ಧಾರವಾಡ: ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ನೀಡುವಂತೆ ಆಗ್ರಹಿಸಿ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೇಂದ್ರದ ಚಿಣ್ಣರನ್ನು ರಸ್ತೆ ಮಧ್ಯೆಯೇ ಕುಳ್ಳಿಸಿ, ಪೋಷಕರು ರಸ್ತೆತಡೆ ಕೈಗೊಂಡ ಘಟನೆ ಗುರುವಾರ ನಡೆದಿದೆ. ಗ್ರಾಮದ ಶಿವಾಜಿ ವೃತ್ತದಲ್ಲಿ ಪೋಷಕರ ನೇತೃತ್ವದಲ್ಲಿ ಅಂಗನವಾಡಿ ಕೇಂದ್ರದ ಚಿಣ್ಣರು ರಸ್ತೆ ಮಧ್ಯೆಯೇ ಕಲಿಕಾ ಪ್ರಕ್ರಿಯೆ ಕೈಗೊಂಡು, ಸಂಪೂರ್ಣ ರಸ್ತೆ ಬಂದ್ ಮಾಡುವ ಮೂಲಕ ಗಮನ ಸೆಳೆದರು.
ಇದೇ ವೇಳೆ ಸ್ಥಳಕ್ಕೆ ಬಂದ ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ಹಂಚನಾಳ ಕೂಡ, ರಸ್ತೆಯಲ್ಲಿಯೇ ಮಕ್ಕಳಿಗೆ ಪಾಠ ಬೋಧನೆ, ಹಾಡು ಹೇಳಿಕೊಟ್ಟರು. ಮಳೆ ಬಂದರೂ ಜಗ್ಗದ ಪೋಷಕರು, ಮಕ್ಕಳಿಗಾಗಿ ತಾಡಪತ್ರಿ ಹಿಡಿದು ನಿಂತರು.
ಗ್ರಾಮದ 12ನೇ ಅಂಗನವಾಡಿ ಕೇಂದ್ರ ಹೊಂದಿದ್ದ ಕಟ್ಟಡ ಹಳೆಯದಾಗಿದ್ದರಿಂದ ರಿಪೇರಿಗಾಗಿ ಅಂಗನವಾಡಿ ಕೇಂದ್ರವನ್ನು ಎರಡೂವರೆ ವರ್ಷಗಳ ಹಿಂದೆ ಗ್ರಾಪಂ ವಶಕ್ಕೆ ಪಡೆದಿದ್ದು, ಈವರೆಗೆ ರಿಪೇರಿ ಮಾಡಿ ಮರಳಿ ನೀಡಿಲ್ಲ. ಹೀಗಾಗಿ ಕೇಂದ್ರದ 30ಕ್ಕೂ ಹೆಚ್ಚು ಚಿಣ್ಣರು ಅಲೆದಾಡುವಂತಾಗಿದ್ದು, ಬಾಡಿಗೆ ಮನೆಯಲ್ಲಿ ಕೇಂದ್ರ ನಡೆದರೂ ಬಾಡಿಗೆ ಪಾವತಿ ಸರಿಯಾಗಿ ಆಗುತ್ತಿಲ್ಲ. ಗ್ರಾಮದ ಎಲ್ಲ ಅಂಗನವಾಡಿಗಳಿಗೆ ಸ್ವತಃ ಕಟ್ಟಡವಿದೆ. ಆದರೆ ನಮಗೆ ಮಾತ್ರ ಅಲೆದಾಡುವುದು ತಪ್ಪಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ನಿರ್ಮಲಾ ಹಂಚನಾಳ ದೂರಿದರು.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಡಿಒ ಬಿ.ಡಿ. ಚವರಡ್ಡಿ, ಅಧ್ಯಕ್ಷೆ ತೇಜಸ್ವಿನಿ ತಲವಾಯಿ, ಉಪಾಧ್ಯಕ್ಷ ವಿಠuಲ ಇಂಗಳೆ ಅವರೊಂದಿಗೆ ಪೋಷಕರು ವಾಗ್ವಾದ ನಡೆಸಿದರು. ಅನೇಕ ಬಾರಿ ಮನವಿ ಕೊಟ್ಟರೂ ಬರದೆ ಇರುವವರು ಈಗ ಯಾಕೆ ಬಂದಿದ್ದೀರಾ?ಅಂಗನವಾಡಿಗೆ ಸ್ವಂತ ಕಟ್ಟಡ ಯಾವಾಗ ಕೊಡುತ್ತೀರಿ? ಎಂದು ಪ್ರಶ್ನಿಸಿದರು.
ನಂತರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿಕೊಂಡು ಸ್ವಂತ ಕಟ್ಟಡ ಆಗುವವರೆಗೂ ಗ್ರಾಮದ ಡಾ|ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಅಂಗನವಾಡಿ ಕೇಂದ್ರ ತೆರೆಯಲು ಅನುಮತಿ ನೀಡಿ, ಲಿಖೀತ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.