Advertisement

91 ನಿಗಮ-ಮಂಡಳಿ ಅಧ್ಯಕ್ಷರಿಗೆ ಕೊಕ್‌

07:00 AM May 29, 2018 | |

ಬೆಂಗಳೂರು: ಹಿಂದಿನ ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಮಾಡಲಾಗಿದ್ದ ರಾಜ್ಯದ 91 ನಿಗಮ- ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರದ್ದುಗೊಳಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

Advertisement

ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಯವರ ಮೇ 26ರ ಟಿಪ್ಪಣಿಯನ್ನು ಉಲ್ಲೇಖೀಸಿ ಸಾರ್ವಜನಿಕ ಉದ್ದಿಮೆಗಳ ಇಲಾಖೆ ಆದೇಶ ಹೊರಡಿಸಿದೆ. ನಿಗಮ ಮಂಡಳಿಗಳ ಅಧ್ಯಕ್ಷರ ಅವಧಿ ಈ ಕೂಡಲೇ ಜಾರಿಗೆ ಬರುವಂತೆ ಕೊನೆಗೊಳ್ಳುತ್ತದೆ.

ಮುಂದಿನ ಆದೇಶದವರೆಗೆ ಈ ನಿಗಮ-ಮಂಡಳಿಗಳಿಗೆ ಸಂಬಂಧಪಟ್ಟ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ,
ಅಪರ ಮುಖ್ಯ ಕಾರ್ಯದರ್ಶಿಯವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರು ಸೂಚಿಸಿರುತ್ತಾರೆಂದು ಆದೇಶದಲ್ಲಿ ಹೇಳಲಾಗಿದೆ.

ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 2016ರ ನವೆಂಬರ್‌ನಲ್ಲಿ ಎರಡನೇ ಅವಧಿಗೆ ನಿಗಮ-ಮಂಡಳಿಗಳ ಅಧ್ಯಕ್ಷರ ನೇಮಕಾತಿ ನಡೆದಿತ್ತು. 91 ನಿಗಮ ಮಂಡಳಿಗಳಿಗೆ 21 ಶಾಸಕರು ಹಾಗೂ 70 ಮಂದಿ ಕಾರ್ಯಕರ್ತರನ್ನು
ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಸರ್ಕಾರ ಅಸ್ತಿತ್ವದಲ್ಲಿ ಇರುವವರೆಗೆ ಅಧ್ಯಕ್ಷರ ಅಧಿಕಾರಾವಧಿ ಇತ್ತು. ಈಗ ಹೊಸದಾಗಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರದಲ್ಲಿ ನೇಮಕೊಂಡಿದ್ದ 
ನಿಗಮ-ಮಂಡಳಿಗಳ ಅಧ್ಯಕ್ಷರ ಅಧಿಕಾರಾವಧಿಯನ್ನು ಕೊನೆಗೊಳಿಸಿ ಆದೇಶ ಹೊರಡಿಸಲಾಗಿದೆ. 
ಪ್ರಾಧಿಕಾರಗಳ ಅಧ್ಯಕ್ಷರಿಗೂ ಈ ಆದೇಶ ಅನ್ವಯವಾಗಲಿದೆ.

ಎರಡೂ ಪಕ್ಷಗಳ ಕಾರ್ಯಕರ್ತರಿಂದ ಒತ್ತಡ: ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದರಿಂದ ಇದೀಗ ಎರಡೂ ಪಕ್ಷಗಳ ಕಾರ್ಯಕರ್ತರು, ಮುಖಂಡರು ನಿಗಮ- ಮಂಡಳಿ
ಅಧ್ಯಕ್ಷಗಿರಿ ಮೇಲೆ ಕಣ್ಣಿಟ್ಟಿದ್ದಾರೆ. ಸಚಿವ ಸಂಪುಟ ವಿಸ್ತರಣೆ ನಂತರ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡವರನ್ನು ಸಮಾಧಾನ ಪಡಿಸಲು ಪ್ರಮುಖ ನಿಗಮ ಮಂಡಳಿ ಅಧ್ಯಕ್ಷಗಿರಿ ಹಾಗೂ ಸಂಪುಟ ದರ್ಜೆ ಸ್ಥಾನಮಾನ ನೀಡುವ ಬಗ್ಗೆ ಎರಡೂ ಪಕ್ಷಗಳಲ್ಲಿ ಚರ್ಚೆ ನಡೆದಿದೆ.

Advertisement

ಮೂಲಗಳ ಪ್ರಕಾರ, 5 ರಿಂದ 10 ನಿಗಮ ಮಂಡಳಿ ಹೊರತು ಪಡಿಸಿದರೆ ಉಳಿದವುಗಳಿಗೆ ಲೋಕಸಭೆ
ಚುನಾವಣೆ ಮುಗಿಯುವವರೆಗೂ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಅನುಮಾನ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next