Advertisement

ಕಲಬುರಗಿಯ ಸೇಡಂನಲ್ಲಿ 9 ಸೆಂ.ಮೀ. ಮಳೆ

02:17 PM Jun 20, 2017 | Team Udayavani |

ಬೆಂಗಳೂರು: ಸೋಮವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕರಾವಳಿ, ಉತ್ತರ ಒಳನಾಡು, ದಕ್ಷಿಣ ಒಳನಾಡು ಸೇರಿದಂತೆ ರಾಜ್ಯದ ಹಲವೆಡೆ ಸಾಧಾರಣ ಮಳೆಯಾಗಿದೆ. ಕಲಬುರಗಿ ಜಿಲ್ಲೆಯ ಸೇಡಂನಲ್ಲಿ ರಾಜ್ಯದಲ್ಲಿಯೇ ಅಧಿಕ 9 ಸೆಂ.ಮೀ.ಗಳಷ್ಟು ಮಳೆ ಸುರಿದಿದೆ. ಮಲೆನಾಡು ಭಾಗದಲ್ಲಿ ಕಳೆದ ಕೆಲವು
ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಬಳ್ಳಾರಿ, ಕೊಪ್ಪಳ ಹಾಗೂ ರಾಯಚೂರು ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ 227 ಕ್ಯುಸೆಕ್‌ಗಳಷ್ಟು ನೀರು ಹರಿದು ಬರುತ್ತಿದೆ.

Advertisement

ಮಹಾರಾಷ್ಟ್ರದ ಮಹಾಬಲೇಶ್ವರ, ಬೆಳಗಾವಿ ಜಿಲ್ಲೆ ಸೇರಿದಂತೆ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಸಾಧಾರಣ ಮಳೆ ಸುರಿಯುತ್ತಿದ್ದು, ಆಲಮಟ್ಟಿ ಜಲಾಶಯಕ್ಕೆ 1875 ಕ್ಯೂಸೆಕ್‌ ನೀರಿನ ಒಳಹರಿವಿದೆ. ಸೋಮವಾರ ಜಲಾಶಯದ ನೀರಿನ ಮಟ್ಟ 503.660 ಮೀ.(ಗರಿಷ್ಠ 519.6 ಮೀ.)ಗಳಿಗೆ ಏರಿದೆ.

ಇದೇ ವೇಳೆ, ದಕ್ಷಿಣ ಕನ್ನಡ, ಉಡುಪಿ, ಕೊಡಗಿನಲ್ಲಿ ಸಾಧಾರಣ ಮಳೆಯಾಗಿದೆ. ಮಳೆಯಿಂದಾಗಿ ರಾಯಚೂರು ನಗರದ ಟಿಪ್ಪು ಸುಲ್ತಾನ್‌ ರಸ್ತೆ ಬಳಿಯಲ್ಲಿರುವ ಕೋಟೆ ಪಕ್ಕದಲ್ಲಿ ಭೂಕುಸಿತ ಉಂಟಾಗಿದ್ದು, ಸ್ಥಳೀಯರಲ್ಲಿ ಆತಂತ
ಮೂಡಿಸಿದೆ. ತಿಮ್ಮಾಪುರ ಏತ ನೀರಾವರಿಯ ಮುಖ್ಯ ಕಾಲುವೆ ಒಡೆದು ಹೋಗಿದ್ದು, ಸುತ್ತಮುತ್ತಲ ಹೊಲಗಳಿಗೆ ನೀರು ನುಗ್ಗಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಸುರಿದ ಮಳೆಯ ನೀರಿನ ರಭಸಕ್ಕೆ ಸಿರವಾರ ಸಮೀಪದ ಕುರಕುಂದಿ ಗ್ರಾಮದ ನಾರಾಯಣಪುರ ಬಲದಂಡೆ ಕಾಲುವೆಯ 9ಎ ಸೇತುವೆ ಕೂಡ ಕೊಚ್ಚಿಕೊಂಡು ಹೋಗಿದ್ದು, ಹಟ್ಟಿ-ಸಿರವಾರ ಸಂಪರ್ಕ ಕಡಿತಗೊಂಡಿದೆ.

ಮುಂದಿನ 24 ತಾಸುಗಳಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆನೆಗೊಂದಿಯಲ್ಲಿ ಮಳೆಗಾಗಿ ಕಪ್ಪೆಗಳ ಮದುವೆ
ಗಂಗಾವತಿ:
ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ಸೋಮವಾರ ಕಪ್ಪೆಗಳ ಮದುವೆ ನಡೆಸಲಾಯಿತು. ಎರಡು ಕಪ್ಪೆಗಳಿಗೆ ಅಲಂಕಾರ ಮಾಡಿ ತುಂಗಭದ್ರಾ ನದಿಗೆ
ಪೂಜೆ ಸಲ್ಲಿಸಿ ಕಪ್ಪೆಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ತರಲಾಯಿತು. ಗ್ರಾಮದ ಆರಾಧ್ಯದೈವ
ಶ್ರೀರಂಗನಾಥ ಸ್ವಾಮಿಗೆ ಪೂಜೆ ಸಲ್ಲಿಸಿ ಚಿಂತಾಮಣಿ ರಸ್ತೆಯಲ್ಲಿ ಹಾಕಲಾಗಿದ್ದ ಹಂದರದಲ್ಲಿ ಕಪ್ಪೆಗಳ ಮದುವೆ
ನೆರವೇರಿಸಲಾಯಿತು. ನಂತರ ಗ್ರಾಮದ ಜನರಿಗೆ ಸಿಹಿಯೂಟ ಬಡಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next