ಪಾಟ್ನಾ: ಕೋವಿಡ್-19 ಸೋಂಕು ಭೀತಿಯಲ್ಲಿ ಕಡಿಮೆ ಜನ ಸೇರಿ ಮದುವೆ ಕಾರ್ಯಕ್ರಮಗಳು ನಡೆಯುತ್ತಿದೆ. ಆದರೆ ಹೀಗೆ ನಡೆದ ಮದುವೆ ಕಾರ್ಯಕ್ರಮದಲ್ಲಿ ಬಂದ ಬಹುತೇಕರಿಗೆ ಸೋಂಕು ತಗುಲಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ಗುರುಗ್ರಾಮದ ಸಾಫ್ಟ್ ವೇರ್ ಇಂಜಿನಿಯರ್ ಒಬ್ಬನ ವಿವಾಹ ಇತ್ತೀಚೆಗೆ ನಡೆದಿತ್ತು. ಆದರೆ ವಿವಾಹ ನಡೆದ ಬಳಿಕ ಈತ ಸಾವನ್ನಪ್ಪಿದ್ದಾನೆ. ನಂತರ ಅನುಮಾನಗೊಂಡು ಮದುವೆಯಲ್ಲಿ ಪಾಲ್ಗೊಂಡ ಇತರರ ಪರೀಕ್ಷೆ ನಡೆಸಲಾಗಿದ್ದು, 95 ಜನರಿಗೆ ಕೋವಿಡ್ ಸೋಂಕು ದೃಢವಾಗಿದೆ.
ಜೂನ್ 15ರಂದು ಈ ವಿವಾಹ ಸಮಾರಂಭ ನಡೆದಿತ್ತು. ಮೃತಪಟ್ಟ ವರನಿಗೆ ಸೋಂಕು ಲಕ್ಷಣಗಳಿದ್ದರೂ ಆತನ ಕೋವಿಡ್-19 ಪರೀಕ್ಷೆಗೆ ಒಳಪಡಿಸದೆ ಆತನ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಮೊದಲು ವರನ 15 ಮಂದಿ ಸಂಬಂಧಿಗಳ ಟೆಸ್ಟ್ ಮಾಡಲಾಗಿತ್ತು, ಅವರಿಗೆ ಸೋಂಕು ದೃಢವಾದ ಕಾರಣ ನಂತರ ಉಳಿದವರನ್ನು ಪತ್ತೆ ಹಚ್ಚಿದ ಜಿಲ್ಲಾಡಳಿತ ಗಂಟಲು ದ್ರವ ಪರೀಕ್ಷೆ ನಡೆಸಿತ್ತು. ಸೋಮವಾರ ಇವರಲ್ಲಿ 80 ಜನರಿಗೆ ಕೋವಿಡ್-19 ಸೋಂಕು ದೃಢವಾಗಿದೆ.
ಪೊಲೀಸ್ ಮೂಲಗಳ ಮಾಹಿತಿಯ ಪ್ರಕಾರ ಮದುವೆ ಗಂಡು ಮೇ 12ರಂದು ತನ್ನ ಸ್ವಗ್ರಾಮಕ್ಕೆ ಬಂದಿದ್ದ. ಆತನಿಗೆ ಸೋಂಕು ಲಕ್ಷಣಗಳಿದ್ದರೂ, ಯಾವುದೇ ಕೋವಿಡ್ ಪರೀಕ್ಷೆ ಮಾಡಿಸದೆ ಮದುವೆ ಮಾಡಲಾಗಿತ್ತು. ಮದುವೆ ಕಳೆದು ಎರಡು ದಿನಗಳ ನಂತರ ಈತ ಸಾವನ್ನಪ್ಪಿದ್ದಾನೆ. 95 ಜನರಿಗೆ ಸೋಂಕು ದೃಢಪಟ್ಟಿದ್ದರೆ, ವಧುವಿನ ವರದಿ ನೆಗೆಟಿವ್ ಬಂದಿದೆ