ಬೆಂಗಳೂರು: ಜಗತ್ತಿಗೆ ಶಾಂತಿ ಸಾರಿದ ಏಸುಕ್ರಿಸ್ತನ ಆರಾಧನೆಗೆ ರಾಜಧಾನಿ ಬೆಂಗಳೂರು ಸಿದ್ಧವಾಗಿದ್ದು, ಸೋಮವಾರ ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದಲ್ಲಿನ ಚರ್ಚ್‌ಗಳು ಅಲಂಕಾರಿಕ ದೀಪಗಳಿಂದ ಕಂಗೊಳಿಸುತ್ತಿವೆ. ಜತೆಗೆ ಪ್ರಮುಖ ಮಾರುಕಟ್ಟೆಗಳಲ್ಲಿ ಉಡುಗೊರೆ, ಅಲಂಕಾರಿಕ ವಸ್ತುಗಳ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ.
ಕ್ರಿಸ್‌ಮಸ್ ಹಬ್ಬದ ಸಲುವಾಗಿ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಚರ್ಚ್‌ಗಳು, ಕ್ರೈಸ್ತ ಬಾಂಧವರ ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಚರ್ಚ್‌ಗಳು ಅತ್ಯಾಕರ್ಷಕ ದೀಪಾಲಂಕಾರ, ಬಣ್ಣದ ಕಾಗದಗಳಿಂದ ಮಿನುಗುತ್ತಿವೆ. ಜತೆಗೆ ಹಚ್ಚ ಹಸುರಿನ ಕ್ರಿಸ್‌ಮಸ್ ಮರಗಳು, ಮರಗಳಲ್ಲಿ ನೇತು ಹಾಕಲಾಗಿರುವ ಉಡುಗೊರೆಗಳು ಕಣ್ಮನ ಸೆಳೆಯುತ್ತಿವೆ. ಇನ್ನು ಕ್ರೈಸ್ತ ಬಾಂಧವರ ಮನೆಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದ್ದು, ಮನೆಯ ಮುಂದೆ ನಕ್ಷತ್ರಾಕಾರದ ದೀಪಗಳನ್ನು ನೇತು ಹಾಕಲಾಗಿದೆ.
ಕ್ಯಾಥೋಲಿಕರ ಅತ್ಯಂತ ಪ್ರಾಚೀನ ಚರ್ಚ್‌ಗಳಲ್ಲಿ ಒಂದಾಗಿರುವ ಶಿವಾಜಿನಗರದ ಸಂತ ಮರಿಯ ಬೆಸಿಲಿಕ ಚರ್ಚ್‌ಗೆ ಭಾನುವಾರವೇ ಹೆಚ್ಚಿನ ಜನರು ಭೇಟಿ ನೀಡಿದ್ದು ಕಂಡು ಬಂತು. ಇದರೊಂದಿಗೆ ಫ್ರೆàಜರ್‌ಟೌನ್‌ನಲ್ಲಿರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್, ಬ್ರಿಗೇಡ್ ರಸ್ತೆಲ್ಲಿರುವ ಸಂತ ಪ್ಯಾಟ್ರಿಕ್ಸ್ ಚರ್ಚ್, ಚಾಮರಾಜಪೇಟೆಯ ಸಂತ ಜೋಸೆಫ್ ಚರ್ಚ್, ಕಾರ್ಪೊರೇಷನ್ ವೃತ್ತದ ಹಡ್ಸನ್ ಚರ್ಚ್‌ಗಳು ಕ್ರಿಸ್‌ಮಸ್ ಆಚರಣೆಗೆ ಸಿದ್ಧವಾಗಿವೆ.
ಸೆಳೆಯುವ ಸಾಂತಾಕ್ಲಾಸ್: ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಚರ್ಚ್‌ಗಳಲ್ಲಿ ಸಾಂತಾಕ್ಲಾಸ್ ವೇಷಧಾರಿಗಳು ಜನರನ್ನು ಹೆಚ್ಚು ಸೆಳೆಯಲಿದ್ದಾರೆ. ಕ್ರಿಸ್‌ಮಸ್ ದಿನದಂದು ಏಸುಕ್ರಿಸ್ತನು ಸಾಂತಾಕ್ಲಾಸ್ ರೂಪದಲ್ಲಿ ಬಂದು ಉಡುಗೊರೆ ನೀಡಿದರೆ ಒಳ್ಳೆಯದಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ಜತೆಗೆ ಚರ್ಚ್‌ಗಳಿಗೆ ಬರುವ ಮಕ್ಕಳೊಂದಿಗೆ ಆಟವಾಡುವ ಸಾಂತಾಕ್ಲಾಸ್ ಮಕ್ಕಳಿಗೆ ಉಡುಗೊರೆ ನೀಡಿ ಖುಷಿಪಡಿಸುತ್ತಾರೆ. ಹೀಗಾಗಿ ಚರ್ಚ್‌ಗಳಲ್ಲಿ ಸಾಂತಾಕ್ಲಾಸ್ ವೇಷಧಾರಿಗಳೇ ಆಕರ್ಷಣೀಯವಾಗಿದ್ದಾರೆ.
ಬಿಗಿ ಪೊಲೀಸ್ ಭದ್ರತೆ: ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲ ಚರ್ಚ್‌ಗಳಿಗೆ ಬೃಹತ್ ಸಂಖ್ಯೆಯಲ್ಲಿ ಭಕ್ತರು ಬರುವುದರಿಂದ ಚರ್ಚ್‌ಗಳಲ್ಲಿ ಪೊಲೀಸ್, ಗೃಹರಕ್ಷಕ ದಳ, ಆ್ಯಂಬುಲೆನ್ಸ್‌ಗಳೊಂದಿಗೆ ವಿಶೇಷ ಭದ್ರತೆಗಳನ್ನು ಒದಗಿಸಲಾಗಿದೆ. ಜತೆಗೆ ಕ್ರೈಸ್ತ ಸಮುದಾಯದ ವಿವಿಧ ಸಂಘ-ಸಂಸ್ಥೆಗಳು ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಉಚಿತ ಆರೋಗ್ಯ ಶಿಬಿರ, ಬಡ ಹಾಗೂ ಕೊಳೆಗೇರಿ ಮಕ್ಕಳಿಗೆ ಪುಸ್ತಕ ವಿತರಣೆ ಸೇರಿದಂತೆ ವಿವಿಧ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಕೊಂಡಿವೆ.
ಕ್ರಿಸ್‌ಮಸ್ ವಹಿವಾಟು ಬಲು ಜೋರು: ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್, ಗಾಂಧಿಬಜಾರ್, ಶಿವಾಜಿನಗರ ಸೇರಿ ವಿವಿಧ ಕಡೆಗಳಲ್ಲಿನ ಕ್ರಿಸ್‌ಮಸ್ ಸಂದೇಶ ಸಾರುವ ಕಾರ್ಡ್‌ಗಳು, ಬಾಲ ಏಸುಕ್ರಿಸ್ತ ಮತ್ತು ಮೇರಿ ಮಾತೆಯ ಭಾವಚಿತ್ರಗಳು, ಗೃಹಾಲಂಕಾರಿಕ ವಸ್ತುಗಳು, ಉಡುಗೊರೆಗಳು, ಕ್ಯಾಂಡಲ್‌ಗಳು, ಗೋದಲಿ ಗೊಂಬೆಗಳು, ಸಾಂತಾಕ್ಲಾಸ್ ಗೊಂಬೆಗಳ ಮಾರಾಟ ಮಳಿಗೆಗಳಲ್ಲಿ ಜನರು ತುಂಬಿದ್ದು, ಬೇಕರಿಗಳಲ್ಲಿ ಕೇಕ್ ಹಾಗೂ ಚಾಕೋಲೆಟ್ ಖರೀದಿ ಜೋರಾಗಿತ್ತು.