ಕಾಪು: ಉಡುಪಿ ಜಿಲ್ಲೆಯ ಉತ್ಸಾಹಿ ಸಾಹಸಿ ಬೈಕ್ ರೈಡರ್ ಗಳಾದ ಸಚಿನ್ ಶೆಟ್ಟಿ ಕಾಪು, ಅರ್ಜುನ್ ಪೈ ಮಣಿಪಾಲ, ಸಾಯಿಕಿರಣ್, ಅರುಣ್ ಕುಲಾಲ್ ಅವರು ಫೆ. 26ರಂದು ಬೈಕ್ ಮೂಲಕ ದೆಹಲಿಯಿಂದ ಪ್ರಾರಂಭಿಸಿ ಬಿಹಾರ್, ಪಶ್ಚಿಮ ಬಂಗಾಳ, ಸಿಕ್ಕಿಂ, ಹಿಮಾಚಲ ಪ್ರದೇಶ, ಉತ್ತಾರಖಂಡ, ನೇಪಾಳ, ಹರ್ಯಾಣ, ಪಂಜಾಬ್ ಮೊದಲಾದ ಕಡೆಗಳಲ್ಲಿ ನಡೆಸಿದ ಸುಮಾರು 9,000ಕಿ.ಮೀ. ಉದ್ದದ ಬೈಕ್ ಸಂಚಾರ ಯಾತ್ರೆಯನ್ನು ಎ. 17ರಂದು ಕಾಪುವಿನಲ್ಲಿ ಸಮಾಪನಗೊಳಿಸಲಾಯಿತು.
ಬೈಕ್ ಯಾತ್ರೆಯ ಮೂಲಕ 51 ದಿನಗಳಲ್ಲಿ 9 ಸಾವಿರ ಕಿ. ಮೀ. ದೂರವನ್ನು ಕ್ರಮಿಸಿ ಕಾಪುವಿಗೆ ಆಗಮಿಸಿದ ಯುವಕರ ತಂಡವನ್ನು ಕಾಪುವಿನಲ್ಲಿ ಸಮಾಜ ಸೇವಕ ಲೀಲಾಧರ ಶೆಟ್ಟಿ ಅವರ ನೇತೃತ್ವದಲ್ಲಿ ಸ್ವಾಗತಿಸಿ, ಬರಮಾಡಿಕೊಳ್ಳಲಾಯಿತು. ಸಚಿನ್ ಶೆಟ್ಟಿ ನೇತೃತ್ವದ ನಾಲ್ಕು ಮಂದಿ ಯುವಕರ ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
ಜೆಡಿಎಸ್ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಉದ್ಯಮಿ ಶ್ರೀಕರ ಶೆಟ್ಟಿ ಕಲ್ಯ, ಪುರಸಭಾ ಸದಸ್ಯ ಉಮೇಶ್ ಕರ್ಕೇರ, ಕಾಪು ಜೇಸಿಐ ಅಧ್ಯಕ್ಷ ಸುಜಿತ್ ಶೆಟ್ಟಿ, ಗಣ್ಯರಾದ ದಿವಾಕರ ಶೆಟ್ಟಿ ಮಲ್ಲಾರು, ನಿರ್ಮಲ್ ಕುಮಾರ್ ಹೆಗ್ಡೆ, ನಾಗಭೂಷಣ್ ರಾವ್, ರಘುರಾಮ ಶೆಟ್ಟಿ, ರಮೇಶ್ ಶೆಟ್ಟಿ, ಭರತ್ ಕುಮಾರ್ ಶೆಟ್ಟಿ, ಜಯರಾಮ ಆಚಾರ್ಯ, ರಾಜೆಂದ್ರ ಬಿ.ಕೆ., ಸಚಿನ್ ಅವರ ತಾಯಿ ಜಯಶ್ರೀ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಆಸ್ತಿ ತೆರಿಗೆ ಆನ್‌ಲೈನ್; ಬಗೆಹರಿಯದ ತಾಂತ್ರಿಕ ಎಡವಟ್ಟುಗಳು!
ಚೀನಾ ಗಡಿಯಲ್ಲಿ ತುಳು ಧ್ವಜ ಹಾರಿಸಿದ್ದ ತಂಡ
ದೆಹಲಿಯಿಂದ ಪ್ರಾರಂಭಿಸಿದ್ದ ಬೈಕ್ ಪ್ರವಾಸದಲ್ಲಿ 1,900 ಕಿ.ಮೀ ದೂರ ಕ್ರಮಿಸಿ ಸಿಕ್ಕಿಂ, 12,270 ಅಡಿ ಎತ್ತರದ (ವಿಶ್ವದ ಅತೀ ಎತ್ತರದಲ್ಲಿರುವ ಪೋಸ್ಟ್ ಆಫೀಸ್) ಮತ್ತು 11,320 ಎತ್ತರದ ಇಂಡೋ ಚೈನಾ ಗಡಿಯ ಕೊನೆಯ ಗ್ರಾಮವಾದ ಚಿಕ್ಟುಲ್ ಗ್ರಾಮಕ್ಕೆ ಭೇಟಿ ನೀಡಿದ್ದರು. ಬೈಕ್ ಯಾತ್ರೆಯ ವೇಳೆ ಇಂಡೋ ಚೀನಾ ಗಡಿ ಪ್ರದೇಶದ 15,300 ಅಡಿ ಎತ್ತರದ ಝುಪಾಕ್‌ನಲ್ಲಿ ತುಳುನಾಡ ಧ್ವಜವನ್ನು ಹಾರಿಸಿ ತುಳು ಪ್ರೇಮ ಮೆರೆದಿದ್ದರು. ತಂಡದ ತುಳು ಭಾಷಾ ಪ್ರೇಮಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗಿತ್ತು.