Advertisement
ವ್ಯಾಪಾರಿಗಳ ಅಸಡ್ಡೆ ಹಾಗೂ ಅಧಿಕಾರಿಗಳ ವೈಫಲ್ಯದಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಮೈಸೂರು ಮಹಾರಾಜರು ನಿರ್ಮಿಸಿದ ಪಾರಂಪರಿಕ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿ ಪ್ರವೇಶಿಸಿದಾಗ ಕಂಡುಬರುವ ದೃಶ್ಯಗಳಿವು…
Related Articles
Advertisement
ಸ್ವಚ್ಛತೆಗೆ ವ್ಯಾಪಾರಿಗಳ ಅಸಡ್ಡೆ: ಪಾಲಿಕೆಯಿಂದ ಮಾರುಕಟ್ಟೆ ಸ್ವಚ್ಛಗೊಳಿಸಲು ಹಲವಾರು ಬಾರಿ ಅಭಿಯಾನ ಕೈಗೊಂಡು, ವ್ಯಾಪಾರಿಗಳು ತಾವಿರುವ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ತಿಳಿಸಲಾಗಿದೆ. ಆದರೆ, ವ್ಯಾಪಾರಿಗಳು ಮಾತ್ರ ತ್ಯಾಜ್ಯವನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇನ್ನು ತರಕಾರಿ ವ್ಯಾಪಾರಿಗಳು ಕೊಚ್ಚೆಯ ನಡುವೆಯೇ ವ್ಯಾಪಾರ ವಹಿವಾಟಿನಲ್ಲಿ ತೊಡಗುತ್ತಿರುವುದು ಮಾರುಕಟ್ಟೆ ಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಿದೆ.
ವಾರ್ಷಿಕ 2.40 ಕೋಟಿ ಆದಾಯ: ಮಾರುಕಟ್ಟೆಯಲ್ಲಿ ಪಾಲಿಕೆಯಿಂದ ಅನುಮತಿ ಪಡೆದಿರುವ 1,510 ಮಳಿಗೆಗಳಿದ್ದು, ಇವುಗಳಿಂದ ಹಳೆಯ ದರದಂತೆ ಮಾಸಿಕ 18ರಿಂದ 20 ಲಕ್ಷ ರೂ.ವರೆಗೆ, ವಾರ್ಷಿಕ ಸುಮಾರು 2.40 ಕೋಟಿ ರೂ. ಬಾಡಿಗೆ ಸಂಗ್ರಹವಾಗುತ್ತಿದೆ. ಆದರೆ, ಮಳಿಗೆಗಳ ಮುಂದೆ ಹಾಗೂ ಪಾದಚಾರಿ ಮಾರ್ಗದಲ್ಲಿ ಸಾವಿರಾರು ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದು, ಆದಾಯ ಮಾತ್ರ ಅಧಿಕಾರಿಗಳು ಹಾಗೂ ಕಾಣದ ಕೈಗಳ ಪಾಲಾಗುತ್ತಿದೆ. ಇನ್ನು ನಿವೃತ್ತರಾಗಿರುವ ಪಾಲಿಕೆ ಅಧಿಕಾರಿಗಳು ಸಹ ಇಂದಿಗೂ ಕೆಲಸದಲ್ಲಿ ತೊಡಗಿಕೊಳ್ಳುತ್ತಿರುವುದು ವಿಪರ್ಯಾಸ ಎಂಬುದು ಮಾಜಿ ಮೇಯರ್ ಒಬ್ಬರ ಆರೋಪ.
ತ್ಯಾಜ್ಯ ಸುರಿವ ಜಾಗದಲ್ಲೂ ಮಳಿಗೆ!: ನಿಯಮದಂತೆ ಪೌರಕಾರ್ಮಿಕರು ನಿತ್ಯ 11 ಗಂಟೆಯೊಳಗೆ ಮಾರುಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಆ ನಂತರದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಾಕಲು ಪಾಲಿಕೆಯಿಂದ ಮೂರು ಜಾಗಗಳನ್ನು ಗುರುತಿಸಲಾಗಿತ್ತು. ವ್ಯಾಪಾರಿಗಳು 11ರ ನಂತರ ಸೃಷ್ಟಿಯಾಗುವ ತ್ಯಾಜ್ಯವನ್ನು ಆ ಜಾಗಗಳಲ್ಲಿ ಹಾಕಿದರೆ ಪೌರಕಾರ್ಮಿಕರು ಮರು ದಿನ ಬೆಳಗ್ಗೆ ತೆರವು ಮಾಡುತ್ತಾರೆ. ಆದರೆ, ತ್ಯಾಜ್ಯ ಹಾಕಲು ಗುರುತಿಸಿದ್ದ ಮೂರೂ ಜಾಗಗಳಲ್ಲಿ ಮಳಿಗೆಗಳು ನಿರ್ಮಾಣವಾಗಿವೆ. ಪರಿಣಾಮ, ತ್ಯಾಜ್ಯ ರಸ್ತೆಗೆ ಬೀಳುತ್ತಿದೆ.
ಅಧಿಕಾರಿಗಳು ಮಾಲ್‌ಗೆ, ಮೇಯರ್ ಮಾರುಕಟ್ಟೆಗೆ: ಪಾಲಿಕೆ ಅಧಿಕಾರಿಗಳು ಮಾಲ್‌ಗಳಿಗೆ ಹೋಗಿ ಖುಷಿಯಾಗಿ ಕಾಲ ಕಳೆಯುತ್ತಾರೆ. ಆದರೆ, ಗ್ರಾಹಕರು ಸಹ ಮಾರುಕಟ್ಟೆಗಳಿಗೆ ಅಷ್ಟೇ ಖುಷಿಯಿಂದ ಬರಲಿ ಎಂದು ಮಾರುಕಟ್ಟೆ ಸ್ವಚ್ಛತೆಗೆ ಮುಂದಾಗುವುದಿಲ್ಲ. ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ ಸಂಸ್ಕರಣೆಗೆ ಬಯೋಮಿಥನೈಸೇಷನ್ ಘಟಕ ನಿರ್ಮಿಸಲು ಅಧಿಕಾರಿಗಳಿಗೆ ಅದನ್ನು ನಿರ್ಮಿಸಲು ಕಷ್ಟವಾಗಿದೆ ಎಂದು ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಆರೋಪಿಸಿದರು.
ಮೈಸೂರು ಮಹಾರಾಜರು ನಿರ್ಮಿಸಿದ ಮಾರುಕಟ್ಟೆ ಸ್ವಚ್ಛಗೊಳಿಸಬೇಕೆಂದು 42 ವಾರ ಮಾರುಕಟ್ಟೆಗೆ ಭೇಟಿ ನೀಡಿದ್ದೇನೆ. ಆದರೆ, ಇಂದು ಮಾರುಕಟ್ಟೆ ನೋಡಲಾಗದಂತಹ ದುಸ್ಥಿತಿಯಲ್ಲಿದೆ. ಮಾರಕಟ್ಟೆ ಸ್ವಚ್ಛತೆ ಕಾಪಾಡಬೇಕಾದ ಅಧಿಕಾರಿಗಳು ಬೇರೆಯದೇ ಕೆಲಸದಲ್ಲಿ ನಿರತರಾಗಿರುತ್ತಾರೆ. ಮಾರುಕಟ್ಟೆ ಸಂಪೂರ್ಣವಾಗಿ ಸ್ವಚ್ಛವಾಗಬೇಕಾದರೆ, ದಕ್ಷ ಅಧಿಕಾರಿಗಳು ಉಪ ಆಯುಕ್ತರು, ಕಂದಾಯ ಅಧಿಕಾರಿ ಹಾಗೂ ಸಹಾಯಕ ಇಂಜಿನಿಯರ್‌ಗಳನ್ನು ನೇಮಿಸಬೇಕು ಎಂದಿದ್ದಾರೆ.
* ವೆಂ. ಸುನೀಲ್‌ಕುಮಾರ್