Advertisement

ರಸ್ತೆ ದುರಸ್ತಿಗಾಗಿ 97 ಲಕ್ಷ ರೂ. ಕ್ರಿಯಾಯೋಜನೆ 

05:33 PM Sep 07, 2018 | Team Udayavani |

ಅಳ್ನಾವರ: ಪಟ್ಟಣ ವ್ಯಾಪ್ತಿಯಲ್ಲಿ ಮಳೆಯಿಂದ ಹಾಳಾದ ರಸ್ತೆಗಳ ದುರಸ್ತಿಗೆ ಪ್ರಕೃತಿ ವಿಕೋಪ ಪರಿಹಾರ ನಿ ಧಿಯಲ್ಲಿ ಹಣ ಬಿಡುಗಡೆಗೆ 97 ಲಕ್ಷ ರೂ. ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಮುಖ್ಯಾಧಿಕಾರಿ ವೈ.ಜಿ. ಗದ್ದಿಗೌಡರ ತಿಳಿಸಿದರು.ಪಪಂ ಮಾಸಿಕ ಸಾಮಾನ್ಯ ಸಭೆಯಲ್ಲಿ ಅವರು ಮಾಹಿತಿ ನೀಡಿ, ಗಣೇಶ ಉತ್ಸವ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮತ್ತು ಗಣೇಶ ಮೆರವಣಿಗೆ ಸುಗಮವಾಗಿ ಸಾಗಲು ಅನುಕೂಲ ಕಲ್ಪಿಸಲು ಹಾಳಾದ ರಸ್ತೆಗಳನ್ನು ತುರ್ತಾಗಿ ದುರಸ್ತಿ ಮಾಡಬೇಕಿದೆ ಎಂದು ಸಭೆಗೆ ತಿಳಿಸಿ, ಅಗತ್ಯವಿರುವ ಕಡೆಗಳಲ್ಲಿ ಕಾಮಗಾರಿ ಕೈಕೊಳ್ಳಲು ಅನುಮೋದನೆ ಪಡೆದುಕೊಂಡರು.

Advertisement

ಪಟ್ಟಣ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಬಡಾವಣೆಗಳ ಆಸ್ತಿಗಳಿಗೆ ಹೆಚ್ಚುವರಿ ಕರ ವಿಧಿಸುವ ಬಗ್ಗೆ ಚರ್ಚೆ ನಡೆಯಿತು. ಆಯಾ ಬಡಾವಣೆಗಳ ನಿವಾಸಿಗಳ ಗಮನಕ್ಕೆ ತಂದು ಸ್ವಯಂಪ್ರೇರಿತವಾಗಿ ಕರ ತುಂಬಿಸಿಕೊಂಡು ಮೂಲಸೌಕರ್ಯ ಒದಗಿಸಲು ಸಹಕರಿಸಲು ಮನವೊಲಿಸುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು. ಪಟ್ಟಣದಲ್ಲಿ ಸುಮಾರು 760 ಅನಧಿಕೃತ ವಸತಿ ಆಸ್ತಿಗಳಿದ್ದು, ಪಪಂಗೆ ಆದಾಯ ಬರುವಂತೆ ಕ್ರಮಕೈಕೊಳ್ಳುವ ಅಗತ್ಯವಿದೆ ಎಂದು ಸದಸ್ಯರು ಹೇಳಿದರು.

ಪಟ್ಟಣದ ರಿಸಂ 38.39ರ ಬಡಾವಣೆಯ ಅಭಿವೃದ್ಧಿಯ ಬಗ್ಗೆ ವಿಶೇಷ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಹಾಗೂ ಜನವಸತಿಯಿರುವ ರಸ್ತೆಗಳನ್ನು ಹಂತ ಹಂತವಾಗಿ ಸುಧಾರಣೆ ಮಾಡಲು ನಿರ್ಣಯಿಸಲಾಯಿತು. ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಣೆ ಮಾಡಲಾಗುತ್ತಿದೆ. ಕಸ ಸಂಗ್ರಹಕಾರರು ಬಂದಾಗ ಕಸ ಹಾಕುವಂತೆ, ರಸ್ತೆ ಬದಿಗಳಲ್ಲಿ ತ್ಯಾಜ್ಯ ಎಸೆಯದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕ್ರಮಕೈಕೊಳ್ಳುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸ್ಥಾಯಿ ಸಮಿತಿ ರಚನೆ ವಿಷಯ ಚರ್ಚೆಗೆ ಬಂದಾಗ ಸದಸ್ಯರಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು, ಮತ್ತೂಂದು ದಿನ ನಿಗದಿ ಪಡಿಸಿ ಸಮಿತಿ ರಚನೆ ಮಾಡುವ ಬಗ್ಗೆ ನಿರ್ಣಯಿಸಲಾಯಿತು. ವಸತಿ ಯೋಜನೆ ಮತ್ತು ಪಪಂ ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಕುರಿತು, ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಪಟ್ಟಣದಲ್ಲಿ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ಸದಸ್ಯ ಉಸ್ಮಾನ ಬಾತಖಂಡೆ ದೂರಿದಾಗ ಇನ್ನುಳಿದ ಸದಸ್ಯರು ಸಹಮತಿ ವ್ಯಕ್ತಪಡಿಸಿದರು. ಪಟ್ಟಣದ ಅಂಗನವಾಡಿಗಳಲ್ಲಿ ಮಕ್ಕಳಿಗೆ ಸರಿಯಾಗಿ ಆಹಾರ ಧಾನ್ಯ ಮತ್ತು ಇತರೆ ಸೌಲಭ್ಯ ನೀಡುತ್ತಿಲ್ಲ. ಹಾಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತರ ಸಭೆ ಆಯೋಜನೆ ಮಾಡುವಂತೆ ಸದಸ್ಯರು ಮುಖ್ಯಾಧಿಕಾರಿಗೆ ಹೇಳಿದರು.

Advertisement

ಪಪಂ ಅಧ್ಯಕ್ಷೆ ಭಾಗ್ಯವತಿ ಕುರುಬದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಕಿರಣ ಗಡಕರ, ಸ್ಥಾಯಿ ಸಮೀತಿ ಅಧ್ಯಕ್ಷ ರಾಜೇಶ ಬೈಕೇರಿಕರ, ಸದಸ್ಯರಾದ ಛಗನಲಾಲ ಪಟೇಲ, ಪರಮೇಶ್ವರ ತೇಗೂರ, ಜೈಲಾನಿ ಸುದರ್ಜಿ, ಶಪೀಕಹ್ಮದ ಖತೀಬ, ವಿನಾಯಕ ಕುರುಬರ, ಪರಶುರಾಮ ಬೇಕನೇಕರ, ಮಂಜುಳಾ ಮೇದಾರ, ನಾಗರತ್ನಾ ವಾಗ್ಮೋಡೆ, ಸುನಂದಾ
ಕಲ್ಲು, ಮಹ್ಮದಉಸ್ಮಾನ ಬಾತಖಂಡೆ ಹಾಜರಿದ್ದರು. ಸಮುದಾಯ ಸಂಘಟನಾ ಅಧಿ ಕಾರಿ ನಾಗರಾಜ ಗುರ್ಲಹೋಸುರ ಸಭೆಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next