ಕೊಪ್ಪಳ: ಜಿಲ್ಲಾಡಳಿತವು ಕೋವಿಡ್ 19 ನಿಯಂತ್ರಣಕ್ಕಾಗಿ ಪೂರ್ವ ತಯಾರಿಯಾಗಿ ಜಿಲ್ಲೆಯಲ್ಲಿ ಪ್ರತಿ ಮನೆಯನ್ನೂ ಸರ್ವೇ ಮಾಡಿಸಿದೆ. ಆಶಾ ಕಾರ್ಯಕರ್ತೆಯರು ಶ್ರಮವಹಿಸಿ ಕೇವಲ 17 ದಿನಗಳಲ್ಲಿ ಜ್ವರ, ನೆಗಡಿ, ಕೆಮ್ಮು, ಕಿಡ್ನಿ ಸಮಸ್ಯೆ ಸೇರಿ ಇತರೆ ತೊಂದರೆಗಳಿಂದ ಬಳಲುತ್ತಿರುವ ಜನರ ಸಂಖ್ಯೆ ಕ್ರೋಢಿಕರಣಕ್ಕಾಗಿ 3,13,662 ಮನೆಗಳ ಶೇ.97.5 ರಷ್ಟು ಸರ್ವೇ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ.
ಜಿಲ್ಲಾಡಳಿತವು ಕೋವಿಡ್ 19 ನಿಯಂತ್ರಣಕ್ಕಾಗಿ ಹಲವು ದಿಟ್ಟ ಕ್ರಮಗಳನ್ನು ಕೈಗೊಂಡು ರಾಜ್ಯದಲ್ಲಿಯೇ ಗಮನ ಸೆಳೆದಿದೆ. ಜಿಲ್ಲೆಯಲ್ಲಿನ ಕೊರೊನಾಗೆ ನೆಲೆಯೂರದಂತೆ ಮಾಡಲು ಪ್ರತಿಯೊಂದು ಮನೆಯನ್ನ ಸರ್ವೇ ಮಾಡಿಸಿ ದತ್ತಾಂಶಗಳನ್ನು ಸಂಗ್ರಹಿಸಿಕೊಂಡಿದೆ. ಯಾವುದೇ ಸಂದರ್ಭದಲ್ಲೂ ಕೋವಿಡ್ 19 ಸೇರಿ ಇತರೆ ತೊಂದರೆ ಉಲ್ಬಣಿಸಿದರೂ ಆಯಾ ಕುಟುಂಬದ ಮೇಲೆ ಹೆಚ್ಚು ನಿಗಾ ಇರಿಸಲು ಜಿಲ್ಲಾಡಳಿತಕ್ಕೆ ಸೂಕ್ತ ಮಾಹಿತಿಯೂ ದೊರೆತಂತಾಗಿದೆ.
ಕೆಮ್ಮು, ನೆಗಡಿ ಇದ್ದವರ ಮಾಹಿತಿ ಸಂಗ್ರಹ: ಇನ್ನೂ ಸರ್ವೇ ವೇಳೆ ಜಿಲ್ಲೆಯಲ್ಲಿ 10 ದಿನದೊಳಗೆ ಕೆಮ್ಮು ನೆಗಡಿ, ಜ್ವರ, ಉಸಿರಾಟದಿಂದ ಬಳಲುವ 1557 ಜನ, 10 ದಿನ ಮೇಲ್ಪಟ್ಟವರ 1692 ಜನರ ಸರ್ವೇ ಮಾಡಿದೆ. ಇದಲ್ಲದೇ ಒಟ್ಟು ಗರ್ಭಿಣಿಯರ 15246, ಒಟ್ಟು ಬಾಣಂತಿಯರು-11,899, 5 ವರ್ಷದೊಳಗಿನ ಮಕ್ಕಳು ಒಟ್ಟು-139407, 5ರಿಂದ 10 ವರ್ಷದೊಳಗಿನ ಒಟ್ಟು ಮಕ್ಕಳು-1,22,617, 60 ವರ್ಷ ಮೇಲ್ಪಟ್ಟವರು -99,231, ಸಕ್ಕರೆ ಕಾಯಿಲೆ ಇರುವ-21,547 ಜನ, ಬಿಪಿ, ಹೃದಯ ಸಂಬಂಧಿ ಕಾಯಿಲೆ ಇರುವ-18,688 ಜನ, ಟಿಬಿ-1721, ಅಸ್ತಮಾ, ಶ್ವಾಸಕೋಶದ ಕಾಯಿಲೆಯಿಂದ ಬಳಲುವವರು ಒಟ್ಟು-2859, ಕಿಡ್ನಿ ಸಮಸ್ಯೆ- 451 ಜನ, ಕ್ಯಾನ್ಸರ್‌ನಿಂದ ಬಳಲುವ-1,683 ಜನರ ಕುರಿತು ಮಾಹಿತಿ ಸಂಗ್ರಹ ಮಾಡಿದ್ದಾರೆ.
ಅನ್ಯ ಜಿಲ್ಲೆ, ರಾಜ್ಯದಿಂದ ಬಂದವರು: ಇನ್ನೂ ಅನ್ಯ ಜಿಲ್ಲೆ ಹಾಗೂ ಅನ್ಯ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದವರ ಕುರಿತು ಜಿಲ್ಲಾಡಳಿತ ಸರ್ವೇ ನಡೆಸಿದ್ದು, 36,618 ಜನ ಆಗಮಿಸಿದ್ದಾರೆ. ಈ ಪೈಕಿ ಕೊಪ್ಪಳ ತಾಲೂಕಿನ-5819, ಕುಷ್ಟಗಿ-11,606, ಗಂಗಾವತಿ ತಾಲೂಕಿನ-11,700, ಯಲಬುರ್ಗಾ ತಾಲೂಕಿನ-7493 ಜನರು ಜಿಲ್ಲೆಗೆ ಆಗಮಿಸಿರುವ ಮಾಹಿತಿಯು ಸರ್ವೇ ವೇಳೆ ದಾಖಲಾಗಿದೆ.ಒಟ್ಟಾರೆ ಆಶಾ ಕಾರ್ಯಕರ್ತೆಯರು ಕೇವಲ 17 ದಿನಗಳಲ್ಲೇ ಜಿಲ್ಲೆಯಲ್ಲಿನ ವಿವಿಧ ಅಂಶಗಳ ಕುರಿತು ಸರ್ವೇ ಮಾಡಿ ಗಮನ ಸೆಳೆದಿದ್ದಾರೆ. ಈ ವರೆಗೂ ಶೇ. 97.5 ರಷ್ಟು ಸರ್ವೇ ಪೂರ್ಣಗೊಳಿಸಿದ್ದಾರೆಂದು ಜಿಲ್ಲಾಧಿಕಾರಿ ಸುನೀಲ್ ಕುಮಾರ ಅವರು ಮಾಹಿತಿ ನೀಡಿದ್ದಾರೆ.