Advertisement

9 ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್‌ ಬಲವರ್ಧನೆ

06:35 PM Mar 25, 2021 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಲು ಪಕ್ಷದ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಗ್ರಾಮೀಣದಲ್ಲಿ ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸವಾಗುತ್ತಿದೆ. ಜಿಲ್ಲೆಯ ಒಂಭತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ವೀಕ್ಷಕ ತಿಮ್ಮಯ್ಯ ಪುರ್ಲೆ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂಬರುವ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಮತ್ತು ವಿಧಾನಸಭಾ ಚುನಾವಣೆಗಳಿಗೆ ಈಗಿನಿಂದಲೇ ಪಕ್ಷವನ್ನು ಬಲಪಡಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಬೇರು ಮಟ್ಟ ಮತ್ತು ಮೂಲ ಕಾರ್ಯಕರ್ತರತ್ತ ಗಮನ ಹರಿಸಿ ಅವರಿಗೆ ಶಕ್ತಿ ತುಂಬಲಾಗುತ್ತಿದೆ ಎಂದರು.

ಪ್ರತಿ ಹಳ್ಳಿಯಲ್ಲಿ ಪ್ರತಿ ವಾರ್ಡ್‌ನಲ್ಲಿ 25 ಜನ ಕಾರ್ಯಕರ್ತರನ್ನೊಳಗೊಂಡ ಬೂತ್‌ ಕಮಿಟಿ ಮತ್ತು ಕಮಿಟಿಗೆ ಒಬ್ಬ ಅಧ್ಯಕ್ಷರನ್ನು ನೇಮಿಸಲು ನಿರ್ಧರಿಸಲಾಗಿದೆ.
ಪ್ರತಿ ತಾಲೂಕಿನಲ್ಲಿ ಕಾರ್ಯಕಾರಿಣಿ ಸಮಿತಿ ಸ್ಥಾಪಿಸಲಾಗುತ್ತಿದೆ. ಈ ಸಮಿತಿಗೆ 102 ಜನ ಪ್ರಮುಖ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ಈಗಾಗಲೇ ಪ್ರತಿ ಜಿಲ್ಲೆಗೆ ಒಬ್ಬ ರಾಜ್ಯ ವೀಕ್ಷಕರನ್ನು ವರಿಷ್ಠರು ನೇಮಿಸಿದ್ದಾರೆ ಎಂದರು.

ಕಲಬುರಗಿ ಜಿಲ್ಲೆಗೆ ನನ್ನನ್ನು ಮತ್ತು ಐಲಿನ್‌ ಜಾನ್‌ ಮಠಪತಿ ಅವರನ್ನು ನೇಮಿಸಿದ್ದು, ಮಾ.21, 22 ಮತ್ತು 23ರಂದು ತಾಲೂಕುವಾರು ಕಾರ್ಯಕಾರಿಣಿ ಸಭೆಗಳನ್ನು ನಡೆಸಲಾಗಿದೆ. ಮುಂದೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯುಳ್ಳ ಅಭ್ಯರ್ಥಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

ಹಾಲಿ ಘಟಕ ವಿಸರ್ಜನೆ: ಪಕ್ಷದ ಶಕ್ತಿಯಾದ ಮೂಲ ಕಾರ್ಯಕರ್ತರಿಗೆ ಚುನಾವಣೆಯಲ್ಲಿ ಅವಕಾಶ ನೀಡಬೇಕೆಂಬ ಅಭಿಪ್ರಾಯವನ್ನು ವರಿಷ್ಠರೆದುರು ಮಂಡಿಸಲಾಗಿತ್ತು. ಇದಕ್ಕೆ ಹಿರಿಯ ವರಿಷ್ಠರಾದ ಎಚ್‌.ಡಿ. ದೇವೇಗೌಡ ಹಾಗೂ ಎಚ್‌.ಡಿ. ಕುಮಾರಸ್ವಾಮಿ ಸಮ್ಮತಿಸಿದ್ದಾರೆ. ಇದರ ಭಾಗವಾಗಿ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಹಾಲಿ ಘಟಕಗಳನ್ನು ವಿಸರ್ಜನೆ ಮಾಡಲಾಗಿದೆ. ಆದರೆ, ನೂತನ ಸಮಿತಿ ಆಯ್ಕೆಯಾಗುವವರೆಗೂ ಅಧ್ಯಕ್ಷರು, ಕಾರ್ಯದರ್ಶಿಗಳು ಉಸ್ತುವಾರಿಗಳಾಗಿ ಮುಂದುವರೆಯಲಿದ್ದಾರೆ ಎಂದು ಮಾಹಿತಿ ನೀಡಿದರು.

Advertisement

ಪಕ್ಷದ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಶಾಮರಾವ ಸೂರನ್‌, ಬೀದರ್‌ನ ವೀಕ್ಷಕ ನಾಸಿರ್‌ ಹುಸೇನ್‌ ಉಸ್ತಾದ್‌, ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಲೀಂ ಇನಾಮದಾರ, ಮುಖಂಡ ಶಂಕರ ಕಟ್ಟಿಸಂಗಾವಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next