ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ದಳದ ಕಾರ್ಯಶೈಲಿಯು “ಕುರುಡನೊಬ್ಬ ಕತ್ತಲಕೋಣೆಯಲ್ಲಿ ಕರಿ ಬೆಕ್ಕನ್ನು ಬೆನ್ನಟ್ಟಿ ಹುಡುಕುವಂತಿದೆ’ ಇದು ,ಮಾಜಿ ಸಿಎಂ ಯಡಿಯೂರಪ್ಪ ಪರ ವಕೀಲರು ಎಸಿಬಿ ತನಿಖಾ ವೈಖರಿ ಬಗ್ಗೆ ಹೈಕೋರ್ಟ್‌ಗೆ ತಿಳಿಸಿದ ಪರಿಯಿದು.
ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಕೋರಿ ಮಾಜಿ ಸಿಎಂ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಶುಕ್ರವಾರ ನಡೆಸಿದ ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ ನಾಗೇಶ್ , ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ಸಂಬಂಧ ಅರ್ಜಿದಾರರ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲದಿದ್ದರೂ, ವಿನಾಕಾರಣ ಎಸಿಬಿ ಎಫ್ಐಆರ್ ದಾಖಲಿಸಿಕೊಂಡು “ಕುರುಡನೊಬ್ಬ ಕತ್ತಲಕೋಣೆಯಲ್ಲಿ ಕಪ್ಪುಬಣ್ಣದ ಬೆಕ್ಕನ್ನು ಬೆನ್ನಟ್ಟಿ ಹುಡುಕುವಂತೆ ನಡೆದುಕೊಳ್ಳುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಅರ್ಜಿದಾರರು ಲಂಚಕ್ಕೆ ಬೇಡಿಕೆ ಇಟ್ಟ, ಪಡೆದುಕೊಂಡಿರುವ, ಯಾರಿಂದ ಪಡೆದುಕೊಂಡಿದ್ದಾರೆ ಹೇಗೆ ಸ್ವೀಕರಿಸಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳಿಲ್ಲ. ಜೊತೆಗೆ ದೂರುದಾರರು ಭೂ ಮಾಲೀಕರಲ್ಲ, ಸರ್ಕಾರಿ ಅಧಿಕಾರಿಯೂ ಅಲ್ಲ ಹೀಗಿದ್ದರೂ ಮೂರನೇ ವ್ಯಕ್ತಿ ನೀಡಿದ ದೂರನ್ನೇ ಪರಿಗಣಿಸಿ ತನಿಖೆ ನಡೆಸಲು ಮುಂದಾಗಿದೆ ಎಂದರು.ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತನಿಖೆ ನಡೆದರೇ ಆರೋಪದ ಬಗ್ಗೆ ಸಾಬೀತಾಗಬಹುದಲ್ಲ ಎಂದಿತು.
ಇದಕ್ಕೆ ಉತ್ತರಿಸಿದ ವಕೀಲರು ,ಎಸಿಬಿ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ಬೇಕಾದ ಅಗತ್ಯ ಸಾಕ್ಷ್ಯಾಧಾರಗಳೇ ಲಭ್ಯವಿಲ್ಲ. ಯಾರೋ ನೀಡಿದ ದೂರನ್ನು ಪರಿಗಣಿಸಿ ಏಕಾಏಕಿ ಎಫ್ಐಆರ್ ದಾಖಲಿಸುವುದಾದರೇ ಸರ್ಕಾರಿ ಅಧಿಕಾರಿಗಳ ವಿರುದ್ಧ ಲೆಕ್ಕವಿಲ್ಲದಷ್ಟು ಪ್ರಕರಣಗಳು ದಾಖಲಾಗುತ್ತವೆ. ಹೀಗಾಗಿ ಅರ್ಜಿದಾರರ ವಿರುದ್ಧ ತನಿಖೆ ಮುಂದುವರಿಸಲು ಕಾನೂನಿನಲ್ಲಿ ಅವಕಾಶವಿಲ್ಲದಿರುವುದರಿಂದ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.
ಈ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ. 18ಕ್ಕೆ ಮುಂದೂಡಿತು. ಅಲ್ಲದೆ ಮುಂದಿನ ವಿಚಾರಣೆಯವರೆಗೆ ಅರ್ಜಿದಾರರನ್ನು ಬಂಧಿಸಬಾರದು ಎಂದು ನೀಡಿರುವ ಮಧ್ಯಂತರ ಆದೇಶವನ್ನು ವಿಸ್ತರಿಸಿತು.