೋಷ್ಠಿ ಬಗ್ಗೆ. ಅದು ನಿರ್ದೇಶಕ, ನಿರ್ಮಾಪಕ, ನಾಯಕ, ನಾಯಕಿ ಮತ್ತು ತಂತ್ರಜ್ಞರೆಲ್ಲರಿಗೂ ಮೊದಲ ಅನುಭವ. ಸಾಮಾನ್ಯವಾಗಿ ನಿರ್ದೇಶಕರು ಚಿತ್ರದ ಒನ್‌ಲೈನ್ ಸ್ಟೋರಿ ಹೇಳಿ, ಚಿತ್ರದ ಬಗ್ಗೆ ಮಾಹಿತಿ ಕೊಡುವುದು ವಾಡಿಕೆ. ಆದರೆ, “ಲಾಕ್’ ಚಿತ್ರದ ನಿರ್ದೇಶಕ ಪರಶುರಾಮ್ ಮಾತ್ರ ತಮ್ಮ “ಲಾಕ್’ ಓಪನ್ ಮಾಡಲೇ ಇಲ್ಲ. ಕಥೆ ಏನೆಂದರೆ, “ಇದು ಪ್ರತಿಯೊಬ್ಬ ಭಾರತೀಯನೂ ನೋಡಬೇಕಾದ ಚಿತ್ರ’ ಅಂದರು. ಯಾಕೆ ಎಲ್ಲರೂ ನೊಡಬೇಕಾದ ಸಿನಿಮಾ ಅಂತ ಪ್ರಶ್ನಿಸಿದರೆ, “ನಾನಿಲ್ಲಿ ವ್ಯವಸ್ಥೆ ಕುರಿತು ಹೇಳಿದ್ದೇನೆ. ಹಾಗಾಗಿ ನೋಡಬೇಕು’. ಹೋಗಲಿ ನಿಮ್ಮ ಕಥೆಯ ಒಂದು ಎಳೆ ಹೇಳಿ, “ಹಾಗೆ ಹೇಳಲು ಆಗುವುದಿಲ್ಲ. ಚಿತ್ರಮಂದಿರದಲ್ಲೇ ನೋಡಿ. ಒಂದು ಘಟನೆ ಬಗ್ಗೆ ವಿವರಿಸಿದ್ದೇನೆ. ಅದೇ ಮೂಲಕಥೆ. ದೇಶದ ಮಣ್ಣಲ್ಲಿ ಮುಚ್ಚಿಹೋಗಿರುವ ಅನೇಕ ಕಥೆಗಳಲ್ಲಿ ತುಂಬಾ ಅಗತ್ಯವಾದ ಒಂದು ಘಟನೆ ಇಲ್ಲಿದೆ. ಅದು ಸಸ್ಪೆನ್ಸ್’ ಅಂದರು. “ಸರಿ ಕಥೆಯ ಗುಟ್ಟು ಹೇಳದಿದ್ದರೂ ಪರವಾಗಿಲ್ಲ. ನಿಮ್ಮ ಹಿನ್ನೆಲೆ ಹೇಳಿ’ ಅಂದಿದ್ದಕ್ಕೆ, “ಹದಿನೆಂಟು ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ. ನಾಗತಿಹಳ್ಳಿ ಅವರೊಂದಿಗೆ, ಓಂ ಪ್ರಕಾಶ್ ಅವರ ಜೊತೆ, ಪಿ.ಶೇಷಾದ್ರಿ ಬಳಿ ಕೆಲಸ ಮಾಡಿದ್ದೇನೆ. ನಡುವೆ ಗ್ಯಾಪ್ ಪಡೆದು ಮುಂಬೈಗೆ ಹೋಗಿದ್ದೆ. ಪುನಃ ಇಲ್ಲಿಗೆ ಬಂದು ಸಿನಿಮಾ ಮಾಡುವ ಕನಸು ಕಂಡೆ. ನಿರ್ಮಾಪಕರು ಸಿಕ್ಕರು. ಕಥೆ ಹೇಳಿದೆ. ಸಿನಿಮಾ ಮಾಡಿದ್ದೇನೆ’ ಅಂತ ವಿವರ ಕೊಟ್ಟರು ಪರಶುರಾಮ್.
Advertisement
ಚಿತ್ರಕ್ಕೆ ಅಭಿಲಾಶ್ ಹೀರೋ. ಇವರಿಗೆ ಇದು ಮೊದಲ ಚಿತ್ರ. ಅವರಿಗೆ ಕಥೆ ಏನೆಂಬುದು ಗೊತ್ತಿಲ್ಲವಂತೆ. ನಿರ್ದೇಶಕರು ಆಡಿಷನ್ ನಡೆಸಿ, ಆಯ್ಕೆ ಮಾಡಿದ ಬಳಿಕ ಹೇಳಿದ್ದನ್ನಷ್ಟೇ ಮಾಡು ಅಂದರು. ಮಾಡಿದ್ದೇನೆ. “ಲಾಕ್’ ಬಗ್ಗೆ ಏನೂ ಗೊತ್ತಿಲ್ಲ. ಪಾತ್ರ ಮಾತ್ರ ಏನೋ ಒಂದನ್ನು ಹುಡುಕಿ ಹೊರಡುತ್ತದೆ ಅದೇ ಸಸ್ಪೆನ್ಸ್ ಅಂದರು ಅಭಿಲಾಶ್.