Advertisement

ಡಿಸಿ ಒಪ್ಪಿಗೆ ಕಾಯುತ್ತಿವೆ 9 ರೈಲ್ವೇ ಮೇಲ್ಸೇತುವೆ 

10:41 AM Nov 15, 2018 | Team Udayavani |

ಪುತ್ತೂರು : ರೈಲ್ವೇ ಗೇಟ್‌ಗಳಲ್ಲಿ ನಡೆಯುವ ಅಪಘಾತ ತಪ್ಪಿಸುವ ಉದ್ದೇಶದಿಂದ ಮೇಲ್ಸೇತುವೆ ನಿರ್ಮಿಸಲು ಮುಂದಾಗಿರುವ ಇಲಾಖೆಗೆ ಇದೀಗ ಜಿಲ್ಲಾಡಳಿತದ ಅನುಮೋದನೆಯೇ ತೊಡಕಾಗಿ ಪರಿಣಮಿಸಿದೆ.  ರೈಲ್ವೇ ಗೇಟ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ಸರಕಾರ ಯೋಜನೆ ಹಮ್ಮಿಕೊಂಡಿರುವುದು ಹೊಸ ವಿಷಯವೇನಲ್ಲ. ಇದನ್ನು ಜಾರಿಗೆ ತರುವಲ್ಲಿ ರೈಲ್ವೇ ಇಲಾಖೆಯೂ ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ಹಾಗೂ ಕಡಬದಲ್ಲಿ 9 ರೈಲ್ವೇ ಗೇಟ್‌ಗಳಿವೆ ಎನ್ನುವುದರ ಮಾಹಿತಿಯನ್ನು ಮೇಲಧಿಕಾರಿಗಳಿಗೆ ರವಾನಿಸ ಲಾಗಿತ್ತು. ಒಂದು ಗೇಟ್‌ಗೆ ಸುಮಾರು 3.5 ಕೋಟಿ ರೂ.ನಂತೆ 9 ಗೇಟ್‌ಗಳಿಗೆ ಅಂದಾಜು 30 ಕೋಟಿ ರೂ. ಅಗತ್ಯ ಇರುವುದರ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕೇಂದ್ರ ಸರಕಾರ ತನ್ನ ಮಾರ್ಗಸೂಚಿಯಂತೆ ಲೆಕ್ಕಾಚಾರ ಮಾಡಿ, ಇದಕ್ಕೆ ಅಗತ್ಯವಾದ ಅನುದಾನವನ್ನು ಮಂಜೂರು ಮಾಡಿಯೂ ಆಗಿದೆ. ಜಿಲ್ಲಾಡಳಿತ ಅನುಮೋದನೆ ನೀಡಿದರೆ ಮುಂದಿನ ಕೆಲಸ ತಕ್ಷಣವೇ ಆರಂಭ ಆಗಲಿದೆ.

Advertisement

ರೈಲ್ವೇ ಗೇಟ್‌ಗಳ ಬಳಿ ನಡೆಯುತ್ತಿರುವ ಅಪಘಾತಗಳನ್ನು ಕಡಿಮೆ ಮಾಡುವುದು ಕೇಂದ್ರ ಸರಕಾರದ ಯೋಜನೆ. ಆದರೆ ಈ ಯೋಜನೆ ಕಾರ್ಯಗತಗೊಂಡರೆ, ಇಲಾಖೆಯ ಸಿಬಂದಿ ಸಂಖ್ಯೆಯೂ ಕಡಿಮೆ ಆಗಲಿದೆ. 9 ಗೇಟ್‌ಗಳ ಬಳಿ 9 ಸಿಬಂದಿ ಇದ್ದು, ಇವರನ್ನು ಬೇರೆ ವಿಭಾಗಕ್ಕೆ ಇಲಾಖೆ ವರ್ಗಾಯಿಸಲು ಸಾಧ್ಯವಿದೆ. 

ಸಾಮಾನ್ಯವಾಗಿ ಬೆಳಗ್ಗೆ ಹಾಗೂ ಸಂಜೆ ವೇಳೆಗೆ ರೈಲ್ವೇ ಗೇಟ್‌ ಬಳಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. ಗೂಡ್ಸ್‌ ರೈಲುಗಳು ಬರುವ ಹೊತ್ತಲ್ಲಿ ತುಂಬ ಹೊತ್ತು ಕಾಯಬೇಕಾದ ಪ್ರಮೇಯ. ಕೆಲವರು ಗಡಿಬಿಡಿಯಲ್ಲಿ ರೈಲ್ವೇ ಗೇಟ್‌ಗಳನ್ನು ದಾಟಲು ಹೋಗಿ ಅಪಘಾತ ಮಾಡಿಕೊಂಡದ್ದುಂಟು. ರೈಲ್ವೇ ಮೇಲ್ಸೇತುವೆ ನಿರ್ಮಾಣವಾದ ಬಳಿಕ, ಯಾವ ವಾಹನಗಳೂ ರೈಲು ತೆರಳುವುದನ್ನು ಕಾಯಬೇಕಾದ ಪ್ರಸಂಗವಿಲ್ಲ. ಅದಕ್ಕಿಂತ ಹೆಚ್ಚಾಗಿ, ಅಪಘಾತ ನಡೆಯಲು ಅವಕಾಶವೇ ಇಲ್ಲದಂತಾಗುತ್ತದೆ.

ಜಿಲ್ಲಾಡಳಿತದ ಅನುಮತಿ ಏಕೆ?
ವಾಸ್ತವದಲ್ಲಿ ರೈಲ್ವೇ ಇಲಾಖೆಯ ಕಾಮಗಾರಿಗಳಿಗೆ ಜಿಲ್ಲಾಡಳಿತದ ಅನುಮತಿ ಅಗತ್ಯವೇ ಇಲ್ಲ. ಆದರೆ ರೈಲ್ವೇ ಗೇಟ್‌ಗಳ ಬಳಿ ಸಾರ್ವಜನಿಕ ರಸ್ತೆ ಇರುವುದರಿಂದ ಜಿಲ್ಲಾಡಳಿತದ ಅನುಮತಿ ಅಗತ್ಯವಿದೆ. ಇರುವ ರಸ್ತೆಯನ್ನು ಮುಚ್ಚಿ, ಹೊಸ ರಸ್ತೆಯಲ್ಲಿ ಸಂಚಾರ ಕಲ್ಪಿಸುವಾಗ ಸ್ಥಳೀಯಾಡಳಿತದ ಅನುಮೋದನೆ ಪಡೆದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತಕ್ಕೆ ರೈಲ್ವೇ ಇಲಾಖೆ ಮನವಿ ಮಾಡಿಕೊಂಡಿದೆ. ಜಿಲ್ಲಾಧಿಕಾರಿ, ಸಂಬಂಧಪಟ್ಟ ಪಿಡಿಒಗಳಿಗೆ ಸೂಚಿಸಿ, ಅನುಮೋದನೆ ಸಿದ್ಧಪಡಿಸುತ್ತಾರೆ. ಈ ಕಾರ್ಯದಲ್ಲಿ ವಿಳಂಬ ಆಗುತ್ತಿರುವುದರಿಂದ, ರೈಲ್ವೇ ಮೇಲ್ಸೇತುವೆಗಳ ಕಾಮಗಾರಿಗೆ ಅಡ್ಡಿಯಾಗಿದೆ.

ಯಾವೆಲ್ಲ ಗೇಟ್‌?
ಕಡಬದ ಬಜಕೆರೆ, ಐತ್ತೂರು ಗ್ರಾಮದ ಮೋಜೋಲ, ಕೋಡಿಂಬಾಳದ ಕೊರಿಯಾರ್‌, ಸವಣೂರು, ಪುತ್ತೂರಿನ ವೀರಮಂಗಲ, ಮುಂಡೂರು, ಮುಕ್ವೆ, ಕರಿಯಾಲ, ಸಾಮೆತ್ತಡ್ಕ ರೈಲ್ವೇ ಗೇಟ್‌ ಗಳಿಗೆ ಮೇಲ್ಸೇತುವೆ ನಿರ್ಮಿಸಬೇಕೆಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇವೆಲ್ಲ ಅನುಮೋದನೆಗೊಂಡು ಕಾಮಗಾರಿಗೆ ಎದುರು ನೋಡುತ್ತಿವೆ. 

Advertisement

ಪತ್ರ ಬರೆಯಲಾಗಿದೆ
ಸಾರ್ವಜನಿಕ ರಸ್ತೆ ಇರುವುದರಿಂದ ಜಿಲ್ಲಾಧಿಕಾರಿಯ ಅನುಮತಿ ಅಗತ್ಯ. ಈ ಹಿನ್ನೆಲೆಯಲ್ಲಿ ಮೇಲ್ಸೆತುವೆ ನಿರ್ಮಾಣ ಆಗಬೇಕಾದ ಪ್ರದೇಶಗಳಲ್ಲಿ ಅನುಮತಿ ನೀಡುವಂತೆ ದ.ಕ. ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.
– ರೈಲ್ವೇ ಅಧಿಕಾರಿ,ಮಂಗಳೂರು

ಮುರ ಮೇಲ್ಸೇತುವೆ ಪೂರ್ಣ
ಮುರದಲ್ಲಿ ರೈಲ್ವೇ ಮೇಲ್ಸೇತುವೆ ಸಿದ್ಧವಾಗಿದ್ದು, ಸಂಚಾರಕ್ಕೆ ತೆರೆದುಕೊಂಡಿದೆ. 2.5 ಕೋಟಿ ರೂ.ಗೂ ಅಧಿಕ ಮೊತ್ತದಲ್ಲಿ ಈ ಯೋಜನೆಯನ್ನು ರೈಲ್ವೇ ಇಲಾಖೆ ಪೂರ್ಣಗೊಳಿಸಿದೆ. ಇದೇ ಮಾದರಿಯನ್ನು ಇತರ 9 ಮೇಲ್ಸೇತುವೆಗಳಿಗೆ ಅನ್ವಯಿಸಲು ಚಿಂತನೆ ನಡೆದಿದೆ. ಮುರ ರೈಲ್ವೇ ಮೇಲ್ಸೇತುವೆಗಿಂತ ಒಂದಷ್ಟು ಅನುದಾನ ಹೆಚ್ಚು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next