Advertisement

ಎಲ್‌ ಆ್ಯಂಡ್‌ ಟಿ ಕಂಪನಿ ವಿರುದ್ಧ ಕೆಂಡಾಮಂಡಲ

04:19 PM Jul 28, 2022 | Team Udayavani |

ಹುಬ್ಬಳ್ಳಿ: ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸುವಂತೆ ಕ್ರಮ ವಹಿಸಬೇಕು. ಇಲ್ಲವೆ ಬೇಜವಾಬ್ದಾರಿಯಾಗಿರುವ ಎಲ್‌ ಆ್ಯಂಡ್‌ ಟಿ ಕಂಪನಿ ಬದಲು ಪಾಲಿಕೆಯೇ ನೀರು ಸರಬರಾಜು ನಿರ್ವಹಣೆ ವಹಿಸಿಕೊಳ್ಳಬೇಕೆಂದು ಪಾಲಿಕೆಯ ಎಲ್ಲ ಸದಸ್ಯರು ಎಲ್‌ ಆ್ಯಂಡ್‌ ಟಿ ಕಂಪನಿಯ ಅಸಮರ್ಪಕ ನಿರ್ವಹಣೆ ವಿರುದ್ಧ ಹರಿಹಾಯ್ದರು.

Advertisement

ಹು-ಧಾ ಅವಳಿ ನಗರಕ್ಕೆ ನೀರು ಸರಬರಾಜುವಿನಲ್ಲಿರುವ ಸಮಸ್ಯೆ ಕುರಿತು ಚರ್ಚಿಸಿ, ನಿರ್ಧರಿಸುವ ಬಗ್ಗೆ ಬುಧವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಲುಷಿತ ನೀರು ಹಾಗೂ 8-10 ದಿನಕ್ಕೊಮ್ಮೆ ಕಡಿಮೆ ಅವಧಿಗೆ ನೀರು ಸರಬರಾಜು ಆಗುತ್ತಿರುವುದರಿಂದ ಚುನಾಯಿಸಿ ಕಳುಹಿಸಿದ ಮತದಾರರು ಪ್ರತಿದಿನ ಮನೆಗೆ ಬಂದು ಹಿಡಿಶಾಪ ಹಾಕುತ್ತಿದ್ದಾರೆ. ಅಳಲು ತೋಡಿಕೊಳ್ಳುತ್ತಿದ್ದಾರೆ. ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕೆಂದು ಒತ್ತಾಯಿಸಿದರು.

ಹು-ಧಾ ಮಹಾನಗರದ 24×7 ಹೊರತುಪಡಿಸಿ ಇನ್ನುಳಿದ ಎಲ್ಲ ವಾರ್ಡ್‌ಗಳಿಗೆ ಕಡ್ಡಾಯವಾಗಿ ಐದು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲೇಬೇಕೆಂದು ಮಹಾಪೌರ ಈರೇಶ ಅಂಚಟಗೇರಿ ಆದೇಶಿಸಿದರು.

ಮಹಾಪೌರರು ಎಲ್‌ ಆ್ಯಂಡ್‌ ಟಿ, ಜಲ ಮಂಡಳಿ, ಕರ್ನಾಟಕ ರಾಜ್ಯ ಒಳಚರಂಡಿ ಮತ್ತು ಅಭಿವೃದ್ಧಿ ಮಂಡಳಿ ಹಾಗೂ ಪಾಲಿಕೆ ಅವಳಿ ನಗರದ ಜನತೆಗೆ ಐದು ದಿನಕ್ಕೊಮ್ಮೆ ನೀರು ಪೂರೈಸಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಿದರು.

ಪಾಲಿಕೆ ಸಭಾ ನಾಯಕ ತಿಪ್ಪಣ್ಣ ಮಜ್ಜಗಿ ಮಾತನಾಡಿ, ಎಲ್‌ ಆ್ಯಂಡ್‌ ಟಿ ಕಂಪನಿ ಕೆಲಸ ಮಾಡಲು ಬಂದಿಲ್ಲ. 24×7 ಗಂಟೆ ನೀರು ಸರಬರಾಜು ನಿರ್ವಹಣೆ ಕಾಮಗಾರಿ ಕುಂಠಿತವಾಗಿದೆ. ಅನೇಕ ಕಡೆ ಒಳಚರಂಡಿ ನೀರು ಕುಡಿಯುವ ನೀರಿಗೆ ಸೇರುತ್ತಿದ್ದು, ಜನರಿಗೆ ಬಹಳ ತೊಂದರೆಯಾಗಿದೆ. ಶೇ.80 ಸಮಸ್ಯೆ ಬಗೆಹರಿದಿಲ್ಲ. 20ಕೋಟಿ ರೂ. ವೆಚ್ಚದಲ್ಲಿ ಹೊಸ ಜಾಕ್‌ವೆಲ್‌ ಅಳವಡಿಸಿದಾಗಿನಿಂದ 4 ದಿನಕ್ಕೊಮ್ಮೆ ಪೂರೈಕೆಯಾಗುತ್ತಿದ್ದ ನೀರು ಕಳೆದ 7-8 ತಿಂಗಳಿಂದ 8-10 ದಿವಸಕ್ಕೊಮ್ಮೆ ಬರುತ್ತಿದೆ. ಎಲ್‌ ಆ್ಯಂಡ್‌ ಟಿ ಕಂಪನಿಯವರೇ ಸಮಸ್ಯೆ ಮಾಡುತ್ತಿದ್ದಾರೆ. ಜನರು ನೀರಿನ ತೀವ್ರ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾರಣ 3-4 ಇಲಾಖೆಯವರ ಬದಲು ಯಾರಾದರೂ ಒಬ್ಬರು ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕು, ಮಹಾಪೌರರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

Advertisement

ಪಾಲಿಕೆ ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಮಾತನಾಡಿ, ಹೊರ ಗುತ್ತಿಗೆ ನೌಕರರು ಕಾನೂನು ಹೋರಾಟ ನಡೆಸಿದ್ದು ಹೀಗಾಗಿ ನೀರು ಸರಬರಾಜುವಿನಲ್ಲಿ ಮತ್ತು ಯೋಜನೆ ಅನುಷ್ಠಾನಕ್ಕೆ ಸಮಸ್ಯೆ ಆಗುತ್ತಿದೆ. ಅವರೆಲ್ಲ ಎಲ್‌ ಆ್ಯಂಡ್‌ ಟಿ ಕಂಪನಿಗೆ ಹಾಜರಾದರೆ ಈ ಸಮಸ್ಯೆ ಬಗೆಹರಿಯಲಿದೆ ಎಂದರು. ಪಾಲಿಕೆ ಸದಸ್ಯ ಕಾಂಗ್ರೆಸ್‌ನ ಸುವರ್ಣ ಕಲ್ಲಕುಂಟ್ಲಾ ಮಾತನಾಡಿ, ಜಲಮಂಡಳಿ ಅಧಿಕಾರಿಗಳು ನೀರಿನ ಸಂಪರ್ಕ ಕಲ್ಪಿಸಲು ಜನರಿಂದ ಹಣ ಪಡೆದು, ಇಲ್ಲಿಯವರೆಗೆ ಅಳವಡಿಸಿಲ್ಲ. ಸಂಪರ್ಕ ಕಲ್ಪಿಸಲು ಜನರಿಂದಲೇ ಸಾಮಗ್ರಿ, ಮೀಟರ್‌ ಖರೀದಿ ಮಾಡಿಸಿ, ಕಾರ್ಮಿಕರ ಖರ್ಚು ಪಡೆದಿದ್ದಾರೆ. ಅಧಿಕಾರಿಗಳಿಗೆ ಈ ಬಗ್ಗೆ ಕೇಳಿದರೆ ಪಾಲಿಕೆಯಲ್ಲಿ ಹಣವಿಲ್ಲ ಎನ್ನುತ್ತಿದ್ದಾರೆ. ಕಾರಣ ಜನರಿಂದ ಹಣ ಪಡೆದ ಅಧಿಕಾರಿ, ಸಿಬ್ಬಂದಿ ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಕಳೆದ ಮೂರು ತಿಂಗಳಿಂದ ನಗರದಲ್ಲಿ ನೀರಿನ ಬಿಲ್‌ ನೀಡಿಲ್ಲ. ಇದರಿಂದ ಪಾಲಿಕೆಗೆ 9 ಕೋಟಿ ರೂ. ಆದಾಯ ಗೋತಾ ಆಗಿದೆ. ತಕ್ಷಣ ಬಿಲ್‌ ನೀಡುವ ವ್ಯವಸ್ಥೆ ಮಾಡಬೇಕು ಎಂದರು.

ಪಾಲಿಕೆ ಸದಸ್ಯರಾದ ಕವಿತಾ ಕಬ್ಬೇರ, ಸುವರ್ಣ ಕಲ್ಲಕುಂಟ್ಲಾ, ಆರೀಫ ಭದ್ರಾಪೂರ, ಸಾಹಿರಾಬಾನು ಕಿತ್ತೂರ, ರಾಧಾಬಾಯಿ ಸಫಾರೆ, ರಾಮಣ್ಣ ಬಡಿಗೇರ, ಶಿವು ಮೆಣಸಿನಕಾಯಿ, ನಿರಂಜನ ಹಿರೇಮಠ, ನಜೀರಅಹ್ಮದ ಹೊನ್ಯಾಳ, ಚಂದ್ರಶೇಖರ ಮನಗುಂಡಿ, ಸಂದಿಲಕುಮಾರ ಸೇರಿದಂತೆ ಇತರೆ ಸದಸ್ಯರು ಕಲುಷಿತ ನೀರು ಬರುತ್ತಿರು ವುದನ್ನು ಖಂಡಿಸಿ, ಸಮಸ್ಯೆ ಬಗೆಹರಿಸಬೇಕೆಂದು ಆಗ್ರಹಿಸಿದರು.

ದಂಡವಿಲ್ಲದೆ ಶುಲ್ಕ: ಪಾಲಿಕೆ ಆಯುಕ್ತ ಡಾ|ಬಿ. ಗೋಪಾಲಕೃಷ್ಣ ಮಾತನಾಡಿ, ನಗರದ ಎಲ್ಲ ವಾರ್ಡ್‌ಗಳಿಗೆ ನಿರಂತರ ನೀರು ಸರಬರಾಜು ಮಾಡಲು ಮುಖ್ಯ ಕೊಳವೆ ಮಾರ್ಗ ಅಳವಡಿಸಲು ಇನ್ನು 3-4ದಿನದಲ್ಲಿ ಎಲ್ಲ ಡಿಸೈನ್‌ ಅನುಮೋದನೆ ಪಡೆದು, ಬಂಡವಾಳ ಕೆಲಸದಡಿ ಜನಸಂದಣಿ ಪ್ರದೇಶಗಳಿಂದ ಪೈಪ್‌ ಲೈನ್‌ ಕಾಮಗಾರಿ ಆರಂಭಿಸ ಲಾಗುವುದು. ಮುಂದಿನ ಸಾಮಾನ್ಯ ಸಭೆಯೊಳಗೆ ಕಾಮಗಾರಿಯ ಪ್ರಗತಿ ತೋರಿಸಲಾಗುವುದು. ಜಲಮಂಡಳಿಯ ಗುತ್ತಿಗೆ ನೌಕರರು ಎಲ್‌ ಆಂಡ್‌ ಟಿ ಕಂಪನಿಗೆ ಸೇರದ ಕಾರಣ ನೀರಿನ ಸರಬರಾಜು, ಬಿಲ್‌ ವಿತರಣೆ ಸೇರಿದಂತೆ ಅನೇಕ ಸಮಸ್ಯೆ ಎದುರಾಗಿದೆ. ಬಿಲ್‌ ನೀಡುವ ಸಮಸ್ಯೆ ಒಂದು ವಾರದಲ್ಲಿ ಬಗೆಹರಿಸಲಾಗುತ್ತದೆ. ಪ್ರತ್ಯೇಕವಾಗಿ ಮೂರು ತಿಂಗಳ ಬಿಲ್‌ ಅನ್ನು ದಂಡವಿಲ್ಲದೆ ನೀಡಲಾಗುವುದು ಎಂದರು.

ಎಂಟು ದಿನದೊಳಗೆ ಬೋರ್‌ವೆಲ್‌ ದುರಸ್ತಿಗೊಳಿಸಿ: ಕೆಎಸ್‌ ಯುಡಬುÉÂಬಿಯವರು ದುರಸ್ತಿಯಲ್ಲಿರುವ ಬೋರ್‌ವೆಲ್‌ಗ‌ಳನ್ನು ಎಂಟು ದಿನದೊಳಗೆ ರಿಪೇರಿ ಮಾಡಲಾಗದಿದ್ದರೆ ವಾಪಸ್‌ ಪಡೆದು ಪಾಲಿಕೆಯ ವಲಯ ಕಚೇರಿಗಳಿಂದಲೇ ದುರಸ್ತಿಗೊಳಿಸಬೇಕೆಂದು ಆದೇಶಿಸಿದ ಮಹಾಪೌರ ಈರೇಶ ಅಂಚಟಗೇರಿ ಅವರು, ಕಲುಷಿತ ನೀಡು ಕುಡಿದು ಏನಾದರೂ ಪ್ರಾಣ ಹಾನಿಯಾದರೆ ಯಾರು ಹೊಣೆ ಎಂದು ತರಾಟೆ ತೆಗೆದುಕೊಂಡರು.

ಎಲ್‌ ಆ್ಯಂಡ್‌ ಟಿಯವರು ಹು-ಧಾ ಮಹಾನಗರಕ್ಕೆ ನೀರು ಸರಬರಾಜು ಹೊಣೆಗಾರಿಕೆ ಪಡೆದು ಎರಡು ವರ್ಷವಾದರೂ ಇನ್ನು ಪೈಪ್‌ಲೈನ್‌ ಅಳವಡಿಕೆಯ ಡಿಸೈನ್‌ ಮಾಡುತ್ತಿದ್ದಾರೆ ಎಂದರೆ ಹೇಗೆ? ಪಾಲಿಕೆ ಆಯುಕ್ತರು ಸಹ ಅವರನ್ನೇ ಅವಲಂಬಿಸುತ್ತಾರೆಂದರೆ ಹೇಗೆ? ನೀರು ಸರಬರಾಜು ಬಗ್ಗೆಯೇ ಪ್ರತಿ ತಿಂಗಳು ಸಭೆ ನಡೆಸಲು ಆಗಲ್ಲವೆಂದರು.

ಅಧಿಕಾರಿಗಳನ್ನು ಸಂಪರ್ಕಿಸಿದರೂ ಸ್ಪಂದಿಸುತ್ತಿಲ್ಲ: ಅಸಮಾಧಾನ ಪಾಲಿಕೆ ಸಭೆಯಲ್ಲಿ ಬಹತೇಕ ಸದಸ್ಯರು ಎಲ್‌ ಆ್ಯಂಡ್‌ ಟಿ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಾಲಿಕೆಯೇ ನೀರಿನ ಸರಬರಾಜು ನಿರ್ವಹಣೆ ತೆಗೆದುಕೊಳ್ಳಬೇಕು. ಕಂಪನಿ ನಿರ್ವಹಣೆ ಆರಂಭದಲ್ಲೇ ಮಾಡುತ್ತಿಲ್ಲ. ಯೋಜನೆ ಅನುಷ್ಠಾನ ಬಳಿಕ ಏನು ಗತಿ. ಅಧಿಕಾರಿಗಳನ್ನು ಸಂಪರ್ಕಿಸಿದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಪಾಲಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಜಲಮಂಡಳಿ ಅಧಿಕಾರಿ ಎಸ್‌. ಕರಿಯಪ್ಪ ಅವರು, ನೀರ ಸಾಗರ ಮತ್ತು ರಾಯಾಪುರ ಪೈಪ್‌ ಒಡೆದು ಸಮಸ್ಯೆಯಾಗಿದೆ. ಕೆಲವು ವಾರ್ಡ್‌ ಬಿಟ್ಟರೆ ಇನ್ನುಳಿದೆಡೆ ನೀರು ಪೂರೈಕೆಯಾಗುತ್ತಿದೆ ಎಂದರು.

ವಠಾರದಲ್ಲಿರುವ 40 ಕುಟುಂಬಗಳಿಗೆ ವಾರಕ್ಕೊಮ್ಮೆ ಟ್ಯಾಂಕರ್‌ ನೀರು ಪೂರೈಸಲಾಗುತ್ತಿದೆ. ಹೀಗಾಗಿ ಇಲ್ಲಿನ ಜನ ನೀರನ್ನು ಔಷಧಿ ಕುಡಿದಂತೆ ಕುಡಿಯಬೇಕಾಗಿದೆ ಎಂದು ವಾರ್ಡ್‌ ನಂ. 75ರ ಸದಸ್ಯೆ ಮನಸೂರಾ ಮುದಗಲ್‌ ಹೇಳಿದರು.‌

ದೇಶಕ್ಕೆ ಸ್ವಾತಂತ್ರ್ಯ ದೊರೆತು 75ವರ್ಷವಾದರೂ ಎತ್ತಿನಗುಡ್ಡ, ಸಂತೋಷನಗರ ಸೇರಿದಂತೆ ವಾರ್ಡ್‌ ನಂ. 73 ಮತ್ತು 75ರ ಜನರು ಇನ್ನು ಪಾಲಿಕೆಯಿಂದ ಕುಡಿಯುವ ನೀರು ಸರಬರಾಜು ವ್ಯವಸ್ಥೆ ಕಂಡಿಲ್ಲ. ವಾರ್ಡ್ ಗಳಲ್ಲಿ ಜನರಿಗೆ ನೀರಿನ ಬಿಲ್‌ ಡಬಲ್‌ ಆಗಿ ಬರುತ್ತಿದೆ ಎಂದು ಸದಸ್ಯ ಶಿವು ಮೆಣಸಿನಕಾಯಿ, ಸೂರವ್ವ ಪಾಟೀಲ. ಭಿಕ್ಷೆ ಬೇಡಿ ಬರುವ ಜನರಿಗೂ ನೀರು ಕೊಡುತ್ತಿಲ್ಲವೆಂದರೆ ಹೇಗೆ? ಕೈ ಮುಗಿದು ಕೇಳುತ್ತೇನೆ ನೀರಿಗಾಗಿ ಜನರಿಂದ ದಿನಾಲು ನಾನು ಕೇಳಿ ಕೇಳಿ ರೋಸಿ ಹೋಗಿದ್ದೇನೆ. ಈಗಲಾದರೂ ನೀರು ಕೊಡಿ ಎಂದು ಕಾಂಗ್ರೆಸ್‌ ಪಕ್ಷದ ಸದಸ್ಯೆ ಕೋರಿದರು.

ಪಾಲಿಕೆ ಸದಸ್ಯರಿಗೆ ವಾಲ್‌ವುನ್‌ಗಳು ಗೌರವ ನೀಡುತ್ತಿಲ್ಲ ಅವನನ್ನು ಸಭೆಗೆ ಕರೆಯಿಸಿ ಎಂದು ವಾರ್ಡ್‌ ನಂ.26ರ ಬಿಜೆಪಿ ಸದಸ್ಯೆ ನೀಲಮ್ಮ ಅರವಳದ ಪಟ್ಟು ಹಿಡಿದರು. ಆಗ ಪಕ್ಷಾತೀತವಾಗಿ ಎಲ್ಲ ಸದಸ್ಯರು ಆತನನ್ನು ಕರೆಯಿಸಿ ಕ್ಷಮೆ ಕೋರುವಂತೆ ಒತ್ತಾಯಿಸಿದರು. ಕಂಪನಿಯ ಕಿರಿಯ ಅಭಿಯಂತ ಸುನಿಲ ಬಡಿಗೇರ ಸಭೆಗೆ ಆಗಮಿಸಿ ಕ್ಷಮೆ ಕೋರಿದರು. ಇನ್ಮುಂದೆ ಮರುಕಳಿಸದಂತೆ ಸಿಬ್ಬಂದಿಗೆ ತಾಕೀತು ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next