ಹೈದರಾಬಾದ್: ಕಳೆದ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಕಾಂಪೌಂಡ್ ಗೋಡೆಯೊಂದು ಕುಸಿದು ಹತ್ತು ಮನೆಗಳ ಮೇಲೆ ಬಿದ್ದ ಪರಿಣಾಮ ಎರಡು ತಿಂಗಳ ಮಗು ಸೇರಿದಂತೆ ಒಂಬತ್ತು ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಶವಗಳು ಅವಶೇಷಗಳಲ್ಲಿಯೇ ಸಿಲುಕಿಕೊಂಡಿವೆ ಎಂದು ವರದಿಯಾಗಿದೆ.
ತೆಲಂಗಾಣ ಮತ್ತು ನೆರೆಯ ಆಂಧ್ರಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ ತೆಲಂಗಾಣದಲ್ಲಿ ಹನ್ನೆರಡು ಜನರು ಸಾವನ್ನಪ್ಪಿದ್ದಾರೆ. ರಾಜ್ಯದ ಹಲವಾರು ಭಾಗಗಳಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳಲ್ಲಿ ಪ್ರವಾಹ ಉಂಟಾಗಿದೆ ಮತ್ತು ಕೆಲವು ತಗ್ಗು ಪ್ರದೇಶಗಳು ಮುಳುಗಿವೆ.
ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಸುಮಾರು 10 ಮನೆಗಳ ಮೇಲೆ ಕಾಂಪೌಂಡ್ ಗೋಡೆ ಬಿದ್ದಿದೆ. ದುರ್ಘಟನೆಯಿಂದ ಎರಡು ಮನೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಒಂದೇ ಕುಟುಂಬದ ಐವರು ಸೇರಿದಂತೆ ಒಂಬತ್ತು ಜನರು ಸ್ಥಳದಲ್ಲೇ ಮೃತಪಟ್ಟರು. ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದು, ಓವೈಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಹಾಯಕ ಪೊಲೀಸ್ ಆಯುಕ್ತ ಎಂ ಎ ಮಜೀದ್ ತಿಳಿಸಿದ್ದಾರೆ.
ಇದನ್ನೂ ಓದಿ: 14 ತಿಂಗಳ ಬಳಿಕ ಗೃಹ ಬಂಧನದಿಂದ ಮೆಹಬೂಬಾ ಮುಫ್ತಿಗೆ ಮುಕ್ತಿ !
ಈ ಕುರಿತು ಟ್ವೀಟ್ ಮಾಡಿದ ಸಂಸದ ಅಸಾದುದ್ದೀನ್ ಒವೈಸಿ, ನಾನು ಬಂಡಲಗುಡದ ಮೊಹಮ್ಮದಿಯಾ ಹಿಲ್ ನಲ್ಲಿ ಸ್ಥಳ ಪರಿಶೀಲನೆಯಲ್ಲಿದ್ದೆ. ಪಕ್ಕದ ಜಮೀನಿನ ಗೋಡೆ ಕುಸಿದು ಬಿದ್ದು 9 ಜನರು ಸಾವನ್ನಪ್ಪಿದರು ಮತ್ತು 2 ಮಂದಿ ಗಾಯಗೊಂಡರು ಎಂದಿದ್ದಾರೆ.
ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರು ಮುನ್ನೆಚ್ಚರಿಕೆ ವಹಿಸುವಂತೆ ಹೈದರಾಬಾದ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.