ಬೀದರ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಬೀದರ ಮತ್ತು ಯಾದಗಿರಿ ಜಿಲ್ಲಾ ಮತ್ತು ತಾಲೂಕು ಟಾಪರ್ಸ್‌ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಆ.15ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ನಗದು ಬಹುಮಾನ ವಿತರಿಸಿ ಸನ್ಮಾನಿಸಲಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಮೂವರು ಮತ್ತು ತಾಲೂಕು ಮಟ್ಟದ ಮೂವರು ಟಾಪರ್ಸ್‌ಗಳಿಗೆ ನಗದು ಬಹುಮಾನ ವಿತರಿಸಲಿದ್ದು, ಜಿಲ್ಲಾ ಟಾಪರ್ಸ್ ಗಳಿಗೆ ಪ್ರಥಮ ಬಹುಮಾನವಾಗಿ 11,000 ರೂ., ದ್ವಿತೀಯ ಬಹುಮಾನ 7,000 ರೂ.ಹಾಗೂ ತೃತೀಯ ಬಹುಮಾನ 5,000 ರೂ. ನೀಡಲಾಗುವುದು. ತಾಲೂಕು ಟಾಪರ್ಸ್‌ಗಳಿಗೆಪ್ರಥಮ ಬಹುಮಾನವಾಗಿ 7,000, ದ್ವಿತೀಯ 5,000 ಹಾಗೂ ತೃತೀಯ 2,500 ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೆ ಶಾಸಕರಾಗಿದ್ದಾಗ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ವೃದ್ಧಿಸಿ, ಫಲಿತಾಂಶ ಸುಧಾರಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುತ್ತ ಬಂದಿದ್ದೇನೆ. ಈಗ ತಾವು ಸಚಿವರಾಗಿದ್ದು, ಈ ಬಾರಿ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡುತ್ತಿದ್ದು, ಇದರಿಂದ ಮಕ್ಕಳ ಮನೋಬಲ ಹೆಚ್ಚಿಸಲು ಸಹಕಾರಿ ಆಗಲಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಪಾಲಕರಿಗೂ ಸನ್ಮಾನಿಸುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಹರ್ಷ: ಕೋವಿಡ್ ಸೋಂಕು ಭೀತಿ ನಡುವೆಯೂ ಜಿಲ್ಲೆಯ ವಿದ್ಯಾರ್ಥಿಗಳು ಸುರಕ್ಷತೆಯಿಂದ ಪರೀಕ್ಷೆ ಎದುರಿಸಿ ಹಿಂದೆಂದಿಗಿಂತಲೂ ಉತ್ತಮ ಸಾಧನೆ ತೋರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಪ್ರತಿಸಲ ಕಡೆಯ ಸ್ಥಾನದಲ್ಲಿರುತ್ತಿದ್ದ ಜಿಲ್ಲೆ ಈ ಬಾರಿ ಸುಧಾರಣೆ ಕಂಡಿದೆ. ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯು 29ರಿಂದ 24ನೇ ಸ್ಥಾನಕ್ಕೆ ಏರಿಕೆ ಕಂಡಿದೆ. ಪಿಯುಸಿಯಲ್ಲಿಯೂ ಈ ವರ್ಷ 18ನೇ ಸ್ಥಾನಕ್ಕೇರಿರುವುದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅಧಿಕಾರಿಗಳಿಗೆ ಸೂಚನೆ: ಈ ಬಾರಿಯ ಫಲಿತಾಂಶದಲ್ಲಿ ಇನ್ನೂ ಹೆಚ್ಚಿನ ಸ್ಥಾನ ಬರಬಹುದೆಂಬ ನಿರೀಕ್ಷೆ ಹೊಂದಿದ್ದೆ. ಆದರೂ ಆಶಾದಾಯಕ ಫಲಿತಾಂಶ ಬಂದಿದೆ. ಮುಂದಿನ ದಿನಗಳಲ್ಲಿ ಬೀದರ ಜಿಲ್ಲೆಯು ಟಾಪ್ 10 ಜಿಲ್ಲೆಗಳ ಪಟ್ಟಿಯಲ್ಲಿ ಇರಬೇಕು ಎನ್ನುವುದು ನನ್ನ ಸದಾಶಯ. ಅದರಂತೆ ಸಾರ್ವನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಇನ್ನಷ್ಟು ಚುರುಕಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಚಿವರು ಸೂಚಿಸಿದ್ದಾರೆ