Advertisement

ಯುವ ದೇವದತ್ತ ಪಡಿಕ್ಕಲ್‌ಗೆ ಸ್ಫೂರ್ತಿ ತುಂಬಿದ ಎ.ಬಿ.ಡಿವಿಲಿಯರ್ಸ್

07:42 AM Nov 16, 2020 | keerthan |

ಬೆಂಗಳೂರು: 2020ರ ಐಪಿಎಲ್‌ ಪಂದ್ಯಾವಳಿಯಲ್ಲಿ ಉದಯಿಸಿದ ನವಪ್ರತಿಭೆಗಳಲ್ಲಿ ಆರ್‌ಸಿಬಿಯ ದೇವದತ್ತ ಪಡಿಕ್ಕಲ್‌ ಕೂಡ ಒಬ್ಬರು. ಕಳೆದ ವರ್ಷದ ಐಪಿಎಲ್‌ ವೇಳೆ ಇವರನ್ನು ಸಂಪೂರ್ಣವಾಗಿ ಮೂಲೆಗುಂಪು ಮಾಡಲಾಗಿತ್ತು. ಇದಕ್ಕೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ಬ್ಯಾಟ್‌ ಬೀಸಿದ ಪಡಿಕ್ಕಲ್‌ “ಎಮರ್ಜಿಂಗ್‌ ಪ್ಲೇಯರ್‌’ ಆಟಗಾರನಾಗಿ ಮೂಡಿಬಂದದ್ದು ಈಗ ಇತಿಹಾಸ.

Advertisement

ದಾಖಲೆಯ 5 ಅರ್ಧ ಶತಕಗಳೊಂದಿಗೆ 473 ರನ್‌ ಬಾರಿಸುವ ಮೂಲಕ ಪಡಿಕ್ಕಲ್‌ ಮಿಂಚು ಹರಿಸಿದರು. ಇಬ್ಬರು “ಮಾಡರ್ನ್ ಗ್ರೇಟ್‌’ಗಳಾದ ವಿರಾಟ್‌ ಕೊಹ್ಲಿ ಮತ್ತು ಎಬಿ ಡಿ ವಿಲಿಯರ್ ಅವರೊಂದಿಗೆ ಆಡುವ ಅವಕಾಶ ಲಭಿಸಿದ್ದು ಪಡಿಕ್ಕಲ್‌ ಪಾಲಿನ ಸೌಭಾಗ್ಯ ಎಂದೇ ಹೇಳಬೇಕು.

ಪಡಿಕ್ಕಲ್‌ ನಾಯಕ ಕೊಹ್ಲಿ ಅವರೊಂದಿಗೆ ಅನೇಕ ಸ್ಮರಣೀಯ ಜತೆಯಾಟಗಳಲ್ಲಿ ಪಾಲ್ಗೊಂಡರು. ಆದರೆ ಎಬಿಡಿ ಜತೆಗೂಡಿ ಆಡಲು ಹೆಚ್ಚಿನ ಅವಕಾಶ ಸಿಗಲಿಲ್ಲವಾದರೂ 20ರ ಹರೆಯದ ಈ ಪ್ರತಿಭಾನ್ವಿತ ಕ್ರಿಕೆಟಿಗನಿಗೆ ಎಬಿಡಿ ಸ್ಫೂರ್ತಿಯಾಗದೇ ಉಳಿಯಲಿಲ್ಲ. ತಾನು ಉತ್ತಮ ಪ್ರದರ್ಶನ ನೀಡಿದಾಗಲೆಲ್ಲ ಡಿ ವಿಲಿಯರ್ ಅಭಿನಂದಿಸುತ್ತಿರುವುದನ್ನು ಮರೆಯುತ್ತಿರಲಿಲ್ಲ ಎಂದು ಐಪಿಎಲ್‌ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ ದೇವದತ್ತ ಪಡಿಕ್ಕಲ್‌.

“ಎಬಿಡಿ ಓರ್ವ ಸ್ಪೆಷಲ್‌ ಪ್ಲೇಯರ್‌. ಅವರ ಬ್ಯಾಟಿಂಗನ್ನು ವೀಕ್ಷಿಸುವುದೇ ಕಣ್ಣಿಗೊಂದು ಹಬ್ಬ. ಐಪಿಎಲ್‌ ಕೂಟದುದ್ದಕ್ಕೂ ಅವರು ನನಗೆ ಸೂಕ್ತ ಬ್ಯಾಟಿಂಗ್‌ ಸಲಹೆ ನೀಡುತ್ತ, ನನ್ನ ಆಟವನ್ನು ಪ್ರಶಂಸಿಸುತ್ತಲೇ ಇದ್ದರು’ ಎನ್ನುತ್ತಾರೆ ಪಡಿಕ್ಕಲ್‌. ಡಿ ವಿಲಿಯರ್ ಹಾರೈಕೆ ಈ ಸಂದರ್ಭದಲ್ಲಿ ಪಡಿಕ್ಕಲ್‌ ಮುಂಬೈ ಇಂಡಿಯನ್ಸ್‌ ಎದುರಿನ ಪ್ರಥಮ ಸುತ್ತಿನ ಪಂದ್ಯದ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:ಕ್ರಿಕೆಟ್‌ ಆಯ್ಕೆ ಸಮಿತಿಗೆ ಮಾಜಿಗಳ ರೇಸ್‌

Advertisement

“ಈ ಪಂದ್ಯದಲ್ಲಿ ನಾನು 74 ರನ್‌ ಬಾರಿಸಿದ್ದೆ. ಪಂದ್ಯ ಮುಗಿಸಿ ಮರಳುತ್ತಿದ್ದಾಗ ಎಬಿಡಿ ನನ್ನ ಆಟವನ್ನು ಪ್ರಶಂಸಿಸಿ ಸಂದೇಶವೊಂದನ್ನು ರವಾನಿಸಿದರು. ನೀನು ನಿಜಕ್ಕೂ ಚೆನ್ನಾಗಿ ಆಡುತ್ತಿದ್ದಿ, ಇದನ್ನೇ ಮುಂದುವರಿಸು, ಆನಂದಿಸು ಎಂಬುದಾಗಿ ಅವರು ಹಾರೈಸಿದ್ದರು. ನನ್ನ ಪಾಲಿಗೆ ನಿಜಕ್ಕೂ ಇದೊಂದು ಸ್ಪೆಷಲ್‌ ಮೆಸೇಜ್‌ ಹಾಗೂ ಮಹಾನ್‌ ಗೌರವವೂ ಆಗಿತ್ತು’ ಎಂದಿದ್ದಾರೆ ಪಡಿಕ್ಕಲ್‌.

“ಎಬಿಡಿ ಜತೆ ಬ್ಯಾಟಿಂಗ್‌ ಮಾಡುವುದನ್ನು ನಾನು ಯಾವತ್ತೂ ಆನಂದಿಸುತ್ತೇನೆ. ಏಕೆಂದರೆ ಅವರು ಮೊದಲ ಎಸೆತದಿಂದಲೇ ಬೌಲರ್‌ಗಳ ಮೇಲೆ ಪ್ರಹಾರ ಮಾಡುತ್ತಾರೆ. ಹೀಗಾಗಿ ನಮ್ಮ ಕೆಲಸ ಸುಲಭವಾಗುತ್ತದೆ’ ಎಂಬುದು ಪಡಿಕ್ಕಲ್‌ ಅನಿಸಿಕೆ.

Advertisement

Udayavani is now on Telegram. Click here to join our channel and stay updated with the latest news.

Next