Advertisement

ಪಾಕಿಸ್ಥಾನದ ದಾಳಿಗೆ 8ರ ಬಾಲಕಿ, ಯೋಧ ಸಾವು

03:45 AM Jul 18, 2017 | Team Udayavani |

ಜಮ್ಮು: ಗಡಿಯಲ್ಲಿ ಸತತವಾಗಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ಥಾನವು ಸೋಮವಾರ ನಡೆಸಿದ ಗುಂಡಿನ ದಾಳಿಗೆ 8 ವರ್ಷದ ಬಾಲಕಿ ಮತ್ತು  ಯೋಧ ಮೃತಪಟ್ಟಿದ್ದಾರೆ. ಪಾಕ್‌ನ ಅಪ್ರಚೋದಿತ ದಾಳಿಗೆ ಆಕ್ರೋಶಗೊಂಡಿರುವ ಭಾರತೀಯ ಸೇನಾಪಡೆ ನೆರೆರಾಷ್ಟ್ರಕ್ಕೆ ಖಡಕ್‌ ಸಂದೇಶ ರವಾನಿಸಿದೆ.

Advertisement

“ನೀವು ನಡೆಸುತ್ತಿರುವ ಕದನ ವಿರಾಮ ಉಲ್ಲಂಘನೆಗೆ ತಕ್ಕ ಪ್ರತ್ಯುತ್ತರ ನೀಡುವ ಹಕ್ಕು ನಮಗಿದೆ ಎಂಬುದನ್ನು ಮರೆಯಬೇಡಿ’ ಎಂದು ಭಾರತದ ಸೇನಾ ಕಾರ್ಯಾಚರಣೆಗಳ ಪ್ರಧಾನ ನಿರ್ದೇಶಕ(ಡಿಜಿಎಂಒ) ಲೆ.ಜ. ಎ.ಕೆ.ಭಟ್‌ ಎಚ್ಚರಿಕೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಛ…, ರಜೌರಿ ಮತ್ತು ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕ್‌ ಸೇನೆಯು ಸೋಮವಾರ ಶೆಲ್‌ ದಾಳಿ ನಡೆಸಿತು. ಇದಕ್ಕೆ ಸೇನೆಯೂ ಪ್ರತಿದಾಳಿ ನಡೆಸಿದ ಕಾರಣ ಕೆಲ ಹೊತ್ತು ಎರಡೂ ಕಡೆ ಭಾರೀ ಗುಂಡಿನ ಚಕಮಕಿ ನಡೆಯಿತು. ಮೊದಲ ದಾಳಿ ವೇಳೆ, ಯೋಧ ನಾಯ್ಕ ಮುದಸ್ಸರ್‌ ಅಹ್ಮದ್‌ ಗಂಭೀರವಾಗಿ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಹುತಾತ್ಮ ರಾದರು ಎಂದು ರಕ್ಷಣಾ ವಕ್ತಾರರು ತಿಳಿಸಿ ದ್ದಾರೆ. 37ರ ಹರೆಯದ ಅಹ್ಮದ್‌ ಅವರು ಪತ್ನಿ ಶಹೀನಾ ಮುದಸ್ಸರ್‌ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

8ರ ಬಾಲಕಿ ಸಾವು: ಇದಾದ ಬಳಿಕ ಬಾಲಕೋಟ್‌, ಮಂಜಕೋಟ್‌ ಮತ್ತು ಬರೋಟಿ ವಲಯದಲ್ಲಿ ನಾಗರಿಕರನ್ನು ಗುರಿಯಾಗಿಸಿ ಪಾಕ್‌ ನಡೆಸಿದ ದಾಳಿಗೆ 8 ವರ್ಷದ ಸಾಜದಾ ಹೌಸರ್‌ ಸ್ಥಳದಲ್ಲೇ ಅಸುನೀಗಿದಳು. ಮತ್ತಿಬ್ಬರು ಗ್ರಾಮಸ್ಥರು ಗಾಯಗೊಂಡರು. ಈ ಪ್ರದೇಶಗಳಲ್ಲಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮನೆಗಳಿಂದ ಹೊರಬರದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಸೋಮವಾರ ಸಂಜೆ ಮತ್ತೆ ಕದನ ವಿರಾಮ ಉಲ್ಲಂ ಸಿದ ಪಾಕ್‌, ಬಾರಾಮುಲ್ಲಾದ ಉರಿಯನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿತು. ಈ ವೇಳೆ ಯೋಧರೊಬ್ಬರು ಗಾಯಗೊಂಡರು. ಪ್ರಸಕ್ತ ತಿಂಗಳಲ್ಲಿ ಪಾಕ್‌ ದಾಳಿಗೆ ನಾಲ್ವರು ಯೋಧರು ಸೇರಿದಂತೆ ಏಳು ಮಂದಿ ಬಲಿಯಾಗಿದ್ದಾರೆ.

5 ಪಾಕ್‌ ಸೈನಿಕರ ಸಾವು: ಇನ್ನೊಂದೆಡೆ, ಭಾರತೀಯ ಸೇನೆ ನಡೆಸಿದ ದಾಳಿಗೆ ಪಾಕ್‌ ಯೋಧರು ತೆರಳುತ್ತಿದ್ದ ವಾಹನವೊಂದು ನೀಲಂ ಕಣಿವೆಯ ನದಿಗೆ ಉರುಳಿಬಿದ್ದ ಪರಿಣಾಮ ಐವರು ಯೋಧರು ಮೃತಪಟ್ಟಿದ್ದಾರೆ ಎಂದು ಪಾಕ್‌ ಸೇನೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಘಟನೆ ರವಿವಾರ ನಡೆದಿದೆ ಎಂದು  ಅದು ತಿಳಿಸಿದೆ.

Advertisement

ಖಡಕ್‌ ಎಚ್ಚರಿಕೆ 
ನೀಡಿದ ಸೇನೆ

ದಾಳಿ ಬೆನ್ನಲ್ಲೇ ಭಾರತ ಮತ್ತು ಪಾಕ್‌ನ ಡಿಜಿಎಂಒ ಗಳು ದೂರವಾಣಿ ಮೂಲಕ ಪರಸ್ಪರ ಸಂಭಾಷಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ಥಾನದ ಕ್ರಮದ ಬಗ್ಗೆ ತರಾಟೆಗೆ ತೆಗೆದುಕೊಂಡ ಭಾರತೀಯ ಡಿಜಿಎಂಒ ಭಟ್‌ ಅವರು, “ನೀವು ನಡೆಸುತ್ತಿರುವ ದಾಳಿಗೆ ಪ್ರತ್ಯುತ್ತರ ನೀಡುವ ಎಲ್ಲ ಹಕ್ಕು ನಮಗಿದೆ. ನಾವು ಎಲ್‌ಒಸಿಯಲ್ಲಿ ಶಾಂತಿ ಕಾಪಾಡುವ ವಿಚಾರ ದಲ್ಲಿ ಪ್ರಾಮಾಣಿಕವಾಗಿರುವ ಕಾರಣ ಸುಮ್ಮನಿದ್ದೇವೆ’ ಎಂದು ಹೇಳಿದ್ದಾರೆ. ಇಬ್ಬರು ಡಿಜಿಎಂಒಗಳು ಸುಮಾರು 10 ನಿಮಿಷ ಮಾತನಾಡಿದ್ದಾರೆ.

ಶಂಕಿತ ಲಷ್ಕರ್‌ ಉಗ್ರನ ಸೆರೆ
ಮುಂಬಯಿ ಉಗ್ರ ನಿಗ್ರಹ ಪಡೆಯ ಅಧಿಕಾರಿ ಗಳು ಸೋಮವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಶಂಕಿತ ಲಷ್ಕರ್‌ ಉಗ್ರನೊಬ್ಬ ನನ್ನು ಬಂಧಿಸಿದ್ದಾರೆ. ಸಲೀಂ ಖಾನ್‌ ಎಂಬ ಈತ ಉತ್ತರಪ್ರದೇಶದವನಾಗಿದ್ದು, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ತರಬೇತಿ ಪಡೆದಿ ದ್ದಾನೆ ಎಂದು ಶಂಕಿಸಲಾಗಿದೆ. 2008ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ಸಿಆರ್‌ಪಿಎಫ್ ಶಿಬಿರದ ಮೇಲಿನ ಫಿದಾಯಿನ್‌ ದಾಳಿಯಲ್ಲೂ ಈತ ಪಾಲ್ಗೊಂಡಿರುವ ಶಂಕೆಯಿದೆ. 

Advertisement

Udayavani is now on Telegram. Click here to join our channel and stay updated with the latest news.

Next