Advertisement

ಉಡುಪಿ ಜಿಲ್ಲೆ: 9,567 ಅರ್ಜಿಗಳಿಗೆ ‘ನೋ ಕನೆಕ್ಷನ್‌’

10:17 AM Jul 09, 2018 | Team Udayavani |

ಬೈಂದೂರು : ಕೇಂದ್ರದ ಉಜ್ವಲಾ ಯೋಜನೆಯ ಗೋಲ್‌ ಮಾಲ್‌ ಬೆನ್ನಲ್ಲೇ ಕರ್ನಾಟಕ ಸರಕಾರದ ‘ಅನಿಲ ಭಾಗ್ಯ’ ಯೋಜನೆಯೂ ಅರ್ಹ ಫಲಾನುಭವಿಗಳಿಗೆ ಗಗನ ಕುಸುಮವಾಗಿರುವುದು ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯಲ್ಲಿ 9,567 ಗ್ರಾಹಕರು ಇದರಡಿ ಅರ್ಜಿ ಸಲ್ಲಿಸಿದ್ದು, ಒಂದು ವರ್ಷದಿಂದ ಅನಿಲ ಸಂಪರ್ಕಕ್ಕಾಗಿ ಕಾಯುತ್ತಿದ್ದಾರೆ.

Advertisement

ಏನಿದು ಅನಿಲ ಭಾಗ್ಯ?
ಕೇಂದ್ರ ಸರಕಾರ 2016ರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅರ್ಹರಿಗೆ ಉಚಿತ ಅನಿಲ ಸಂಪರ್ಕ ನೀಡಲು ಉಜ್ವಲಾ ಯೋಜನೆ ಜಾರಿಗೆ ತಂದಿತ್ತು. ಇದಕ್ಕೆ ಪೂರಕವಾಗಿ 2017ರಲ್ಲಿ ರಾಜ್ಯ ಸರಕಾರವು ‘ಅನಿಲಭಾಗ್ಯ’ ಎನ್ನುವ ಯೋಜನೆಯನ್ನು ಉಜ್ವಲಾ ಯೋಜನೆಯ ಮಾನದಂಡದಲ್ಲೇ ಘೋಷಿಸಿದೆ. 2011ರ ಗಣತಿ ಆಧಾರದಲ್ಲಿ ಬಡತನ ರೇಖೆಗಿಂತ ಕೆಳಗಿರುವವರು ಈ ಯೋಜನೆಯ ಫಲಾನುಭವಿಗಳಾಗಬಹುದು. ಇದಕ್ಕಾಗಿ ಪಂಚಾಯತ್‌ ನಲ್ಲಿ ಅರ್ಜಿ ನೀಡಬೇಕು, ಬಳಿಕ ಅದನ್ನು ಆಹಾರ ನಿಗಮಕ್ಕೆ ಕಳುಹಿಸಲಾಗುತ್ತದೆ.

ಘೋಷಣೆಗೆ ಮಾತ್ರ ಸೀಮಿತವಾಗಿದೆ
ಆದರೆ ಅನಿಲಭಾಗ್ಯ ಯೋಜನೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ, ಉಡುಪಿ ಸಹಿತ ರಾಜ್ಯದಲ್ಲಿ ಎಲ್ಲೂ ಈ ಯೋಜನೆ ಸಮರ್ಪಕವಾಗಿ ಅಧಿಕೃತ ಜಾರಿಯಾಗಿಲ್ಲ ಎನ್ನುವುದು ಅಧಿಕಾರಿಗಳು ನೀಡುವ ಮಾಹಿತಿ. ಯೋಜನೆ ಅನುಷ್ಠಾನದ ಪ್ರಾಥಮಿಕ ಹಂತದ ಪ್ರಕ್ರಿಯೆಗಳು ನಡೆದಿದ್ದು, ಕೇವಲ ಗ್ಯಾಸ್‌ ಒಲೆಗಳು ಮಾತ್ರ ಜಿಲ್ಲಾಡಳಿತಕ್ಕೆ ತಲುಪಿವೆ. ಆದರೆ ರೆಗ್ಯೂಲೇಟರ್‌ ಹಾಗೂ ಮಂಜೂರಾತಿ ಆದೇಶಗಳು ಬಂದಿಲ್ಲ ಎನ್ನುವ ವಿವರವನ್ನು ಜಿಲ್ಲಾ ಆಹಾರ ಇಲಾಖೆಯ ಮೂಲಗಳು ನೀಡಿವೆ.

ಉಡುಪಿ ಜಿಲ್ಲೆಯಲ್ಲಿ ಒಟ್ಟು 30 ಸಾವಿರ ಸೀಮೆಎಣ್ಣೆ ರಹಿತ ಕುಟುಂಬಗಳಿದ್ದು, ಈ ಪಟ್ಟಿಯನ್ನು ಆಯಾಯ ಕ್ಷೇತ್ರವಾರು ವಿಂಗಡನೆ ಮಾಡಿ ಶಾಸಕರಿಗೆ ಕಳುಹಿಸಲಾಗಿದೆ. ಜಿಲ್ಲೆಯ ಐದು ಕ್ಷೇತ್ರದ ಶಾಸಕರು ತಮ್ಮ ವ್ಯಾಪ್ತಿಯಲ್ಲಿ ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ರವಾನಿಸಿದ್ದಾರೆ.

ಸರಕಾರ ಉಡುಪಿ ಜಿಲ್ಲೆಗೆ 11,069 ಗ್ಯಾಸ್‌ ಸಂಪರ್ಕದ ಗುರಿ ನೀಡಿತ್ತು. ಅದರಲ್ಲಿ 9,567 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಹಾರ ಇಲಾಖೆಯಿಂದ ಅನಿಲ ಸಂಪರ್ಕ ನೀಡಿಕೆ ಪ್ರಕ್ರಿಯೆ ಮುಂದುವರಿಯುವ ವೇಳೆ ಚುನಾವಣೆ ಘೋಷಣೆ ಯಾದುದರಿಂದ ಯೋಜನೆ ಸ್ಥಗಿತಗೊಂಡಿದೆ. ಪ್ರತಿದಿನ ಅರ್ಹ ಫಲಾನುಭವಿಗಳು ಅನಿಲ ವಿತರಕರನ್ನು ಸಂಪರ್ಕಿಸುತ್ತಿರುವುದು ಎಲ್ಲ ಕಡೆ ಕಂಡುಬರುತ್ತಿದೆ.

Advertisement

ಉಜ್ವಲಾ ಗೋಲ್‌ಮಾಲ್‌ ಪ್ರಕರಣ ಇಂದು ಜಿಲ್ಲಾಧಿಕಾರಿ ಸಭೆ
ಬೈಂದೂರು:
ಉಡುಪಿ ಜಿಲ್ಲೆಯಲ್ಲಿ ಉಜ್ವಲಾ ಗ್ಯಾಸ್‌ ವಿತರಣೆಯಲ್ಲಿ ನಡೆದ ಗೋಲ್‌ಮಾಲ್‌ ಕುರಿತಂತೆ ಉಡುಪಿ ಜಿಲ್ಲೆಯ ಗ್ಯಾಸ್‌ ವಿತರಕರ ಸಭೆ ಜು. 9ರಂದು ಬೆಳಿಗ್ಗೆ 10:30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿದೆ.

ಬೈಂದೂರು ತಾಲೂಕು ಹಾಗೂ ಬ್ರಹ್ಮಾವರದಲ್ಲಿ ಉಜ್ವಲಾ ಅಡುಗೆ ಅನಿಲ ಸಂಪರ್ಕದಲ್ಲಿ ಗೊಂದಲವಾಗಿರುವ ಕುರಿತು ‘ಉದಯವಾಣಿ’ ವರದಿ ಪ್ರಕಟಿಸಿದ್ದು, ಈ ವರದಿಯ ಬಳಿಕ ಜಿಲ್ಲೆಯ ಹಲವಾರು ಕಡೆ ಇಂತಹ ಹಲವು ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಈ ವಿಷಯಕ್ಕೆ ಕುರಿತಂತೆ ಕೇಂದ್ರ ಪೆಟ್ರೋಲಿಯಂ ಇಲಾಖೆ ಮತ್ತು ಪ್ರಧಾನಮಂತ್ರಿ ಕಚೇರಿಗೆ ದೂರು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಕೂಡ ಸಮಗ್ರ ವಿವರ ಕೇಳಿ ನೋಡಲ್‌ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದಾರೆ. ಜು.9ರಂದು ಸಭೆ ಕರೆದಿದ್ದು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next