ವಿಜಯಪುರ: ರಾಜ್ಯದಲ್ಲಿ ಸಕ್ಕರೆ ಉತ್ಪಾದನೆಗೆ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಿಸಿ ರೈತರಿಗೆ ಹಿಂಬಾಕಿ ಪಾವತಿ ಹಾಗೂ ಪ್ರಸಕ್ತ ಸಾಲಿನ ಬೆಲೆ ನಿಗದಿಗೆ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಭಾರಿ ಹೋರಾಟಕ್ಕಿಳಿದಿದ್ದಾರೆ. ಆದರೆ ವಿಜಯಪುರ ಜಿಲ್ಲೆಯ 9ರಲ್ಲಿ 8 ಸಕ್ಕರೆ ಕಾರ್ಖಾನೆಗಳಿಂದ 96.98 ಕೋಟಿ ರೂ. ಹಿಂಬಾಕಿ ಬರಬೇಕಿದ್ದರೂ ನಮ್ಮ ರೈತರು ಮಾತ್ರ ಸಹನೆಯಿಂದಲೇ ಕಾಯುತ್ತಿದ್ದಾರೆ.
ಮತ್ತೂಂದೆಡೆ ರಾಜ್ಯದ ಸಕ್ಕರೆ ಕಾರ್ಖಾನೆ ಮಾಲೀಕರ ಶೋಷಣೆಯಿಂದ ಮುಕ್ತರಾಗಲು ಪ್ರಸಕ್ತ ವರ್ಷ ನೆರೆ ರಾಜ್ಯಕ್ಕೆ ಕಬ್ಬು ಸಾಗಿಸಲು ಮುಂದಾಗಿದ್ದಾರೆ. ಕಳೆದ ವರ್ಷದ ಕಬ್ಬಿನ ಹಿಂಬಾಕಿ ಪಾವತಿಯೇ ಶತ ಕೋಟಿ ರೂ. ಹತ್ತಿರ ಇದೆ. ಈ ಹಂತದಲ್ಲೂ ಕಬ್ಬಿಗೆ ಇನ್ನೂ ಏಕ ರೂಪದ ಬೆಲೆ ನಿಗದಿ ಬೇಡಿಕೆ ಈಡೇರದ ಹಂತದಲ್ಲೇ ಕಳೆದ ಎರಡು ವಾರಗಳ ಹಿಂದೆ ಪ್ರಸಕ್ತ ವರ್ಷದ ಕಬ್ಬು ನುರಿಸುವ ಕಾರ್ಯ ಆರಂಭಗೊಂಡಿದೆ. ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ಶೋಷಣೆ ನಡೆಯುತ್ತಿರುವುದನ್ನು ವಿರೋಧಿಸಿ ಪ್ರಸಕ್ತ ವರ್ಷ ಜಿಲ್ಲೆಯ ಕಬ್ಬು ಬೆಳೆಗಾರರು ರಾಜ್ಯದ ಕಲಬುರಗಿ ಜಿಲ್ಲೆ ಮಾತ್ರವಲ್ಲ ಮಹಾರಾಷ್ಟ್ರದ ನಾಲ್ಕಾರು ಸಕ್ಕರೆಕಾರ್ಖಾನೆಗಳಿಗೆ ಕಬ್ಬು ಸಾಗಿಸತೊಡಗಿದ್ದಾರೆ.
ಭೀಕರ ಬರದ ಮಧ್ಯೆಯೂ ಕಳೆದ ವರ್ಷ 61,339 ಹೆಕ್ಟೇರ್ ಪ್ರದೇಶದಲ್ಲಿ ರೈತರು ಬೆಳೆಯುತ್ತಿದ್ದ ಕಬ್ಬಿನ ಪ್ರದೇಶ ಈ ಬಾರಿ ಮತ್ತೆ 4,370 ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚುವರಿ ಬೆಳೆ ನಾಟಿ ಆಗಿದೆ. ಇದು ವಿಜಯಪುರ ಜಿಲ್ಲೆಯಲ್ಲಿ ಏನೆಲ್ಲ ಸಂಕಷ್ಟಗಳ ಮಧ್ಯೆ ಕಬ್ಬು ಪ್ರದೇಶ ಹಾಗೂ ಸಕ್ಕರೆ ಕಾರ್ಖಾನೆಗಳ ಆರಂಭ ಮಾತ್ರ ಹೆಚ್ಚುತ್ತಲೇ ಇದೆ.
ಜಿಲ್ಲೆಯಲ್ಲಿ ಹಿಂಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು ಪಾವತಿ ಮಾಡುವಂತೆ ಹಲವು ಬಾರಿ ಮಾಡಿಕೊಂಡಿರುವ ಮನವಿಗೆ 9 ಕಾರ್ಖಾನೆಗಳಲ್ಲಿ ಒಂದು ಕಾರ್ಖಾನೆ ಮಾತ್ರ ಸ್ಪಂದಿಸಿದೆ. ಬಸವೇಶ್ವರ ಶುಗರ್ ಮಾಲೀಕರು ಕಳೆದ ಎರಡು ವಾರಗಳ ಹಿಂದೆ ಬಾಕಿ ಇದ್ದ ಎಲ್ಲ 5 ಕೋಟಿ ರೂ. ಹಿಂಬಾಕಿ ಪಾವತಿಸಿದ್ದಾರೆ. ಆದರೆ ಇತರೆ ಕಾರ್ಖಾನೆಗಳು ತಮ್ಮ ಬಳಿ ಯಾವುದೇ ಹಿಂಬಾಕಿ ಉಳಿಸಿಕೊಂಡಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಉತ್ತರ ನೀಡುವ ಮೂಲಕ ಕಬ್ಬು ಬೆಳೆಗಾರರ ಹೋರಾಟವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಶ್ರೀಮಂತ ದುದ್ದಗಿ ದೂರುತ್ತಾರೆ.
ಜಿಲ್ಲೆಯಲ್ಲಿ ಸಹಕಾರಿ ವ್ಯವಸ್ಥೆಯಲ್ಲಿರುವ ಎರಡು ಸಕ್ಕರೆ ಕಾರ್ಖಾನೆಗಳಲ್ಲಿ ನಂದಿ ಸಹಕಾರಿ ಸಕ್ಕರೆ ಕಾಖಾನೆ 33.72 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದರೆ, ಕಳೆದ ವರ್ಷವಷ್ಟೇ ಸಕ್ಕರೆ ಉತ್ಪಾದನೆ ಆರಂಭಿಸಿರುವ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ 5.72 ಕೋಟಿ ರೂ. ಬಾಕಿ ಹಣ ಪಾವತಿಸಿಲ್ಲ.
ಇತ್ತ ಖಾಸಗಿ ಒಡೆತನದಲ್ಲಿರುವ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಕಾಂಗ್ರೆಸ್ ನೂತನ ಶಾಸಕ ಆನಂದ ನ್ಯಾಮಗೌಡ ಮಾಲೀಕತ್ವದ ಜಮಖಂಡಿ ಶುಗರ್ನ 21.63 ಕೋಟಿ ರೂ., ತಮಿಳುನಾಡು ಉದ್ಯಮಿ ರಾಮಸ್ವಾಮಿ ನೇತೃತ್ವದ ಕೆಪಿಆರ್ ಮಾಲೀಕತ್ವದ ಶುಗರ್ನಿಂದ 12.68 ಕೋಟಿ ರೂ. ಬಾಲಾಜಿ ಸಕ್ಕರೆ ಕಾರ್ಖಾನೆ 9.95 ಕೋಟಿ ರೂ., ಬಿಜೆಪಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾಲೀಕತ್ವದ ಜ್ಞಾನಯೋಗಿ ಶಿವಕುಮಾರ ಶುಗರ್ 6.16 ಕೋಟಿ ರೂ., ಬಾಗಲಕೋಟೆ ಜಿಲ್ಲೆಯ ಬೀಳಗಿ ಕಾಂಗ್ರೆಸ್ ಮಾಜಿ ಶಾಸಕ ಜೆ.ಟಿ. ಪಾಟೀಲ ಹಾಗೂ ಸಹೋದರ ಎಸ್.ಟಿ. ಪಾಟೀಲ ಮಾಲೀಕತ್ವದ ಮನಾಲಿ ಕಾರ್ಖಾನೆ 5.12 ಕೋಟಿ ರೂ., ಮಹಾರಾಷ್ಟ್ರದ ಕಾಂಗ್ರೆಸ್ ಮಾಜಿ ಶಾಸಕ ಭಗವಂತ ಸಿಂಧೆ ಮಾಲೀಕತ್ವದ ಇಂಡಿಯನ್ ಶುಗರ್ನ 2 ಕೋಟಿ ರೂ., ಇನ್ನೊಂದು ಖಾಸಗಿ ಕಾರ್ಖಾನೆಯಾಗಿರುವ ಬಾಲಾಜಿ ಸಕ್ಕರೆ ಕಾರ್ಖಾನೆ 9.95 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಆದರೆ ರಾಜ್ಯದಾದ್ಯಂತ ಕಬ್ಬಿನ ಹಿಂಬಾಕಿ ಪಡೆಯುವುದಕ್ಕೆ ಕಬ್ಬು ಬೆಳೆಗಾರರು ಉಗ್ರ ಸ್ವರೂಪದಲ್ಲಿ ಹೋರಾಟದ ಹಾದಿ ತುಳಿದಿದ್ದಾರೆ. ಆದರೆ ವಿಜಯಪುರ ಜಿಲ್ಲೆಯ ಕಬ್ಬು ಬೆಳೆಗಾರ ಮಾತ್ರ ಸೌಜನ್ಯದಿಂದಲೇ ಜಿಲ್ಲಾಡಳಿತದ ಮೂಲಕ ಮನವಿ ಸಲ್ಲಿಸಿ ತನ್ನ ಸಭ್ಯತೆ ಮೆರೆಯುತ್ತಿದ್ದರೂ ಸರ್ಕಾರ ಮಾತ್ರ ಸ್ಪಂದಿಸಿಲ್ಲ ಎಂಬುದು ಗಮನೀಯವಾಗಿದೆ.
ಜಿ.ಎಸ್. ಕಮತರ