Advertisement
ಸುತ್ತ ಇರುವ ಗುಡ್ಡ ಬೆಟ್ಟಗಳಿಗೆ ಹೋಲಿಸಿದರೆ ಇದೇನೂ ದೊಡ್ಡದಾಗಿರಲಿಲ್ಲ. ಬೋಳು ಬೋಳಾಗಿದ್ದ ಇದನ್ನು ನಾವು ಬೋಳು ಗುಡ್ಡ ಎಂದೇ ಕರೆಯುತ್ತಿದ್ದೆವು. ಅಲ್ಲಲ್ಲಿ ಕುರುಚಲು ಗಿಡ, ಮಧ್ಯ ಮಧ್ಯ ನೆಲ್ಲಿ ಮರ, ಬೆಂಬಾರಲ ಹಣ್ಣಿನ ಮೊಟ್ಟುಗಳು, ಕಬಳಿ ಹಣ್ಣಿನ ಗಿಡಗಳು, ಕವಳೆ ಕಾಯಿ, ಅರಮರಲು ಕಾಯಿ ಗಿಡ, ರಂಜದ ಮರ ಹರಡಿಕೊಂಡಿದ್ದವು.
Related Articles
Advertisement
ಅದೊಂದು ದಿನ ಇದ್ದಕ್ಕಿದ್ದಂತೆ ಸುದ್ದಿ ಬಂತು. ಈ ಬೋಳು ಗುಡ್ಡದ ಮೇಲೆ ಅರಣ್ಯ ಇಲಾಖೆ ಗಿಡ ನೆಡ್ತಾರಂತೆ ಎಂದು. ನಮಗೆ ಆಗ ಈ ಇಲಾಖೆ ಪಲಾಕೆಯ ಬಗ್ಗೆ ಏನೂ ಸರಿಯಾಗಿ ಗೊತ್ತಿರಲಿಲ್ಲ. ಆದರೆ ಯಾರೋ ಇಲ್ಲಿಗೆ ಬಂದು ಯಾಕೆ ಗಿಡ ನೆಡಬೇಕು ಎಂಬ ಪ್ರಶ್ನೆ ನಮ್ಮಲ್ಲಿ ಉದ್ಭವವಾಗಿತ್ತು. ನೆಡುತೋಪು ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಇಷ್ಟೆಲ್ಲಾ ಕಾಡಿರುವಾಗ ಇವರೆಂತಕ್ಕೆ ಇಲ್ಲಿ ಗುಡ್ಡದ ಮೇಲೆ ಗಿಡ ನೆಡಬೇಕು ಎಂಬುದಷ್ಟೇ ನಮ್ಮ ಪ್ರಶ್ನೆಯಾಗಿತ್ತು. ಒಂದು ದಿನ ಅರಣ್ಯ ಇಲಾಖಾ ಸಿಬ್ಬಂದಿಗಳು ಬಂದರು. ನಮ್ಮ ಊರಿನ ಕೆಲಸಗಾರರನ್ನೇ ಜೊತೆಯಾಗಿಸಿಕೊಂಡು ಆ ಬೋಳು ಗುಡ್ಡದ ಮೇಲೆಲ್ಲ ಅಳತೆ ಮಾಡಿ ಗುರುತು ಮಾಡಿದರು. ಹೀಗೆ ಅಳತೆ ಮಾಡಿ ಗಿಡ ನೆಟ್ಟು ಕಾಡು ಮಾಡೋಕಾಗುತ್ತಾ ಎಂದು ಆಗಲೇ ನಮ್ಮ ತಲೆಯಲ್ಲಿ ಪ್ರಶ್ನೆಯೊಂದು ಎದ್ದಿತ್ತು. ನಿತ್ಯ ಕಾಡು ನೋಡುತ್ತಿದ್ದ ನಮಗೆ ಅಲ್ಲಿ ಯಾವ ಅಳತೆ ಪಳತೆ ಎಂತದ್ದೂ ಇರಲ್ಲ ಎಂಬುದು ಗೊತ್ತಿತ್ತು. ನಾವು ಹೀಗೆ ಯೋಚಿಸುತ್ತಿರುವಂತೆಯೇ ಇತ್ತ ಹೊಂಡಗಳು ಜಾಸ್ತಿಯಾಗತೊಡಗಿದವು. ನಮ್ಮೂರಿನ ಯಾರೂ ಅದನ್ನು ತಡೆಯಲಿಲ್ಲ. ಆ ಬೋಳುಗುಡ್ಡ ನಮ್ಮೂರಿನ ಅಸ್ಮಿತೆಯಾಗಿತ್ತು. ನೂರಾರು ಜಾನುವಾರುಗಳ ಅಕ್ಷಯ ಪಾತ್ರೆಯಾಗಿತ್ತು¤. ನಮ್ಮ ನೆನಪುಗಳ ಗೂಡಾಗಿತ್ತು. ಊರಿನ ಜಲಮೂಲಗಳಿಗೆ ಬೇಕಾದ ಮಳೆ ನೀರನ್ನು ಸಂಗ್ರಹಿಸುವ ಸೋಸು ಜರಡಿಯಾಗಿತ್ತು. ಆದರೆ ಊರಿನ ಹಿರೀಕರಿಗೆ ಇದೊಂದು ಬದಲಾವಣೆಯ ದಾರಿ ಎನಿಸಿರಬೇಕು. ನಿಂತ ನೀರಾದಂತೆ ಅನಿಸಿದ್ದ ತಮ್ಮ ಊರಿನ ಬದುಕಿಗೆ ಹೊಸ ಚೈತನ್ಯ ನೀಡಬಹುದೆಂದು ಭಾವಿಸಿರಬಹುದು. ಇನ್ನು ಸೌದೆ ಕಡಿದು ತರಲು ದೂರದ ಕಾಡಿಗೆ ಹೋಗಬೇಕಾದ್ದಿಲ್ಲ, ಬೇಲಿ ಗೂಟ ಮನೆಯ ಬಾಗಿಲಲ್ಲಿಯೇ ಸಿಗುತ್ತೆ, ಮರದ ತೊಲೆಗಳಿಗೆ ಅಲೆದಾಡಬೇಕಾಗಿಲ್ಲ ಎಂದೆಲ್ಲ ಆಲೋಚನೆಗಳು ಬಂದಿರಲಿಕ್ಕೆ ಸಾಕು. ಅಷ್ಟಾಗಿಯೂ ಸರ್ಕಾರದ ಕಾರ್ಯಕ್ರಮವನ್ನು ವಿರೋಧಿಸುವ ತಾಕತ್ತಾದರೂ ಆಗ ಯಾರಿಗಿತ್ತು? ನೆಡುತೋಪು ಎಂಬುದರ ಕಲ್ಪನೆಯೇ ಇಲ್ಲದ ಹೊತ್ತಿನಲ್ಲಿ ಇದರ ಅಡ್ಡ ಪರಿಣಾಮಗಳ ಕುರಿತು ಅರಿವಾದರೂ ಹೇಗಿರಲು ಸಾಧ್ಯ? ಇದು ಈ ಊರವರ ಮಾತಲ್ಲ, ಇಡೀ ಮಲೆನಾಡಿನ ಸ್ಥಿತಿಯೇ ಆಗಿತ್ತು. ಹಾಗಾಗಿಯೇ ಮಲೆನಾಡಿನ ನಡುನಡುವೆ ಪ್ರಕೃತಿಯೇ ಬಿಟ್ಟಿದ್ದ ಜಾಗವನ್ನು ಅರಣ್ಯ ಇಲಾಖೆ, ಎಂಪಿಎಂ ಕಾರ್ಖಾನೆಯವರು ಆಕ್ರಮಿಸಿಕೊಂಡರು.
ಸೇರಿ ನೆಡುತೋಪು ಮಾಡಿಬಿಟ್ಟರು. ಪ್ರಕೃತಿ ಯಾಕಾಗಿ ಇಂತಹ ಜಾಗವನ್ನೆಲ್ಲಾ ತಾನು ನಿರ್ಮಿಸಿಕೊಂಡಿದೆ ಎಂದು ಆಲೋಚಿಸುವಷ್ಟು ಕೂಡ ತಮ್ಮ ಯೋಚನಾ ಧಾಟಿಯನ್ನು, ಜ್ಞಾನವನ್ನು ಸರ್ಕಾರಿ ಮಂದಿಗಳು ವಿಸ್ತರಿಸಿಕೊಂಡಿರಲಿಲ್ಲ.
ನೋಡ ನೋಡುತ್ತಿದ್ದಂತೆ ಹತ್ತಾರು ಮಂದಿ ಕೆಲಸ ಶುರು ಮಾಡಿದರು. ಮಳೆ ಬೀಳುತ್ತಿದ್ದಂತೆ ಇಲ್ಲಿ ನೆಟ್ಟ ಗಿಡಗಳು ಚಿಗುರಿದವು. ತಿಂಗಳಲ್ಲಿ ಚಿಗುರು ಉಕ್ಕಿಸಿ ಬೆಳೆಯುವ ವೇಗದ ಪರಿ ಕಂಡು ಊರವರು ಖುಷಿಪಟ್ಟರು. ನಾವು ನೆಟ್ಟರೆ ಹಿಂಗೆಲ್ಲಾ ಬರಲ್ಲ, ಈ ಸರ್ಕಾರದೋರು ಎಂತಹ ನೆಟ್ರಾ ಲಾಯಕ್ಕಾಗಿ ಬರುತ್ತೆ ಎಂದೆಲ್ಲ ಸ್ವಗತವೆಂಬಂತೆ ಮಾತನಾಡಿಕೊಂಡರು. ತಮ್ಮ ತೋಟದ ಅಡಿಕೆ ಮರ, ಭತ್ತದ ಗದ್ದೆಯ ಹುಲ್ಲಿನ ಚಿಗುರಿಗಿಂತ ಈ ನೆಡುತೋಪಿನ ಚಿಗುರು ಆಕರ್ಷಕ ಎನಿಸತೊಡಗಿತು. ಇದನ್ನು ಬೇಲಿಗೂಟ ಮಾಡಿಕೊಳ್ಳಲು ಎರಡು ವರ್ಷವಾದರೂ ಕಾಯಬೇಕೇನೋ ಎಂಬೆಲ್ಲ ಲೆಕ್ಕಾಚಾರಗಳು ಅಲ್ಲಿ ಮೂಡಿದ್ದವು.
ನಾಲ್ಕೈದು ವರ್ಷಗಳಷ್ಟಾಗುವಲ್ಲಿ ಆಳೆತ್ತರಕ್ಕೆ ಬೆಳೆದು ನಿಂತಿದ್ದವು. ಕೊಟ್ಟಿಗೆಯಿಂದ ಬಿಟ್ಟರೆ ಗುಡ್ಡದ ತುಂಬೆಲ್ಲ ಓಡಾಡಿ ತನ್ನ ಹೊಟ್ಟೆ ತುಂಬಿಸಿಕೊಂಡು ಬರುತ್ತಿದ್ದ ಜಾನುವಾರುಗಳಿಗೀಗ ಮೇಯಲು ಜಾಗವಿರಲಿಲ್ಲ. ಹೀಗಾಗಿ ಮನೆಯಲ್ಲಿಯೇ ಕಟ್ಟಿ ಸಾಕಲಾರಂಭಿಸಿದರು. ನಿಧಾನವಾಗಿ “ಇದನ್ನೆಲ್ಲಾ ಕಟ್ಟಿ ಸಾಕುವುದು ಸಾಧ್ಯವಾ ಮಾರಾಯೆÅ’’ ಎಂದು ಒಂದೊಂದನ್ನೇ ಮಾರಿಕೊಂಡರು. ಈ ನಾಲ್ಕೈದು ವರ್ಷಗಳಲ್ಲಿ ಊರಿನ ಕೊಟ್ಟಿಗೆಗಳಲ್ಲಿ ಜಾನುವಾರು ಸಂಖ್ಯೆ ಇಳಿದಿದ್ದನ್ನು ಯಾರೂ ಸರಿಯಾಗಿ ಗಮನಿಸಲೇ ಇಲ್ಲ. ಮಲೆನಾಡಿನ ಕಣಿವೆ, ಗುಡ್ಡದ ತುಂಬೆಲ್ಲ ತುಂಬಿರುತ್ತಿದ್ದ ಮಲೆನಾಡಿನ ವಿಶಿಷ್ಟ ಜಾನುವಾರು ತಳಿ ಮಲೆನಾಡು ಗಿಡ್ಡ ಅಳಿವಂಚಿಗೆ ಬರಲು ಈ ನೆಡುತೋಪೇ ಮೂಲ ಕಾರಣವಾಗಿರಬಹುದು. ಸತ್ವ ಭರಿತ ಹಾಲು ನೀಡುತ್ತಿದ್ದ ಈ ಮಲೆನಾಡು ಗಿಡ್ಡ ತಳಿಯ ಹಾಲಿನಲ್ಲಿ ಔಷಧೀಯ ಮತ್ತು ವಿಶೇಷ ಗುಣಗಳನ್ನೆಲ್ಲಾ ಯಾವುದೋ ಪತ್ರಿಕೆಯಲ್ಲಿ ನಾವೇ ಓದಬೇಕಾದ ಸ್ಥಿತಿಗೆ ಬಂದು ನಿಂತಿದ್ದೇವೆ. ದನಗಳು ಇಲ್ಲವಾಗುತ್ತಿದ್ದಂತೆ ಮನೆಯಲ್ಲಿಯೇ ತಯಾರಾಗುತ್ತಿದ್ದ ಕೊಟ್ಟಿಗೆ ಗೊಬ್ಬರಕ್ಕೆ ಊರೆಲ್ಲ ಹುಡುಕಬೇಕಾದ ಸ್ಥಿತಿ ಬಂತು.
ಅದು ದುರ್ಲಭ ಎಂದು ಗೊತ್ತಾದಾಗ ಸುಲಭವಾಗಿ ಸಿಗುವ ರಾಸಾಯನಿಕ ಗೊಬ್ಬರ ಊರಿನ ತೋಟ, ಗದ್ದೆಗಳಲ್ಲೆಲ್ಲಾ ಬಳಕೆಯಾಗತೊಡಗಿತು. ಮಣ್ಣು ಸತ್ವ ಕಳೆದುಕೊಂಡಿತು. ಕೆಳಗಿನ ಹಳ್ಳದಲ್ಲಿ ಮೀನುಗಳು ಕಾಣೆಯಾಗತೊಡಗಿದವು. ನಿತ್ಯ ಊರ ಮುಂದಿನ ಗುಡ್ಡದಲ್ಲಿ ನಾಟ್ಯವಾಡುತ್ತಿದ್ದ ನವಿಲುಗಳು ತಮ್ಮ ಗರಿ ಉದುರಿಸಲು ಜಾಗ ಹುಡುಕತೊಡಗಿದ್ದನ್ನು ಯಾರೂ ಗಮನಿಸಲಿಲ್ಲ. ಊರೆಲ್ಲಾ ಬುರ್ರೆಂದು ಸುತ್ತಾಡುತ್ತಾ ಹಾರಾಡುತ್ತಿದ್ದ ಹಕ್ಕಿಗಳ ಗುಂಪು ತನ್ನ ಹಾದಿ ಬದಲಿಸಿದ್ದನ್ನು ಗಮನಿಸಲು ಇನ್ನೂ ಎರಡು ವರ್ಷ ಹೆಚ್ಚಿಗೆ ಬೇಕಾಯಿತು. ನಿತ್ಯ ಹಸಿರ ಹುಲ್ಲು ನೋಡುತ್ತಿದ್ದ ಊರ ಮಂದಿಗೀಗ ಕಾಡು ಕಾಣಿಸತೊಡಗಿತು. ಆದರೆ ಅದು ಕಾಡಲ್ಲ ಎಂದು ಅಂದುಕೊಳ್ಳಲು ಹಲವು ವರ್ಷಗಳೇ ಬೇಕಾಗಿದ್ದು ವಿಪರ್ಯಾಸ. ಊರಿನವ ರೇನೋ ಬೇಲಿ ಗೂಟಕ್ಕೆ ಸುಲಭವಾಯಿತು ಎಂದು ಪ್ಲಾಂಟೇಶನ್ ಹೊಕ್ಕು ಗೂಟ ಕಡಿದುಕೊಂಡು ಬಂದರು. ಇವರು ಈಚೆ ಬರುತ್ತಿದ್ದಂತೆ ದನದ ಕೊಟ್ಟಿಗೆಗೆ, ಗೊಬ್ಬರದ ಗುಂಡಿಗೆ ಸೊಪ್ಪು ತಂದು ಹಾಕುತ್ತಿದ್ದ ಕೆಲಸದಾಳುಗಳು ಕೂಡ ದೂರದ ಕಾಡಿಗೇಕೆ ಹೋಗಬೇಕು, ಇಲ್ಲಿಯೇ ಪ್ಲಾಂಟೇಶನ್‌ನಲ್ಲಿ ಉದುರುತ್ತಿರುವ ದರಗು(ಒಣಗಿದ ಎಲೆ) ಇದೆಯಲ್ಲಾ ಎಂದು ನೀಲಗಿರಿ, ಅಕೇಶಿಯಾದ ಒಣಗಿದ ಎಲೆಗಳನ್ನು ಗುಡ್ಡೆ ಮಾಡಿ ತಂದು ಕೊಟ್ಟಿಗೆಗೆ ಹಾಕಿದರು. ಗೊಬ್ಬರದ ಗುಂಡಿ ತುಂಬಿಸಿದರು. ವರ್ಷವಾಗುವಷ್ಟರಲ್ಲಿ ಗೊಬ್ಬರದಲ್ಲಿ ಏನೋ ಸತ್ವ ಕಡಿಮೆಯಾಗಿ ದೆಯಲ್ಲ ಎಂದು ಅಂದುಕೊಳ್ಳುವಾಗ ಪ್ಲಾಂಟೇಶನ್ ತೋಟದೊಳಗೆ ತನ್ನ ಕೈ ಚಾಚಿತ್ತು. ಸಗಣಿಯ ಸತ್ವವನ್ನೇ ನಾಶ ಮಾಡುವ ಶಕ್ತಿ ಈ ಎಲೆಗಳಿಗಿದೆ ಎಂದು ಗೊತ್ತಾಗಿದ್ದೇ ತಡವಾಗಿ. ನೀಲಗಿರಿ ಬುಡದಲ್ಲಿ ಹುಲ್ಲು ಸಹ ಹುಟ್ಟಲ್ಲಾ, ಆಳದ ನೀರ ನ್ನೆಲ್ಲಾ ಸೆಳೆದು ಬಾವಿಯನ್ನು ಬರಿದಾಗಿಸುತ್ತೆ ಎಂದು ಯಾರೋ ಯಾವಾಗಲೋ ಹೇಳಿದ ಮಾತು ಮನೆಯೆದುರು ಸತ್ಯ ದರ್ಶನ ಮಾಡಿಸಲು ಕಾದು ನಿಂತಿದ್ದು ಅರಿವಾಗುವಷ್ಟರಲ್ಲಿ ತಡವಾಗಿತ್ತು. ಎಂದೂ ಬತ್ತದ ನಮ್ಮೂರಿನ ಒರತೆ ನೀರಿನ ಬುಗ್ಗೆಗಳೆಲ್ಲಾ ಆಗಾಗ್ಗೆ ಬತ್ತುತ್ತೇವೆ ಎಂಬ ಸೂಚನೆಯನ್ನು ನೀಡುತ್ತಿವೆ. ಈ ಬೋಳುಗುಡ್ಡ ಎಂಬುದಿಲ್ಲದೆ ವಿಷಾದದ ಛಾಯೆಯೊಂದು ಮಡುಗಟ್ಟಿ ನಿಂತಿದೆ. ಆ ಆಪ್ತತೆ ಇಲ್ಲವಾದ ನೋವು ಕಾಡುತ್ತದೆ. ನೆನಪುಗಳು ಎಲ್ಲೆಲೋ ಚದುರದಿಂತಾಗುತ್ತದೆ. ಈ ಗುಡ್ಡದ ನೆನಪಾಗುತ್ತಲೇ ಆಧುನಿಕತೆ ಎಂಬ ರಾಕ್ಷಸನ ನೆನಪಾಗುತ್ತದೆ. – ಗೋಪಾಲ್ ಯಡಗೆರೆ