Advertisement

ನಂದಿನಿ ಹಾಲಿನಲ್ಲಿ ಎ, ಡಿ ವಿಟಮಿನ್ಸ್‌

01:12 AM Jul 31, 2019 | Lakshmi GovindaRaj |

ಬೆಂಗಳೂರು: ಜನಸಾಮಾನ್ಯರಲ್ಲಿ ಹೆಚ್ಚುತ್ತಿರುವ ವಿಟಮಿನ್‌ ಎ ಮತ್ತು ಡಿ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಕೆಎಂಎಫ್ ತನ್ನ ಎಲ್ಲಾ ಮಾದರಿಯ ಹಾಲಿನಲ್ಲಿ ವಿಟಮಿನ್‌ ಎ ಮತ್ತು ಡಿ ಸಾರವರ್ಧನೆ ಮಾಡಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್)ಕೇಂದ್ರ ಕಚೇರಿಯಲ್ಲಿ ಮಂಗಳವಾರ ವಿಟಮಿನ್‌ ಎ ಮತ್ತು ಡಿ ಸಾರವರ್ಧನೆಗೊಂಡ ನಂದಿನಿ ಹಾಲಿನ ನೂತನ ಪ್ಯಾಕೆಟ್‌ಗಳನ್ನು ಜಯದೇವ ಹೃದ್ರೋಗ ವಿಜ್ಞಾನ ಹಾಗೂ ಸಂಶೋಧನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌ ಬಿಡುಗಡೆಗೊಳಿಸಿದರು.

Advertisement

ಜನರಲ್ಲಿ ಆರೋಗ್ಯ ಸಮಸ್ಯೆ: ಈ ವೇಳೆ ಮಾತನಾಡಿದ ಅವರು, ಜನರ ಜೀವನ ಶೈಲಿ ಬದಲಾಗಿ ಸೂರ್ಯನ ಕಿರಣಗಳು ದೇಹದ ಮೇಲೆ ಬೀಳುತ್ತಿಲ್ಲ. ಹೀಗಾಗಿ, ಮಕ್ಕಳನ್ನು ಸೇರಿದಂತೆ ಎಲ್ಲ ವಯೋಮಾನದವರು ವಿಟಮಿನ್‌ ಡಿ ಕೊರತೆಯಿಂದ ಬಳಲಿ ಮೂಳೆ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗೆ ಜಯದೇವ ಸಂಸ್ಥೆಯಿಂದ ನಡೆಸಿದ ಸಂಶೋಧನೆಯಲ್ಲಿ ವಿಟಮಿನ್‌ ಡಿ ಕೊರತೆಯಿಂದ ಮೂಳೆ ಸಮಸ್ಯೆ ಮಾತ್ರವಲ್ಲದೇ ಹೃದ್ರೋಗ, ರಕ್ತದ ಒತ್ತಡ, ಮಧುಮೇಹ ಬರುತ್ತದೆ ಎಂದು ತಿಳಿದುಬಂದಿದೆ.

ಹೀಗಾಗಿ, ಬಮೂಲ್‌ಗೆ ಕೆಲ ವರ್ಷಗಳ ಹಿಂದೆ ಪತ್ರ ಬರೆದು ಜನ ಸಾಮಾನ್ಯರಿಗೆ ಹಾಲಿನ ಮೂಲಕ ಡಿ ವಿಟಮಿನ್‌ ಪೂರೈಸುವ ಕುರಿತು ಪ್ರಸ್ತಾಪಿಸಿದೆ. ಸದ್ಯ ಈ ಕಾರ್ಯಕ್ಕೆ ಕೆಎಂಎಫ್ ಮುಂದಾಗಿರುವುದು ಸಂತಸದ ವಿಚಾರ. ವಿಟಮಿನ್‌ ಡಿ ಜತೆಗೆ ವಿಟಮಿನ್‌ ಎ ಕೂಡಾ ಸೇರಿಸಿರುವುದರಿಂದ ಕಣ್ಣಿನ ದೃಷ್ಟಿಗೆ ನೆರವಾಗಲಿದೆ ಎಂದು ಹೇಳಿದರು.

ಉತ್ತಮ ನಡೆ: ಭಾರತದಲ್ಲಿ ಶೇ.50ರಷ್ಟು ಜನ ಜೀವನ ಶೈಲಿ ಬದಲಾವಣೆ, ಶೇ.25ರಷ್ಟು ಜನ ಹೃದ್ರೋಗ ಸಮಸ್ಯೆಯಿಂದ ಸಾವಿಗೀಡಾಗುತ್ತಿದ್ದಾರೆ. ಸದ್ಯ ಭಾರತದಲ್ಲಿ ಶೇ.40 ರಷ್ಟು ಜನರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇದೆ. ಹಾಲೆಂಡ್‌, ಕೆನಡಾ, ಅಮೆರಿಕ ದೇಶಗಳಲ್ಲಿ ಬಹಳ ವರ್ಷಗಳಿಂದಲೇ ಹಾಲಿನಲ್ಲಿ ಡಿ ವಿಟಮಿನ್‌ ಪೂರೈಕೆ ಮಾಡಲಾಗುತ್ತಿದೆ. ಭಾರತದಲ್ಲೂ ಈ ಪ್ರವೃತ್ತಿ ಆರಂಭವಾಗಿರುವುದು ಜನರ ಆರೋಗ್ಯ ದೃಷ್ಟಿಯಿಂದ ಉತ್ತಮ ನಡೆ ಎಂದು ತಿಳಿಸಿದರು.

ಕರ್ನಾಟಕ ಹಾಲು ಮಹಾಮಂಡಳಿ ಮಾರುಕಟ್ಟೆ ವಿಭಾಗದ ನಿರ್ದೇಶಕ ಮೃತ್ಯುಂಜಯ ಟಿ.ಕುಲಕರ್ಣಿ ಮಾತನಾಡಿ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ವರದಿ ಹಾಗೂ ರಾಷ್ಟ್ರೀಯ ಪೋಷಕಾಂಶ ನಿರ್ವಹಣಾ ಪ್ರಾಧಿಕಾರದ ಸಮೀಕ್ಷೆ ಪ್ರಕಾರ ದೇಶದಲ್ಲಿ ಶೇ.70 ರಿಂದ 80 ರಷ್ಟು ಜನರು ವಿಟಮಿನ್‌ ಎ ಮತ್ತು ಡಿ ಜೀವಸತ್ವಗಳ ಕೊರತೆಯಿಂದ ಬಳಲುತ್ತಿದ್ದಾರೆ. ಪ್ರಸ್ತುತ ಜೀವನ ಶೈಲಿಯಿಂದ ನಿಯಮಿತವಾಗಿ ಎ ಮತ್ತು ಡಿ ವಿಟಮಿನ್‌ಗಳನ್ನು ಪಡೆಯಲು ಜನಸಾಮಾನ್ಯರಿಗೆ ಸಾಧ್ಯವಾಗುತ್ತಿಲ್ಲ.

Advertisement

ಹೀಗಾಗಿ, ಎಲ್ಲಾ ವಯೋಮಾನ ಜನರು ನಿತ್ಯ ಬಳಸುವ ಹಾಲಿನಲ್ಲಿ ವಿಟಮಿನ್‌ ಪೂರೈಕೆ ಮಾಡಲು ಭಾರತ ಆಹಾರ ಸುರಕ್ಷತೆ ಹಾಗೂ ಮಾನದಂಡಗಳ ಪ್ರಾಧಿಕಾರ ಮುಂದಾಗಿದೆ. ಪ್ರಾಧಿಕಾರದ ಸೂಚನೆ ಹಾಗೂ ಮಾರ್ಗದರ್ಶನದಲ್ಲಿ ರಾಷ್ಟ್ರದ 2ನೇ ಅತೀ ದೊಡ್ಡ ಸಹಕಾರಿ ಹಾಲು ಮಹಾ ಮಂಡಳಿ ಕೆ.ಎಂಎಫ್ನಿಂದಲೇ ನಿತ್ಯ ಪೂರೈಕೆಯಾಗುವ ನಂದಿನಿ ಹೆಸರಿನ ಎಲ್ಲಾ ಮಾದರಿಯ ಹಾಲಿನಲ್ಲಿ ಎ ಮತ್ತು ಡಿ ವಿಟಮಿನ್‌ ಸಾರವರ್ಧನೆ ಮಾಡಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಹೊಣೆಗಾರಿಕೆ: ನಿತ್ಯ 45 ಲಕ್ಷ ಲೀಟರ್‌ ಹಾಲನ್ನು ಕೆಎಂಎಫ್ ಮಾರಾಟ ಮಾಡುತ್ತಿದ್ದು, ಅಷ್ಟು ಪ್ರಮಾಣದ ಹಾಲಿನಲ್ಲೂ ವಿಟಮಿನ್‌ ಸೇರಲಿದೆ. ಮುಂದಿನ ದಿನಗಳಲ್ಲಿ ಹಾಲಿನ ಉತ್ಪನ್ನಗಳಲ್ಲೂ ಜೀವಸತ್ವ ಸೇರಿಸಲು ಸಂಶೋಧನೆ ನಡೆಸಲಾಗುತ್ತಿದೆ. ವಿಟಮಿನ್‌ ಸೇರ್ಪಡೆಯಿಂದ ಪ್ರತಿ ಲೀ. ಹಾಲಿಗೆ 3 ರಿಂದ 4 ಪೈಸೆ ಹೆಚ್ಚುವರಿ ವೆಚ್ಚ ತಗುಲಲಿದೆ. ಗ್ರಾಹಕರಿಗೆ ಹೊರೆಯಾಗಬಾರದು ಎಂದು ಆ ವೆಚ್ಚವನ್ನು ಕೆಎಂಎಫ್ನಿಂದಲೇ ಭರಿಸಲಿದೆ. ಮೊದಲ ಆರು ತಿಂಗಳು ಹಾಲಿಗೆ ವಿಟಮಿನ್‌ ಸೇರಿಸುವ ವೆಚ್ಚವನ್ನು ಭರಿಸಲು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ಚಟುವಟಿಕೆಯಲ್ಲಿ ಟಾಟಾ ಟ್ರಸ್ಟ್‌ ಕೆಎಂಎಫ್ ಜತೆ ಕೈಜೋಡಿಸಿದೆ ಎಂದರು.

ಸಿರಿಧಾನ್ಯ ಲಡ್ಡು, ಸಿರಿಧಾನ್ಯ ಶಕ್ತಿ ಬಿಡುಗಡೆ: ಎಲ್ಲೆಡೆ ಸಿರಿಧಾನ್ಯ ಬೇಡಿಕೆ ಹೆಚ್ಚಾಗಿರುವುದರಿಂದ ಕೆಎಂಎಫ್ ನೂತನವಾಗಿ ಸಿರಿಧಾನ್ಯ ಉತ್ಪನ್ನಗಳನ್ನು ಸಿದ್ಧಪಡಿಸಿದೆ. ಸಿರಿಧಾನ್ಯದಿಂದ ತಯಾರಿಸಿದ ನಂದಿನಿ ಲಡ್ಡು, ಸಿರಿಧಾನ್ಯ ಫೌಡರ್‌ “ನಂದಿನಿ ಶಕ್ತಿ’ ಇದೇ ವೇಳೆ ಬಿಡುಗಡೆ ಮಾಡಲಾಯಿತು. “ಮತ್ತೆ ಹಿಂದಿನ ಆಹಾರ ಪದ್ಧತಿ ರೂಢಿಗೆ ಬರುತ್ತಿದ್ದು, ಸಿರಿಧಾನ್ಯ ಸೇವನೆ ಹೆಚ್ಚಾಗಿದೆ. ಸಿರಿಧಾನ್ಯ ಸೇವನೆಯು ದೇಹದಲ್ಲಿ ಗ್ಲೂಕೋಸ್‌ ಬಿಡುಗಡೆ ಅವಧಿ ನಿಧಾನವಾಗಿಸುತ್ತದೆ. ಮಧುಮೇಹ ಹತೋಟಿಗೆ ಸಹಕಾರಿಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next