ಬೆಂಗಳೂರು: 14ನೇ ಹಣಕಾಸು ಆಯೋಗದ ಶಿಫಾರಸಿನಂತೆ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಕ್ಕೆ 2019-2020ನೇ ಆರ್ಥಿಕ ವರ್ಷದಲ್ಲಿ ಬರಬೇಕಿದ್ದ ಅನುದಾನದಲ್ಲಿ 9000 ಕೋಟಿ ರೂ. ಕಡಿತವಾಗುವ ಸಾಧ್ಯತೆ ಹೆಚ್ಚಾಗಿದ್ದು, ರಾಜ್ಯ ನಿರೀಕ್ಷಿಸಿದ್ದ ಪಾಲಿನಲ್ಲಿ ದೊಡ್ಡ ಮೊತ್ತದ ಖೋತಾ ಉಂಟಾಗಲಿದೆ. ಶನಿವಾರ ಕೇಂದ್ರ ಬಜೆಟ್ ಮಂಡನೆ ವೇಳೆ 15ನೇ ಹಣಕಾಸು ಆಯೋಗದ ಶಿಫಾರಸುಗಳು ಮಂಡನೆಯಾಗಿದೆ.
ಇದೇ ವೇಳೆ 14ನೇ ಹಣಕಾಸು ಆಯೋಗದ ಶಿಫಾರಸಿನಡಿ ಕೊನೆಯ ವರ್ಷ ಅಂದರೆ 2019- 2020ನೇ ಸಾಲಿನಲ್ಲಿ ರಾಜ್ಯಕ್ಕೆ ನೀಡಬೇಕಾದ ಪಾಲಿನ ಮೊತ್ತವನ್ನೂ ಪರಿಷ್ಕರಿಸಲಾಗಿದ್ದು, ಅದರಂತೆ ದೊಡ್ಡ ಮೊತ್ತದ ಅನುದಾನ ಕಡಿತವಾಗುವ ಸಂಭವ ನಿಚ್ಚಳವಾಗಿದೆ.14ನೇ ಹಣಕಾಸು ಆಯೋಗದ ಶಿಫಾರಸಿನಡಿ ಕೇಂದ್ರೀಯ ತೆರಿಗೆಯಲ್ಲಿ 2015-16ನೇ ಸಾಲಿನಿಂದ 2018-19ನೇ ಸಾಲಿನವರೆಗೆ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ಮಂಜೂರಾಗಿದ್ದ ಪಾಲಿನ ಮೊತ್ತದಲ್ಲಿ ಸುಮಾರು 26,000 ಕೋಟಿ ರೂ.ನಷ್ಟು ಕಡಿತವಾಗಿದೆ.
ಇದೀಗ 2019-20ನೇ ಆರ್ಥಿಕ ವರ್ಷದಲ್ಲೂ ಸುಮಾರು 9000 ಕೋಟಿ ರೂ. ಖೋತಾ ಆಗುವ ಸಂಭವವಿದೆ. ಒಟ್ಟಾರೆ ಐದು ವರ್ಷಗಳಲ್ಲಿ ಕೇಂದ್ರೀಯ ತೆರಿಗೆಯಲ್ಲಿ ರಾಜ್ಯಕ್ಕೆ ಬರಬೇಕಿದ್ದ ಪಾಲಿನಲ್ಲಿ ಬರೋ ಬ್ಬರಿ 35,000 ಕೋಟಿ ರೂ. ಕಡಿತವಾಗುವ ಸಾಧ್ಯತೆ ದಟ್ಟವಾಗಿದೆ. ಇದು ಸಹಜವಾಗಿಯೇ ರಾಜ್ಯದ ಆರ್ಥಿಕತೆಯ ಮೇಲೆಯೂ ಪರಿಣಾಮ ಬೀರಲಿದೆ.
ಆರ್ಥಿಕತೆ ಮೇಲೆ ಪರಿಣಾಮ?: 14ನೇ ಹಣಕಾಸು ಆಯೋಗದ ಶಿಫಾರಸಿನಡಿ ಕೇಂದ್ರೀಯ ತೆರಿಗೆಗಳಲ್ಲಿ ರಾಜ್ಯಕ್ಕೆ ನೀಡುವ ಪಾಲಿನ ಮೊತ್ತ ಪ್ರಸಕ್ತ ಹಣಕಾಸು ವರ್ಷದಲ್ಲಿ ಕಡಿಮೆಯಾಗುವ ಮುನ್ಸೂಚನೆ ಮೊದಲೇ ಇತ್ತು. ಗರಿಷ್ಠ 11,000 ಕೋಟಿ ರೂ. ಕಡಿತವಾಗುವ ಅಂದಾಜು ಇದ್ದು, ಕನಿಷ್ಠ 9000 ಕೋಟಿ ರೂ. ಖೋತಾ ಆಗುವುದು ಬಹುತೇಕ ನಿಚ್ಚಳವಾದಂತಿದೆ. ಇದರಿಂದ ಸಹಜವಾಗಿಯೇ ರಾಜ್ಯದ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ ಎಂದು ರಾಜ್ಯ ಆರ್ಥಿಕ ಇಲಾಖೆ ಮೂಲಗಳು ಹೇಳಿವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ತೆರಿಗೆ ಮೂಲದಿಂದ ಸಂಗ್ರಹಿಸಲು ಉದ್ದೇಶಿಸಿದ್ದ ಆದಾಯ ದಲ್ಲಿ 2.75 ಲಕ್ಷ ಕೋಟಿ ರೂ. ಖೋತಾ ಆಗುವ ಸಾಧ್ಯತೆಯಿಂದಾಗಿ ರಾಜ್ಯಗಳಿಗೆ ನೀಡುವ ಪಾಲಿನ ಮೊತ್ತವನ್ನು ಕಡಿತ ಮಾಡಲಾಗುತ್ತಿದೆ. ಇದ ರಿಂದ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಮಾಡುವ ವೆಚ್ಚದಲ್ಲೂ ವ್ಯತ್ಯಯವಾಗಲಿದೆ ಎಂದು ತಿಳಿಸಿವೆ.
ಮೊದಲೇ ವರದಿ ಪ್ರಕಟಿಸಿತ್ತು!: 14ನೇ ಹಣಕಾಸು ಆಯೋಗದ ಶಿಫಾರಸಿನಡಿ ಕೇಂದ್ರೀಯ ತೆರಿಗೆಯಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯಕ್ಕೆ ನೀಡುವ ಪಾಲಿನಲ್ಲಿ 5,000 ಕೋಟಿ ರೂ.ನಿಂದ 10,000 ಕೋಟಿ ರೂ.ವರೆಗೆ ನಷ್ಟ ಉಂಟಾಗುವ ಸಾಧ್ಯತೆ ಬಗ್ಗೆ
“ಉದಯವಾಣಿ’ ಮೊದಲೇ ವರದಿ ಪ್ರಕಟಿಸಿತ್ತು. ಕೇಂದ್ರೀಯ ತೆರಿಗೆ ಸಂಗ್ರಹದಲ್ಲಿನ ವ್ಯತ್ಯಯದಿಂದಾಗಿ ದೊಡ್ಡ ಮೊತ್ತದ ಹಣ ಖೋತಾ ಉಂಟಾಗುವ ಬಗ್ಗೆ ಉಲ್ಲೇಖೀಸಿದ್ದನ್ನು ಸ್ಮರಿಸಬಹುದು.