Advertisement

ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಶೇ.90 ಸಿಬ್ಬಂದಿಗೆ ಲಸಿಕೆ

04:56 PM Jun 18, 2021 | Team Udayavani |

ವರದಿ: ಹೇಮರಡ್ಡಿ ಸೈದಾಪುರ

Advertisement

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯ ಶೇ.90 ಸಿಬ್ಬಂದಿ ಕೋವಿಡ್‌ ಲಸಿಕೆ ಪಡೆದಿದ್ದು, ಕರ್ತವ್ಯಕ್ಕೆ ಸಿದ್ಧರಾಗಿದ್ದಾರೆ. ಲಸಿಕೆ ಪಡೆದವರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ. ಜೂ.21ರಿಂದ ಬಸ್‌ ಸಂಚಾರಕ್ಕೆ ಸರ್ಕಾರ ಅನುಮತಿ ನೀಡಬಹುದೆಂಬ ನಿರೀಕ್ಷೆ ಇದ್ದು, ಇದಕ್ಕೆ ಪೂರಕವಾಗಿ ಬಸ್‌ಗಳ ಸಂಚಾರಕ್ಕೆ ವಾಯವ್ಯ ಸಾರಿಗೆ ಸಂಸ್ಥೆ ಸಜ್ಜಾಗಿದೆ.

ಶೇ.90ಕ್ಕೂ ಹೆಚ್ಚು ಬಸ್‌ ಗಳನ್ನು ಸುಸ್ಥಿತಿಯಲ್ಲಿಡಲಾಗಿದೆ. ಚಾಲನಾ ಸಿಬ್ಬಂದಿ ಸದಾ ಜನರೊಂದಿಗೆ ಬೆರೆಯುವುದರಿಂದ ಅವರ ಆರೋಗ್ಯ ದೃಷ್ಟಿಯಿಂದ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಶೇ.90 ಲಸಿಕೆ: ರಾಜ್ಯ ಸರ್ಕಾರ ಸಾರಿಗೆ ನೌಕರರನ್ನು ಕೋವಿಡ್‌ ಫ್ರಂಟ್‌ಲೈನ್‌ ವಾರಿಯರ್‌ ಎಂದು ಪರಿಗಣಿಸಿದ ಪರಿಣಾಮ ಸಂಸ್ಥೆ ಕಚೇರಿಯಲ್ಲಿ ಲಸಿಕೆ ಅಭಿಯಾನ, ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಕಡಿಮೆ ಅವ ಧಿಯಲ್ಲಿ ಹೆಚ್ಚು ಸಿಬ್ಬಂದಿ ಲಸಿಕೆ ಪಡೆಯಲು ಸಹಕಾರಿಯಾಗಿದೆ.

ಸಂಸ್ಥೆಯಲ್ಲಿರುವ ಒಟ್ಟು 21,405 ಸಿಬ್ಬಂದಿ ಪೈಕಿ 18-44 ವಯಸ್ಸಿನ 12,484 ಸಿಬ್ಬಂದಿಯಲ್ಲಿ 11,063 (ಶೇ.88) ಸಿಬ್ಬಂದಿ ಮೊದಲ ಡೋಸ್‌ ಹಾಗೂ 478 (ಶೇ.4) ಸಿಬ್ಬಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಇನ್ನೂ 45 ವಯಸ್ಸು ಮೀರಿದ 8919 ಸಿಬ್ಬಂದಿ ಪೈಕಿ 8041 (ಶೇ.90) ಸಿಬ್ಬಂದಿ ಮೊದಲ ಡೋಸ್‌ ಹಾಗೂ 921 (ಶೇ.10) ಸಿಬ್ಬಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ. ಸದ್ಯಕ್ಕೆ ಒಟ್ಟಾರೆ 19,021 ಸಿಬ್ಬಂದಿ ಮೊದಲ ಡೋಸ್‌ ಪಡೆದಿದ್ದು, 2384 ಸಿಬ್ಬಂದಿ ಲಸಿಕೆ ಪಡೆಯಬೇಕಾಗಿದೆ. ಹೀಗಾಗಿ ಮೊದಲ ಹಾಗೂ ಎರಡನೇ ಡೋಸ್‌ ಸೇರಿದಂತೆ ಒಟ್ಟು 22,390 ಡೋಸ್‌ಗಾಗಿ ಬೇಡಿಕೆ ಸಲ್ಲಿಸಲಾಗಿದೆ.

ಪ್ರಮಾಣ ಪತ್ರ ಕಡ್ಡಾಯ: ಕರ್ತವ್ಯ ನಿಯೋಜನೆಗೆ ಸಿಬ್ಬಂದಿಗೆ ಕೋವಿಡ್‌ ಲಸಿಕೆ ಪ್ರಮಾಣಪತ್ರ ಕಡ್ಡಾಯಗೊಳಿಸಲಾಗಿದೆ. ಕೆಲ ಸಿಬ್ಬಂದಿ ಲಸಿಕೆ ಪಡೆದರೂ ದೂರದ ಊರುಗಳಲ್ಲಿರುವ ಕಾರಣ ತಮ್ಮ ಘಟಕಗಳಿಗೆ ಮಾಹಿತಿ ನೀಡಿಲ್ಲ. ಆದರೆ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ ತಮ್ಮ ಘಟಕಗಳಿಗೆ ಲಸಿಕೆ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ.

Advertisement

ಸದ್ಯದಲ್ಲಿ ಮಾಡಿಸಿದ ಕೋವಿಡ್‌ ಪರೀûಾ ವರದಿಯನ್ನು ಕೂಡ ತರಬೇಕು. ಕರ್ತವ್ಯನಿತರ ಸಿಬ್ಬಂದಿ ತಮ್ಮೊಂದಿಗೆ ಒಂದು ಲಸಿಕೆ ಪ್ರಮಾಣ ಪತ್ರ ಇಟ್ಟುಕೊಂಡಿರಬೇಕು ಎಂದು ಸೂಚಿಸಲಾಗಿದೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಎರಡು ಲಸಿಕೆ ಪೂರ್ಣಗೊಳಿಸಿದವರನ್ನು ಮಾತ್ರ ಕರ್ತವ್ಯಕ್ಕೆ ನಿಯೋಜಿಸುವ ಕುರಿತು ತಿಳಿಸಿದ್ದರು. ಆದರೆ ವಾಸ್ತವದಲ್ಲಿ ಎರಡನೇ ಡೋಸ್‌ಗಾಗಿ 85 ದಿನ ಕಾಯಬೇಕಾಗಿರುವುದರಿಂದ ಇದು ಅಸಾಧ್ಯವಾಗಿದೆ. 21,405 ಸಿಬ್ಬಂದಿ ಪೈಕಿ ಎರಡು ಡೋಸ್‌ ಲಸಿಕೆ ಪಡೆದವರು ಕೇವಲ 1,399 ಸಿಬ್ಬಂದಿ ಮಾತ್ರ. ಇಷ್ಟೊಂದು ಸಿಬ್ಬಂದಿಯಲ್ಲಿ ಬೇಡಿಕೆಗೆ ತಕ್ಕಂತೆ ಬಸ್‌ ಗಳನ್ನು ಕಾರ್ಯಾಚರಣೆಗೊಳಿಸಲು ಸಾಧ್ಯವಿಲ್ಲ. ವಾಸ್ತವದಲ್ಲಿ ಇದು ಅಸಾಧ್ಯವಾಗಿರುವುದರಿಂದ ಕನಿಷ್ಟ ಒಂದು ಡೋಸ್‌ ಲಸಿಕೆ ಪಡೆದವರನ್ನು ಪರಿಗಣಿಸಲು ನಿರ್ಧರಿಸಿದ್ದಾರೆ.

55 ಮೇಲ್ಪಟ್ಟವರಿಗೆ ರಜೆ: ಆರಂಭದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬಸ್‌ಗಳ ಓಡಾಟಕ್ಕೆ ಅನುಮತಿ ನೀಡಬಹುದು. ಹೀಗಾಗಿ ಹೆಚ್ಚಿನ ಸಿಬ್ಬಂದಿಯ ಬೇಡಿಕೆ ಇರುವುದಿಲ್ಲ. ನಷ್ಟದ ಹೊರೆ ತಗ್ಗಿಸಲು ಆರಂಭದಲ್ಲಿ ಪ್ರಯಾಣಿಕರ ಬೇಡಿಕೆ ಆಧಾರದ ಮೇಲೆ ಮಾತ್ರ ಬಸ್‌ಗಳನ್ನು ಓಡಿಸಲಾಗುತ್ತದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಿಬ್ಬಂದಿ ಅವಶ್ಯಕತೆ ಇರುವುದಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಹಿರಿಯ ಸಿಬ್ಬಂದಿ ಆರೋಗ್ಯ ದೃಷ್ಟಿಯಿಂದ ಅವರಿಗೆ ರಜೆ ಪಡೆಯುವ ಆಯ್ಕೆ ನೀಡಲಾಗಿದೆ. 55 ವರ್ಷ ಮೇಲ್ಪಟ್ಟ ಸಿಬ್ಬಂದಿ ರಜೆ ಬಯಸಿದರೆ ಅವರಿಗೆ ರಜೆ ಮಂಜೂರು ಮಾಡಬೇಕು ಎಂದು ಎಲ್ಲಾ ಘಟಕ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next