Advertisement

94 ಸಿಸಿ ಸೆಕ್ಷನ್‌ ಅಡಿ ಸಕ್ರಮ ಪ್ರಕ್ರಿಯೆ: ಸೆ. 10ರ ಗಡುವು

10:55 AM Aug 27, 2017 | |

ಮಂಗಳೂರು: ನಗರ ವ್ಯಾಪ್ತಿಯಲ್ಲಿ ಸರಕಾರಿ ಭೂಮಿ ಅತಿಕ್ರಮಿಸಿ ವಾಸ್ತವ್ಯ ಮಾಡುತ್ತಿರುವವರಿಗೆ ಕರ್ನಾಟಕ ಭೂ ಕಂದಾಯ ಕಾಯಿದೆಯ 94 ಸಿಸಿ ಸೆಕ್ಷನ್‌ ಅಡಿ ಸಕ್ರಮಗೊಳಿಸುವ ಪ್ರಕ್ರಿಯೆ ಸೆ. 10ರೊಳಗೆ ಮುಗಿಯಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌ ಸೂಚಿಸಿದ್ದಾರೆ.

Advertisement

ಈ ಸಂಬಂಧ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶನಿವಾರ ಮಾತನಾಡಿದ ಅವರು, 94 ಸಿಸಿಯಡಿ ಭೂಮಿ ಅಕ್ರಮ ಸಕ್ರಮೀಕರಣ ಪ್ರಕ್ರಿಯೆ ಈಗಾಗಲೇ ಶೇ. 50ರಷ್ಟು ಮುಗಿದಿದ್ದರೂ, ಮಂಗಳೂರು ತಾಲೂಕಿನ ವಿವಿಧೆಡೆ ನಿಧಾನಗೊಳ್ಳುತ್ತಿದೆ. ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಜನರ ಅರ್ಜಿ ವಿಲೇವಾರಿಯಾಗದೆ ಬಾಕಿಯಾಗಿದೆ. ಅಂತಹ ತೊಡಕುಗಳನ್ನು ನಿವಾರಿಸಿಕೊಂಡು ನಿಗದಿತ ದಿನಾಂಕದೊಳಗೆ ಸಕ್ರಮೀಕರಣ ನಡೆಯಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶ ನೀಡಿದರು.

ಕರಾವಳಿ ನಿಯಂತ್ರಣ ವಲಯ-ಸಿಆರ್‌ಝಡ್‌ನ‌ 3ನೇ ವಲಯದಲ್ಲಿ 1991ರ ಅನಂತರ ವಾಸ್ತವ್ಯ ಇರುವವರು ಅರ್ಜಿ ಹಾಕಿದ್ದರೆ ಕಂದಾಯ ಮತ್ತು ಸಿಆರ್‌ಝಡ್‌ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಾಧಕ-ಬಾಧಕಗಳನ್ನು ವಿಮರ್ಶಿಸಬೇಕು. ಆದರೆ 1991ಕ್ಕಿಂತ ಮೊದಲು ಮನೆ ಕಟ್ಟಿ ವಾಸಿಸುತ್ತಿರುವವರ ಅರ್ಜಿ ವಿಲೇವಾರಿಗೆ ಯಾವುದೇ ತೊಡಕುಗಳಿಲ್ಲ. ಅಂತಹವರು ವಾಸ್ತವ್ಯದ ಬಗ್ಗೆ ಗ್ರಾಮ ಪಂಚಾಯತ್‌ನಿಂದ ಪತ್ರ ಪಡೆದುಕೊಂಡು ಅರ್ಜಿ ಸಲ್ಲಿಸಿದಲ್ಲಿ ಅದಕ್ಕೆ ಸಿಆರ್‌ಝಡ್‌ ಅಧಿಕಾರಿಗಳು ನಿರಾಕರಣೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ| ಕೆ. ಜಿ. ಜಗದೀಶ್‌ ಸೂಚಿಸಿದರು.

ಸಿಆರ್‌ಝಡ್‌ ಹೊರತುಪಡಿಸಿ ಇತರ ಜಮೀನಿನಲ್ಲಿ 2012ರ ಮೊದಲು ಮನೆ ಕಟ್ಟಿ ವಾಸಿಸುತ್ತಿರುವವರ ಎಲ್ಲ ಅರ್ಜಿಗಳನ್ನೂ ಪರಿಗಣಿಸಬಹುದು. ಆದರೆ ಅದು ಅತಿಕ್ರಮಿಸಿಕೊಂಡ ಖಾಸಗಿ ಜಾಗವಾಗಿರಬಾರದು. ರೋಡ್‌ ಮಾರ್ಜಿನ್‌ನ ಭೂಮಿ ಅಥವಾ ಡೀಮ್ಡ್ ಅರಣ್ಯವಾಗಿರಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಉಳ್ಳಾಲ ಕಡಲ್ಕೊರೆತ ಉಂಟಾಗುತ್ತಿರುವ ಪ್ರದೇಶದಲ್ಲಿ ವಾಸಿಸುತ್ತಿರುವ ಜನರ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ಕ್ಷಿಪ್ರ ಕ್ರಮ ವಹಿಸಿ ಎಂದು ಸಚಿವ ಖಾದರ್‌ ನಿರ್ದೇಶಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯ ಕಂದಾಯ ನಿರೀಕ್ಷಕರು, ಈ ಪ್ರದೇಶದಲ್ಲಿ ಒಟ್ಟು 142 ಮಂದಿ ವಾಸ್ತವ್ಯದಲ್ಲಿದ್ದಾರೆ. ಅವರನ್ನು ಸೂಕ್ತ ಪ್ರದೇಶಕ್ಕೆ ಸ್ಥಳಾಂತರಿಸುವ ಸಲುವಾಗಿ ಮುನ್ನೂರು, ಪಾವೂರು ಮುಂತಾದೆಡೆಗಳಲ್ಲಿ ಜಾಗ ಹುಡುಕಲಾಗುತ್ತಿದೆ. ಸುಮಾರು 8 ಎಕರೆ ಜಾಗ ಅಷ್ಟು ಜನರಿಗೆ ಅಗತ್ಯವಾಗಿ ಬೇಕು ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next