Advertisement

ಪಿನ್ ಕೋಡ್ ಜಾರಿಗೆ ಬಂದು ಆ.15ಕ್ಕೆ 50 ವರ್ಷ: ಅಂಚೆ ಕಚೇರಿಯ ಪಿನ್ ಕೋಡ್ ಇತಿಹಾಸ ಗೊತ್ತಾ?

04:45 PM Aug 13, 2022 | Team Udayavani |

ಭಾರತ ಸ್ವತಂತ್ರಗೊಂಡು ಬರೋಬ್ಬರಿ 75 ವರ್ಷಗಳು ಸಂದಿವೆ. ಈ ಹಿನ್ನೆಲೆಯಲ್ಲಿ 2022ರ ಆಗಸ್ಟ್ 15 ದೇಶದ ಪ್ರಜೆಗಳಿಗೆ ಮಹತ್ವದ ದಿನವಾಗಿದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಡಗರದಲ್ಲಿರುವ ಹೊತ್ತಿನಲ್ಲಿ ಅದಕ್ಕೊಂದು ಸೇರ್ಪಡೆ ಎಂಬಂತೆ ನಾವೆಲ್ಲ ಬಹುತೇಕ ಉಪಯೋಗಿಸುತ್ತಿದ್ದ ಅಂಚೆ ಕಚೇರಿಯ ಪಿನ್ ಕೋಡ್ ಆವಿಷ್ಕಾರಗೊಂಡು ಇದೇ ಆಗಸ್ಟ್ 15ಕ್ಕೆ 50 ವರ್ಷಗಳಾಗುತ್ತದೆ!

Advertisement

ಇದನ್ನೂ ಓದಿ:ನಿನ್ನ ಡೆಡಿಕೇಶನ್‌… ನಿರೂಪ್ ಗಾಯದ ಪೋಟೋ ಹಂಚಿಕೊಂಡು ಬರ್ತ್‌ ಡೇ ವಿಶ್‌ ಮಾಡಿದ ಅನೂಪ್‌!

ಹೌದು ಪೋಸ್ಟಲ್ ಇಂಡೆಕ್ಸ್ ನಂಬರ್ (ಅಂಚೆ ಸೂಚ್ಯಂಕ ಸಂಖ್ಯೆ) ಎಂಬುದು ಪಿನ್ ಕೋಡ್ ಎಂದೇ ಹೆಚ್ಚು ಪ್ರಚಲಿತವಾಗಿದೆ. ಯಾವುದೇ ಪತ್ರವಿರಲಿ, ಕಚೇರಿಯ ನೋಟಿಸ್ ಆಗಲಿ ವಿಳಾಸ ಪೂರ್ಣವಾಗಿ ಬರೆದ ನಂತರ ಕೊನೆಗೆ ಆರು ನಂಬರ್ ಒಳಗೊಂಡ ಪಿನ್ ಕೋಡ್ ಬರೆಯಲಾಗುತ್ತಿತ್ತು. ಇದು ಭಾರತೀಯ ಅಂಚೆ ಇಲಾಖೆಯಲ್ಲಿನ ವ್ಯವಸ್ಥೆಯಾಗಿದ್ದು.

ಪಿನ್ ಕೋಡ್ ಇತಿಹಾಸ ಗೊತ್ತಾ?

1972ರ ಆಗಸ್ಟ್ 15ರಂದು ಅಂದಿನ ಸಂವಹನ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದ ಶ್ರೀರಾಮ್ ಭಿಕಾಜಿ ಅವರು ಮೊತ್ತ ಮೊದಲ ಬಾರಿಗೆ ಪಿನ್ ಕೋಡ್ ಅನ್ನು ಪರಿಚಯಿಸಿದ್ದರು. ಈ ನೂತನ ವ್ಯವಸ್ಥೆಯಿಂದಾಗಿ ಅಂಚೆ ಕಚೇರಿಯಲ್ಲಿ ಪತ್ರಗಳನ್ನು ವಿಂಗಡಿಸುವ ಮತ್ತು ಮೇಲ್ ಗಳನ್ನು ರವಾನಿಸುವ ಕೆಲಸ ಇನ್ನಷ್ಟು ಸರಳವಾಗುವಂತೆ ಮಾಡಿತ್ತು. ಪಿನ್ ಕೋಡ್ ವ್ಯವಸ್ಥೆ ಬರುವ ಮೊದಲು ವಿವಿಧ ಭಾಷೆಗಳ ಪತ್ರ, ಒಂದೇ ಹೆಸರಿನ ತಾಲೂಕು, ಗ್ರಾಮಗಳಿಂದಾಗಿ ಪತ್ರಗಳನ್ನು ವಿಂಗಡಿಸುವುದು ದೊಡ್ಡ ಸವಾಲು ಮತ್ತು ಹಲವು ಗೊಂದಲಗಳಿಗೆ ಕಾರಣವಾಗುತ್ತಿತ್ತು. ಹೀಗಾಗಿ ಪತ್ರಗಳನ್ನು ವಿಂಗಡಿಸಲು ತುಂಬಾ ಸರಳವಾದ ಪ್ರಕ್ರಿಯೆಯ ಅಗತ್ಯವಿತ್ತು. ಈ ನಿಟ್ಟಿನಲ್ಲಿ ಜಾರಿಗೊಂಡಿದ್ದೇ ಈ ಆರು ಸಂಖ್ಯೆಯ ಪಿನ್ ಕೋಡ್!

Advertisement

ಎಂಟು ಪ್ರಾದೇಶಿಕ ವಲಯ ಮತ್ತು ಭಾರತೀಯ ಸೇನೆಗಾಗಿ ಒಂದು ಸಕ್ರಿಯ ವಲಯ ಸೇರಿದಂತೆ ಭಾರತದಲ್ಲಿ ಒಂಬತ್ತು ಪಿನ್ ಕೋಡ್ ವಲಯಗಳಿವೆ. ಪಿನ್ ಕೋಡ್ ನ ಮೊದಲ ಅಂಕೆ “ವಲಯ”ವನ್ನೂ, ಎಡರನೇ ಅಂಕೆ ಉಪವಲಯವನ್ನೂ, ಮೂರನೇ ಅಂಕೆ ಅಂಚೆ-ವಿಂಗಡಣೆಯ ಜಿಲ್ಲೆಯನ್ನೂ ಸೂಚಿಸುತ್ತದೆ. ಕೊನೆಯ ಮೂರು ಅಂಕೆಗಳ ಗುಂಪು ಅಂಚೆ ಕಚೇರಿಯನ್ನು ಸೂಚಿಸುತ್ತದೆ.ಪಿನ್ ಕೋಡ್ ನಿಂದಾಗಿ ಪತ್ರಗಳ ವಿಂಗಡಣೆಯ ಸಂದರ್ಭದಲ್ಲಿ ಆಗುತ್ತಿದ್ದ ಗೊಂದಲಕ್ಕೆ ತೆರೆ ಬಿದ್ದಂತಾಗಿತ್ತು.

ಜಗತ್ತಿನಲ್ಲಿ ಮೊದಲು ಜಾರಿಗೆ ತಂದಿದ್ದು ಉಕ್ರೈನ್:

ಜಗತ್ತಿನಲ್ಲಿ ಮೊತ್ತ ಮೊದಲ ಬಾರಿಗೆ ಪೋಸ್ಟಲ್ ಕೋಡ್ ಅನ್ನು ಪರಿಚಯಿಸಿದ ಕೀರ್ತಿ ಉಕ್ರೈನ್ ಗೆ ಸಲ್ಲುತ್ತದೆ. ಸೋವಿಯತ್ ಒಕ್ಕೂಟದಲ್ಲಿದ್ದ ಉಕ್ರೈನ್ 1932ರಲ್ಲಿ ಆಧುನಿಕ ಪಿನ್ ಕೋಡ್ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಆದರೆ 1939ರಲ್ಲಿ ಪಿನ್ ಕೋಡ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಿತ್ತು. 1941ರಲ್ಲಿ ಜರ್ಮನಿ ಈ ಪಿನ್ ಕೋಡ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು. 1958ರಲ್ಲಿ ಅರ್ಜೈಂಟಿನಾ, 1963ರಲ್ಲಿ ಅಮೆರಿಕ, 1964ರಲ್ಲಿ ಸ್ವಿಟ್ಜರ್ ಲ್ಯಾಂಡ್, 1972ರಲ್ಲಿ ಭಾರತ, 1974ರಲ್ಲಿ ಯುನೈಟೆಡ್ ಕಿಂಗ್ ಡಮ್ ಪಿನ್ ಕೋಡ್ ವ್ಯವಸ್ಥೆ ಜಾರಿಗೊಳಿಸಿತ್ತು.

ಅಂಚೆ ಕಚೇರಿ, ಆರಂಭಿಕ ಪಿನ್ ಕೋಡ್ ಸಂಖ್ಯೆ ಮತ್ತು ವಲಯಗಳು:

ಉತ್ತರ ವಲಯ: ಪಂಜಾಬ್, ದೆಹಲಿ, ಹರ್ಯಾಣ, ಹಿಮಾಚಲ ಪ್ರದೇಶ ಮತ್ತು ಜಮ್ಮು ಕಾಶ್ಮೀರ (ಪಿನ್ ಕೋಡ್ 1)

ಉತ್ತರ ವಲಯ: ಉತ್ತರಪ್ರದೇಶ ಮತ್ತು ಉತ್ತರಾಂಚಲ್ (ಪಿನ್ ಕೋಡ್ 2)

ಪಶ್ಚಿಮ ವಲಯ: ರಾಜಸ್ಥಾನ್ ಮತ್ತು ಗುಜರಾತ್ (ಪಿನ್ ಕೋಡ್ 3)

ಪಶ್ಚಿಮ ವಲಯ: ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಚತ್ತೀಸ್ ಗಢ( ಪಿನ್ ಕೋಡ್ 4)

ದಕ್ಷಿಣ ವಲಯ: ಆಂಧ್ರಪ್ರದೇಶ ಮತ್ತು ಕರ್ನಾಟಕ (ಪಿನ್ ಕೋಡ್ 5)

ದಕ್ಷಿಣ ವಲಯ: ಕೇರಳ ಮತ್ತು ತಮಿಳುನಾಡು (ಪಿನ್ ಕೋಡ್ 6)

ಪೂರ್ವ ವಲಯ: ಪಶ್ಚಿಮ ಬಂಗಾಳ, ಒಡಿಶಾ ಮತ್ತು ಈಶಾನ್ಯ ರಾಜ್ಯ (ಪಿನ್ ಕೋಡ್ 7)

ಪೂರ್ವ ವಲಯ: ಬಿಹಾರ್ ಮತ್ತು ಜಾರ್ಖಂಡ್ (ಪಿನ್ ಕೋಡ್ (8)

ಸೇನಾ ಪೋಸ್ಟಲ್ ಸರ್ವೀಸ್ (9)

*ನಾಗೇಂದ್ರ ತ್ರಾಸಿ

 

Advertisement

Udayavani is now on Telegram. Click here to join our channel and stay updated with the latest news.

Next