ಕೊಪ್ಪಳ: ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡನೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಇತರೆ ಕಾಂಗ್ರೆಸ್ ನಾಯಕರು ಕಿವಿಗೆ ಹೂವಿಟ್ಟುಕೊಂಡು ಅಧಿವೇಶನಕ್ಕೆ ಆಗಮಿಸಿದ್ದು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇಂಥದ್ದೆ ಪ್ರಸಂಗವೊಂದು ಕೊಪ್ಪಳದಲ್ಲಿ ನಗರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದ್ದು, ಬಿಜೆಪಿ ಸದಸ್ಯನೋರ್ವ ಕಿವಿಗೆ ಹೂವು ಇಟ್ಟುಕೊಂಡು ಪ್ರತಿಭಟನೆ ನಡೆಸಿರುವುದು ಎಲ್ಲರ ಗಮನ ಸೆಳೆದಿದೆ.
ಬಿಜೆಪಿ ಸದಸ್ಯ ಸೋಮಣ್ಣ ಹಳ್ಳಿ ಎನ್ನುವವರು ನಗರಸಭೆಯಲ್ಲಿ ತಮ್ಮ ವಾರ್ಡಿಗೆ ಅನುದಾನ ದೊರೆಯುತ್ತಿಲ್ಲ. ವಾರ್ಡಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸ ನಡೆದಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇದರಿಂದ ನಮಗೆ ವಾರ್ಡಿಗೆ ಯಾವ ಅನುದಾನ ಲಭಿಸುತ್ತಿಲ್ಲ ಎಂದು ಆರೋಪಿಸಿ ಮಂಗಳವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ದಿಢೀರ್ ಕಿವಿಗೆ ಹೂವನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿ ಅಚ್ಚರಿ ಮೂಡಿಸಿದ ಪ್ರಸಂಗವೂ ನಡೆಯಿತು.
ವಿಧಾನಸೌಧದಲ್ಲಿ ಕಾಂಗ್ರೆಸ್ ನಾಯಕರು ಕಿವಿಗೆ ಹೂವು ಇಟ್ಟುಕೊಂಡು ಬಿಜೆಪಿ ವಿರುದ್ದ ಮುಗಿಬಿದ್ದರೆ, ಕೊಪ್ಪಳದ ನಗರಸಭೆಯಲ್ಲಿ ಬಿಜೆಪಿ ಸದಸ್ಯನೇ ಕಿವಿಗೆ ಹೂವು ಇಟ್ಟುಕೊಂಡು ಕಾಂಗ್ರೆಸ್ ಸದಸ್ಯರ ವಿರುದ್ದ ಮುಗಿಬಿದ್ದ ಪ್ರಸಂಗ ಎಲ್ಲರ ನಗೆಪಾಟಲಿಗೆ ಈಡು ಮಾಡಿತು. ಕೊಪ್ಪಳ ನಗರಸಭೆಯ ಅಧಿಕಾರವು ಕಾಂಗ್ರೆಸ್ ತೆಕ್ಕೆಯಲ್ಲಿದೆ. ಬಿಜೆಪಿ ಸದಸ್ಯರಿಗೆ ಸರಿಯಾದ ಅನುದಾನ ನೀಡುತ್ತಿಲ್ಲ. ನಗರದಲ್ಲಿ ಅಭಿವೃದ್ಧಿ ಎಂಬುದೇ ಇಲ್ಲ. ಈಗ ವಿಧಾನಸಭಾ ಚುನಾವಣೆ ಬರುತ್ತದೆ. ಈ ಅವಧಿಯದ್ದು ನಗರಸಭೆದು ಕೊನೆ ಸಭೆಯಾಗಿದೆ. ಏನು ಅಭಿವೃದ್ಧಿ ಮಾಡದೇ ನಮ್ಮ ಕಿವಿಯಲ್ಲಿ ಹೂ ಇಡುವ ಕೆಲಸ ಮಾಡುತ್ತಿದ್ದೀರಿ ಎಂದು ಕಿಡಿಕಾರಿದ 16ನೇ ವಾರ್ಡ್ ಸದಸ್ಯ ಸೋಮಣ್ಣ ಹಳ್ಳಿ ಎರಡು ಕಿವಿಯಲ್ಲಿ ಹೂ ಇಟ್ಟುಕೊಂಡು ಸಭೆಯ ಮಧ್ಯದಲ್ಲಿ ಕುಳಿತು ಪ್ರತಿಭಟಿಸಿದರು. ಇದನ್ನು ನೋಡಿದ ಕೈ ಸದಸ್ಯರಾದ ಮಹೇಂದ್ರ ಚೋಫ್ರಾ, ಮುತ್ತು ಕುಷ್ಟಗಿ, ಅಮ್ಜದ್ ಪಟೇಲ್ ಸೇರಿದಂತೆ ಅನೇಕರು ನಗಲಾರಂಭಿಸಿದರು.
ಬಿಜೆಪಿಯ ಸದಸ್ಯರು ಸಿಡಿಮಿಡಿಗೊಂಡು ಕೈ ಸದಸ್ಯರ ನಡೆ ಖಂಡಿಸಿದರು. ಬಿಜೆಪಿ ಸದಸ್ಯೆ ವಿದ್ಯಾ ಹೆಸರೂರು, ಇದು ನಾಚಿಕೇಡಿತನದ ಸಂಗತಿ. ಅನುದಾನ ತಾರತಮ್ಯ ಖಂಡಿಸಿ ನಮ್ಮ ಸದಸ್ಯರು ವಿನೂತನವಾಗಿ ಪ್ರತಿಭಟಿಸಿದರೇ ನಗುವುದು ಎಷ್ಟರ ಮಟ್ಟಿಗೆ ಸರಿ ಎಂದು ಕಿಡಿಕಾರಿದರು.